ಕೆಜಿಎಫ್ ಚಿತ್ರದ ಅಗಾಧ ಯಶಸ್ಸು ಕನ್ನಡ ಚಿತ್ರರಂಗದ ದಿಕ್ಕುದೆಸೆಯನ್ನೇ ಬದಲಾಯಿಸಿದೆ. ಇದರ ಜೊತೆ ಜೊತೆಗೇ ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ಅಣ್ತಮ್ಮನ ವರಸೆ, ಟೈಂಟೇಬಲ್, ಪ್ಲ್ಯಾನುಗಳೆಲ್ಲವೂ ಬದಲಾಗಿ ಹೋಗಿದೆ! ಕೆಜಿಎಫ್ ಚಿತ್ರದ ಜೊತೆಜೊತೆಗೇ ಸದ್ದು ಮಾಡಿದ್ದ ಹೊಸಾ ಸಿನಿಮಾಗಳೆಲ್ಲವೂ ಒಂದೊಂದಾಗಿ ಉಸಿರು ಚೆಲ್ಲುತ್ತಿವೆ. ಮೈ ನೇಮ್ ಈಸ್ ಕಿರಾತಕ ಕೆಜಿಎಫ್ ಯಶಸ್ಸಿಗೆ ಬಲಿಯಾದ ಮೊದಲ ಸಿನಿಮಾ. ಎರಡನೆಯದ್ದು ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ ರಾಣಾ!
ಕಳೆದೆ ವರ್ಷ ಯಶ್ ಬರ್ತಡೇ ಹೊತ್ತಿಗೆಲ್ಲ ರಾಣಾ ಚಿತ್ರ ದೊಡ್ಡ ಮಟ್ಟದಲ್ಲಿಯೇ ಸೌಂಡು ಮಾಡಿತ್ತು. ಖದರ್ ಹೊಂದಿರೋ ಈ ಟೈಟಲ್ಲಿನಲ್ಲಿ ಯಶ್ ಮತ್ತೊಂದು ಗೆಲುವಿನ ರೂವಾರಿಯಾಗಲಿದ್ದಾರೆ ಅನ್ನೋ ಮಾತೂ ಕೇಳಿ ಬಂದಿತ್ತು. ಆದರೆ ಆ ಬಳಿಕ ಕೆಜಿಎಫ್ ಬಿಡುಗಡೆಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದೇ ಅಣ್ತಮ್ಮನ ವರಸೆ ಖುಲ್ಲಂಖುಲ್ಲ ಬದಲಾಗಿ ಬಿಟ್ಟಿದೆ.
ಮೈ ನೇಮ್ ಈಸ್ ಕಿರಾತ ಚಿತ್ರದಲ್ಲಿ ಯಶ್ ನಟಿಸೋದಿಲ್ಲ ಅನ್ನೋದು ಖಾತರಿಯಾದ ಬೆನ್ನಿಗೇ ರಾಣ ಚಿತ್ರದಿಂದಲೂ ಅವರು ದೂರ ಸರಿದಿರೋ ಸುದ್ದಿ ಹರಿದಾಡುತ್ತಿದೆ. ಒಂದು ಮೂಲದ ಪ್ರಕಾರ ಯಶ್ ನಡೆಯ ಸೂಚನೆ ಸಿಗುತ್ತಲೇ ನಿರ್ದೇಶಕ ಹರ್ಷ ಬೇರೆ ನೀಲನಕ್ಷೆ ರೆಡಿ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಾಗಿ ರಾಣಾ ಚಿತ್ರವನ್ನ ಮಾಡಲು ತಯಾರಾಗಿದ್ದಾರೆಂಬ ಸುದ್ದಿಯಿದೆ. ಈ ಬಗ್ಗೆ ಈಗಿನ್ನೂ ಮಾತುಕತೆ ಚಾಲ್ತಿಯಲ್ಲಿದೆ. ಅಧಿಕೃತ ಸುದ್ದಿ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ. ಆದರೆ ಕೆಜಿಎಫ್ ಗೆಲುವು ತಂದುಕೊಟ್ಟ ಜೋಶ್ ನಲ್ಲಿ ಹಳೇ ಕಮಿಟ್ಮೆಂಟುಗಳನ್ನ ಕ್ಯಾನ್ಸಲ್ ಮಾಡುತ್ತಿರೋ ಯಶ್ ಬಗ್ಗೆ ಅಸಮಾಧಾನ ಒಳಗೊಳಗೇ ಹಬೆಯಾಡುತ್ತಿರೋದಂತೂ ಸತ್ಯ!
#
No Comment! Be the first one.