ಬಹುಶಃ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಹಿಂದಿನ ಎಲ್ಲ ಚಿತ್ರಗಳನ್ನೂ ಮೀರಿಸುವಂತಾ ನಿರೀಕ್ಷೆ ಗರಿಗೆದರುತ್ತಿದೆ. ‘ಕೆಜಿಎಫ್ ಎನ್ನುವ ಸಿನಿಮಾ ಬರೀ ಟ್ರೈಲರಿನಿಂದಲೇ ಇಡೀ ಭಾರತೀಯ ಚಿತ್ರರಂಗವನ್ನು ಮಾತ್ರವಲ್ಲ, ಅದನ್ನು ಮೀರಿದ ಚಿತ್ರ ಪ್ರೇಮಿಗಳ ಮನಸ್ಸನ್ನು ಆವರಿಸಿಕೊಂಡುಬಿಟ್ಟಿದೆ. ಟ್ರೇಲರಿನ ಸೆಳೆತ ಇನ್ನೂ ಚಾಲ್ತಿಯಲ್ಲಿರುವಾಗಲೇ ಅದಕ್ಕೆ ಹಾಡಿನ ಹವಾ ಕೂಡಾ ಜೊತೆಯಾಗುತ್ತಿದೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜಾಗಿರುವ ಕೆಜಿಎಫ್ ಚಿತ್ರದ ‘ಸಲಾಂ ರಾಕಿಂಗ್ ಭಾಯ್ ಹಾಡು ಈಗ ಲೋಕಾರ್ಪಣೆಗೊಳ್ಳುತ್ತಿದೆ. ಇದು ಕೆ.ಜಿ.ಎಫ್ ಚಿತ್ರದ ಮೊದಲ ಹಾಡು. ಈ ತಿಂಗಳ ಇಪ್ಪತ್ತೊಂದಕ್ಕೆ ಸಿನಿಮಾ ತೆರೆಗೆ ಬರುತ್ತಿರುವುದರಿಂದ ನಿರಂತರವಾಗಿ ಜನರ ಎದೆಯಲ್ಲಿ ಕ್ಯೂರಿಯಾಸಿಟಿ ಕಾಯ್ದುಕೊಳ್ಳುವಂತೆ ಮಾಡುವುದು ಬಹುಶಃ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರತಂಡದ ಪ್ಲಾನಿರಬಹುದು. ಹೀಗಾಗಿಯೇ ಕಳೆದ ತಿಂಗಳು ಟ್ರೇಲರ್ ಬಿಟ್ಟು, ಈಗ ಮೊದಲ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಹೀಗೇ ಹಂತಹಂತವಾಗಿ ಹಾಡು, ಟ್ರೇಲರುಗಳ ಮೂಲಕ ಬಾಣ ಬಿಟ್ಟು ಪ್ರತಿಯೊಬ್ಬ ಸಿನಿಮಾಸಕ್ತರ ಗಮನ ಸೆಳೆಯುವ ಮತ್ತು ದಿನದಿಂದ ದಿನಕ್ಕೆ ಕುತೂಹಲವನ್ನು ಇಮ್ಮಡಿಗೊಳಿಸುವ ತಂತ್ರವನ್ನು ಕೆಜಿಎಫ್ ಚಿತ್ರತಂಡ ಅನುಸರಿಸುತ್ತಿದೆ.
ಸತತ ಮೂರ್ನಾಲ್ಕು ವರ್ಷಗಳ ಕಾಲ ಶ್ರಮವಹಿಸಿ ತಯಾರಿಸಿದ ಸಿನಿಮಾವೊಂದಕ್ಕೆ ಈ ಮಟ್ಟಿಗಿನ ಪ್ರಚಾರ ನಿಜಕ್ಕೂ ಅಗತ್ಯವಿದೆ. ಇಬ್ಬಿಬ್ಬರು ಹೀರೋಗಳನ್ನಿಟ್ಟುಕೊಂಡು ಚಿತ್ರ ಮಾಡುವ ಕೆಲ ಬೂಸಿ ನಿರ್ದೇಶಕರು ಕೇವಲ ಪ್ರಚಾರವನ್ನೇ ಬಂಡವಾಳವನ್ನಾಗಿಸಿಕೊಂಡು ಸಿನಿಮಾಗಳ ಕತ್ತು ಹಿಸುಕೋದು ಮಾತ್ರವಲ್ಲದೆ ನಾಯಕನಟರ ಇಮೇಜುಗಳನ್ನೂ ಯದ್ವಾತದ್ವಾ ಡ್ಯಾಮೇಜು ಮಾಡಿಬಿಡುತ್ತಾರೆ. ಇದು ಇತ್ತೀಚಿಗೆ ಹೆಚ್ಚುತ್ತಿರುವ ಕೆಟ್ಟ ಬೆಳವಣಿಗೆಯೂ ಹೌದು. ಇಂಥವರ ನಡುವೆ ನೋಡಿದ ಪ್ರತಿಯೊಬ್ಬರೂ ಹುಬ್ಬೇರಿಸಿ, ಟ್ರೇಲರ್ರೇ ಹೀಗಿದೆಯಲ್ಲಾ… ಮಿಕ್ಕ ಸಿನಿಮಾ ಇನ್ನೆಷ್ಟು ರಿಚ್ಚಾಗಿರಬಹುದು? ಅಂತಾ ಪ್ರಶ್ನಿಸುವಂತೆ ಮಾಡಿರುವ ಹೊಂಬಾಳೆ ಫಿಲಂಸ್ನ ನಿರ್ಮಾಪಕ ವಿಜಯ್ ಕಿರಗುಂದೂರು, ಕಾರ್ತಿಕ್ ಗೌಡ, ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ತಮ್ಮೆಲ್ಲಾ ಪ್ರತಿಭೆ, ಶ್ರಮವನ್ನು ಧಾರೆಯೆರೆದಿರುವ ನಟ ಯಶ್ ಪಾಲಿಗೆ ಕೆಜಿಎಫ್ ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಡಬೇಕಿದೆ.
#
No Comment! Be the first one.