ಭಿನ್ನವಾದ ಆಲೋಚನಾ ಕ್ರಮ, ಕ್ರಿಯೇಟಿವಿಟಿಗಳಿಂದಲೇ ಗಮನ ಸೆಳೆಯುವವರು ನಿರ್ದೇಶಕ ಯೋಗರಾಜ ಭಟ್. ಇದೀಗ ಅವರು ಅಷ್ಟೇ ವಿಶಿಷ್ಟವಾದ ರೀತಿಯಲ್ಲಿ, ಒಂದು ಮಹಾ ಪಿಡುಗಿನ ವಿರುದ್ಧ ಹೆಣ್ಮಕ್ಕಳನ್ನು ಪಾರು ಮಾಡುವ ಕಳಕಳಿಯೊಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ. ಪಂಚತಂತ್ರ ಚಿತ್ರದ ಕಡೆಯಿಂದ ಇಂಥಾದ್ದೊಂದು ಸಂದೇಶ ರವಾನಿಸಿರುವ ಅವರು ಡಿಜಿಟಲ್ ಅಬ್ಯೂಸ್ ವಿರುದ್ಧ ತಣ್ಣಗೆ ಸಮರ ಸಾರಿದ್ದಾರೆ. ಈ ಮೂಲಕ ಡಿಜಿಟಲ್ ವಿಕೃತರಿಂದ ಮಾನಸಿಕ ಕಿರಿಕಿರಿಗೀಡಾಗಿರುವ ಲಕ್ಷಾಂತರ ಹೆಣ್ಣುಮಕ್ಕಳಿಗೆ ಧೈರ್ಯ ತುಂಬೋ ಕೆಲಸವನ್ನೂ ಮಾಡಿದ್ದಾರೆ.
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಈ ಬಗ್ಗೆ ವಿಸ್ತಾರವಾದೊಂದು ಅಧ್ಯಯನ, ಅಂಕಿ ಅಂಶಗಳ ಸಮೇತ ಯೋಗರಾಜ ಭಟ್ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಇಂಥಾ ವಿಕೃತಿಗಳಿಂದ ಕಂಗಾಲಾಗಿರೋ ಹೆಂಗಳೆಯರಿಗೆ ಭರವಸೆ ಮೂಡಿಸಿದ್ದಾರೆ.
https://www.facebook.com/yogarajbhatofficial/videos/663988190649909/
ವ್ಯೂಮ ಕ್ರಿಯೇಷನ್ಸ್ ಡಿಜಿಟಲ್ ಅಬ್ಯೂಸ್ ಬಗ್ಗೆ ಸವಿಸ್ತಾರವಾದೊಂದು ಸರ್ವೆ ನಡೆಸಿದೆ. ಇದರಿಂದಾಗಿಯೇ ಬೆಚ್ಚಿ ಬೀಳಿಸುವಂಥಾ ಒಂದಷ್ಟು ಸಂಗತಿಗಳು ಜಾಹೀರಾಗಿವೆ. ಇದರ ಪ್ರಕಾರವಾಗಿ ಕರ್ನಾಟಕದಲ್ಲಿ ಇಂಟರ್ನೆಟ್ಟಿಗೆ ನೇತು ಬಿದ್ದಿರುವವರ ಸಂಖ್ಯೆ ಮೂರುಕೋಟಿ ಇಪ್ಪತ್ತು ಲಕ್ಷ ಚಿಲ್ಲರೆ. ಅದರಲ್ಲಿ ಹೆಣ್ಣುಮಕ್ಕಳು, ಮಹಿಳೆಯರ ಸಂಖ್ಯೆ ಹತ್ತತ್ತರಿರ ಒಂದು ಕೋಟಿಯಷ್ಟಿದೆ. ಈ ಒಂದು ಕೋಟಿ ಹೆಣ್ಣುಮಕ್ಕಳಿಗೆ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಎರಡು ಕೋಟಿಯಷ್ಟಿರೋ ಗಂದುಕುಲದ ಒಂದಷ್ಟು ಮಂದಿ ಅಟಕಾಯಿಸಿಕೊಂಡಿದ್ದಾರೆ.
ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ. ಇಂಥಾ ಕಾಮುಕರ ಕಾಟದಿಂದ ರೋಸತ್ತು ಹೋಗಿ ಮಾನಸಿಕ ನೆಮ್ಮದಿ ಕಳೆದುಕೊಂಡಿರೋ ಹೆಂಗಳೆಯರ ಸಂಖ್ಯೆ ಅರವತ್ತು ಲಕ್ಷಕ್ಕೂ ಅಧಿಕವಿದೆ!
ಇವಿಷ್ಟು ಪಕ್ಕಾ ಅಂಕಿ ಅಂಶಗಳನ್ನು ತೆರೆದಿಟ್ಟಿರುವ ಯೋಗರಾಜಭಟ್ ಹಾಗೆ ಸಂಕಷ್ಟಕ್ಕೀಡಾದ ಹೆಂಗಳೆಯರಿಗೆ ಕೆಲ ರಿಲೀಫು ನೀಡುವಂಥಾ ಮಾತುಗಳನ್ನಾಡಿದ್ದಾರೆ. ಇಂಥದ್ದರ ಬಗ್ಗೆ ಧೈರ್ಯ ಲಕ್ಷ್ಮಿಯರಂತೆ ವರ್ತಿಸಿ. ಯಾವ ಕಾರಣಕ್ಕೂ ಈ ಥರದ ಕ್ರಿಮಿಗಳ ಕಾಟಕ್ಕೆ ಸಿಕ್ಕಿ ಮಾನಸಿಕವಾಗಿ ಜರ್ಜರಿತರಾಗಬೇಡಿ. ಅದೆಂಥಾದ್ದೇ ಸಮಸ್ಯೆ ಇದ್ದರೂ ಹೆತ್ತವರ ಬಳಿ ಹೇಳಿಕೊಳ್ಳಿ. ಇಲ್ಲದಿದ್ದರೆ ನೀವೇ ಸಂಕಷ್ಟಕ್ಕೆ ಸಿಕ್ಕಬೇಕಾಗುತ್ತದೆ. ಈ ರೀತಿಯಾಗಿ ಯಾರಾದರೂ ಸಾಮಾಜಿಕ ಜಾಲ ತಾಣಗಳ ಮೂಲಕ ಕಾಟ ಕೊಡುತ್ತಿದ್ದರೆ ಮಾನ ಮರ್ಯಾದೆ ಹೋಗುತ್ತದೆ ಅಂತ ಹೆದರಬೇಡಿ. ಅಂಥಾ ಕಾಮುಕರನ್ನು ಮಟ್ಟ ಹಾಕಲೆಂದೇ ಸೈಬರ್ ಕ್ರೈಂ ವಿಭಾಗವಿದೆ. ಅಲ್ಲಿ ಧೈರ್ಯವಾಗಿ ದೂರು ದಾಖಲಿಸಿದರೆ ಖಂಡಿತಾ ಎಲ್ಲ ಪರಿಹಾರವಾಗುತ್ತದೆ ಎಂಬುದು ಯೋಗರಾಜ ಭಟ್ಟರ ಮಾತಿನ ಸಾರಾಂಶ.
ಇದೇ ಹೊತ್ತಿನಲ್ಲಿ ಪೋಷಕರಿಗೂ ತಿಳಿ ಹೇಳುವ ಕೆಲಸವನ್ನು ಭಟ್ಟರು ಮಾಡಿದ್ದಾರೆ. ವಯಸಿಗೆ ಬಂದ ಮಕ್ಕಳು ಇಂಥಾದ್ದನ್ನು ಹೇಳಿಕೊಂಡಾಗ ಅವರ ಮೇಲೆ ನೂರು ಆರೋಪ ಹೊರಿಸಿ ಮಾನಸಿಕವಾಗಿ ಮತ್ತಷ್ಟು ನೋಯುವಂತೆ ಮಾಡಬೇಡಿ. ಅವುಗಳಿಗೆ ಇಂಥಾದ್ದರ ಬಗ್ಗೆ ಗೊತ್ತಿರೋದಿಲ್ಲ. ತಮ್ಮದೇ ಸ್ನೇಹ ವಲಯವನ್ನು ಅವು ಸೃಷ್ಟಿಸಿಕೊಂಡಿರುತ್ತವೆ. ಅದರ ಮಧ್ಯೆ ಯಾರೋ ಕ್ರಿಮಿಗಳು ಹುಟ್ಟಿಕೊಂಡು ಕಾಟ ಕೊಟ್ಟರೆ ಅವರೇನು ಮಾಡುತ್ತಾರೆ? ಇದನ್ನು ಅರ್ಥ ಮಾಡಿಕೊಂಡು ಮುಂದುವರೆಯುವಂತೆ ಭಟ್ಟರು ತಿಳಿ ಹೇಳಿದ್ದಾರೆ.
ಇದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಇಂಥಾ ಕಾಟ ಹೆಚ್ಚಾದರೆ ಗಟ್ಟಿ ಮನಸು ಮಾಡಿ ಆ ಕೊಚ್ಚೆಯಿಂದ ಹೊರ ಬರುವಂತೆ ಸಲಹೆ ನೀಡಿರೋ ಭಟ್ಟರು ಈ ಮೂಲಕವೇ ಮೊನ್ನೆ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯ ಹೇಳಿ ಡಿಜಿಟಲ್ ಲೋಕ ಹೊಕ್ಕ ಹೆಂಗಳೆಯರೆಲ್ಲ ಧೈರ್ಯ ಲಕ್ಷ್ಮಿಯರಾಗಿರುವಂತೆ ಕರೆ ನೀಡಿದ್ದಾರೆ. ಇದು ಈ ಹೊತ್ತಿನ ತುರ್ತೂ ಹೌದು. ಫೇಸ್ಬುಕ್ ನಂಥಾ ಸಾಮಾಜಿಕ ಜಾಲತಾಣಗಳ ಮೂಲಕ ಹೆಣ್ಣುಮಕ್ಕಳಿಗಾಗುತ್ತಿರೋ ಹಿಂಸೆಗಳು ಒಂದೆರಡಲ್ಲ. ಹಲವಾರು ಅಪರಾಧಗಳಿಂದು ಈ ವಲಯಕ್ಕೆ ಶಿಫ್ಟ್ ಆಗಿವೆ. ತೀರಾ ಹೆಣ್ಣುಮಕ್ಕಳ ಪ್ರೊಫೈಲ್ ಫೋಟೋಗಳನ್ನೂ ಥರ್ಡ್ಕ್ಲಾಸ್ ಅಕೌಟುಗಳಲ್ಲಿ ಶೇರ್ ಮಾಡೋ ಮೂಲಕ ಬೇರೆ ರೀತಿಯಲ್ಲಿ ಬಿಂಬಿಸಿ ಕಾಡುವ ಕೆಟ್ಟ ಹುಳುಗಳೂ ಇಲ್ಲಿವೆ. ಭಟ್ಟರ ಮಾತಿನಂತೆ ಹೆಣ್ಣುಮಕ್ಕಳೆಲ್ಲ ಈ ಬಗ್ಗೆ ಎಚ್ಚರದಿಂದ ವರ್ತಿಸಬೇಕಿದೆ.
#
No Comment! Be the first one.