ನಟ ಯತಿರಾಜ್ ಗೊತ್ತಲ್ಲ… ಇವರನ್ನು ಸುದೀಪ್ ಅವರ ಬಹುತೇಕ ಚಿತ್ರಗಳಲ್ಲಿ ನೋಡಿರುತ್ತೀರಿ. ಯತಿರಾಜ್ ಸಿನಿಮಾಗಳಲ್ಲಿ ನಟಿಸುತ್ತಲೇ ಪತ್ರಕರ್ತರಾಗಿಯೂ ಗುರುತಿಸಿಕೊಂಡವರು.
ಶಿವರಾಜ್ ಕುಮಾರ್ ಅವರ ಆದಿತ್ಯ ಚಿತ್ರದ ಮೂಲಕ ಮುಖಕ್ಕೆ ಬಣ್ಣ ಹಚ್ಚಿದ ಯತಿ ಈ ಹೊತ್ತಿಗೆ ನೂರೈವತ್ತರ ಗಡಿ ದಾಟಿರಬಹುದು. ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಯತಿಗೆ ಮೈ ಆಟೋಗ್ರಾಫ್, ದಂಡುಪಾಳ್ಯ ಮುಂತಾದ ಚಿತ್ರಗಳು ಸಾಕಷ್ಟು ಹೆಸರು ತಂದುಕೊಟ್ಟಿದ್ದವು. ಎನ್. ರಾಘವನ್ ನಿರ್ದೇಶನದ ಕಡಂಬನ್ ಸಿನಿಮಾದ ಮೂಲಕ ತಮಿಳು ಚಿತ್ರಕ್ಕೂ ಕಾಲಿಟ್ಟಿದ್ದರು. ಫೇರ್ ಅಂಡ್ ಲವ್ಲಿ ಸಿನಿಮಾಗೆ ಕಥೆ ಬರೆದಿದ್ದ ಯತಿರಾಜ್ ಪೂರ್ಣ ಸತ್ಯ ಎನ್ನುವ ಸಿನಿಮಾದೊಂದಿಗೆ ಡೈರೆಕ್ಟ್ ಕ್ಯಾಪ್ ತೊಟ್ಟಿದ್ದೂ ಆಯಿತು.
ಯತಿರಾಜ್ ಪ್ರತಿಭಾವಂತ. ಇವರ ಕಲ್ಪನೆಗೆ ತಕ್ಕಂತೆ ಹಣ ಹೂಡುವ ನಿರ್ಮಾಪಕರು ಸಿಕ್ಕಿದ್ದಿದ್ದರೆ ಈ ಹೊತ್ತಿಗೆ ಕನ್ನಡದ ದೊಡ್ಡ ನಿರ್ದೇಶಕನಾಗಿ ಬೆಳೆಯುವ ಸಾಧ್ಯತೆ ಇತ್ತು. ಇತ್ತ ನಟನಾಗಿ ಕೆಲಸ ಮಾಡಿಕೊಂಡು, ಪತ್ರಕರ್ತ, ನಿರೂಪಕನಾಗಿಯೂ ಗುರುತಿಸಿಕೊಂಡಿರೋದೇ ಬಹುಶಃ ಶಾಪದಂತಾಗಿ ಬಂದ ಅನೇಕ ಅವಕಾಶಗಳು ಕೈಬಿಟ್ಟು ಹೋಗಿದ್ದೂ ನಿಜ. ಸಿನಿಮಾ ಪತ್ರಕರ್ತ ಅನ್ನಿಸಿಕೊಂಡ ಅನೇಕರ ನಸೀಬೇ ಹೀಗೆ. ಮೊದಲೇ ಮಾಧ್ಯಮದವರು ಇವರೊಂದಿಗೆ ಹೇಗೆ ವ್ಯವಹರಿಸುವುದು ಎನ್ನುವ ವಿಲಕ್ಷಣ ಭಯದಿಂದ ಅನೇಕ ನಿರ್ಮಾಪಕರು ಕಾಸು ಹಾಕಲು ಹಿಂದೇಟು ಹಾಕಿಬಿಡುತ್ತಾರೆ.
ಇವೆಲ್ಲ ಏನೇ ಆಗಲಿ, ಇತ್ತೀಚೆಗೆ ತಮ್ಮದೇ ಕಲಾವಿದ ಎನ್ನುವ ನಟನಾ ಶಾಲೆಯನ್ನೂ ನಡೆಸಿಕೊಂಡು, ಜೊತೆ ಜೊತೆಗೆ ಕಿರು ಚಿತ್ರಗಳನ್ನು ರೂಪಿಸುತ್ತಾ ಕೊರೋನಾದ ದುರಿತ ಕಾಲದಲ್ಲೂ ಕ್ರಿಯಾಶೀಲರಾಗಿರುವ ಯತಿರಾಜ್ ಗೆ ಇವತ್ತು ಹುಟ್ಟಿದ ದಿನದ ಸಂಭ್ರಮ.
ಪತ್ರಿಕೋದ್ಯಮ ಮತ್ತು ಸಿನಿಮಾರಂಗದಲ್ಲಿ ಎಲ್ಲರೊಂದಿಗೂ ಸ್ನೇಹಯುತವಾಗಿ ಬೆರೆಯುವ ಯತಿರಾಜ್ʼಗೆ ಆಳೆತ್ತರದ ಮಗನಿದ್ದಾನೆ. ತೀರಾ ಚಿಕ್ಕ ವಯಸ್ಸಿಗೆ ಮದುವೆಯಾಗಿ, ಮಗ ಬೆಳೆದದ್ದರಿಂದಲೋ ಏನೋ ನೋಡಿದವರು ʻನಿಮ್ಮ ತಮ್ಮಾನಾʼ ಅಂತಾ ಕೇಳುವಂತಾಗಿದೆ. ಜೊತೆಗೆ ಯತಿ ವಯಸ್ಸಾದಂತೆಲ್ಲಾ ಯುವಕನಾಗುತ್ತಿದ್ದಾರೆ. ಲಾಭ ನಷ್ಟದ ಹೊರತಾಗಿ ಸದಾ ಲವಲವಿಕೆಯಿಂದ ಓಡಾಡುವ ಕಾರಣಕ್ಕೇ ಇದು ಸಾಧ್ಯವಾಗಿರಬಹುದು. ಯತಿಯ ಈ ಚುರುಕುತನ ಹೀಗೇ ಇರಲಿ ಯಾವತ್ತಿಗೂ.. ಹ್ಯಾಪಿ ಬರ್ತಡೇ ಬ್ರದರು….
No Comment! Be the first one.