ನಿರ್ದೇಶಕ ಯೋಗರಾಜ್ ಭಟ್ ಪಂಚತಂತ್ರದ ಬೆನ್ನಿಗೇ ಮತ್ತೊಂದು ಚಿತ್ರಕ್ಕೆ ರೆಡಿಯಾಗಿ ಬಿಟ್ಟಿದ್ದಾರೆ. ಅವರು ಗಾಳಿಪಟ ೨ ಎಂಬ ಸಿನಿಮಾ ಮಾಡ್ತಾರೆಂಬ ಬಗ್ಗೆ ಒಂದಷ್ಟು ಕಾಲದಿಂದ ಹರಡಿಕೊಂಡಿದ್ದ ಸುದ್ದಿಯೀಗ ನಿಜವಾಗಿದೆ. ಭಟ್ಟರ ಮತ್ತೊಂದು ಗಾಳಿಪಟದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.
ಆಕರ್ಷಕವಾಗಿರೋ ಈ ಪೋಸ್ಟರ್ ಮೂಲಕವೇ ಗಾಳಿಪಟ ೨ ಚಿತ್ರ ಪ್ರೇಕ್ಷಕರಿಗೆ ಹತ್ತಿರಾಗಿದೆ. ಆದರೆ ಕಲಾವಿದರ ಪಟ್ಟಿ ಮಾತ್ರ ಇನ್ನೂ ಜಾಹೀರಾಗೋದು ಬಾಕಿ ಇದೆ. ಈ ಹಿಂದೆ ಗಾಳಿಪಟ ಚಿತ್ರದಲ್ಲಿ ಗಣೇಶ್, ರಾಜೇಶ್ ಕೃಷ್ಣನ್ ಮತ್ತು ದಿಗಂತ್ ನಾಯಕರಾಗಿ ನಟಿಸಿದ್ದರು. ಇವರೆಲ್ಲ ಪ್ರೇಕ್ಷಕರಿಗೆ ಮೋಡಿಯನ್ನೂ ಮಾಡಿದ್ದರು. ಗಾಳಿಪಟ ೨ ಚಿತ್ರದಲ್ಲಿಯೂ ಮೂರು ಮಂದಿ ನಾಯಕರಿರುತ್ತಾರಾ ಎಂಬ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.
ಗಾಳಿಪಟ ೨ ಚಿತ್ರದಲ್ಲಿಯೂ ಶರಣ್, ರಿಶಿ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಲಿದ್ದಾರೆ. ಭಟ್ಟರು ಈ ಚಿತ್ರದ ಕಥೆಯನ್ನೂ ಕೂಡಾ ಬೇರೆಯದ್ದೇ ರೀತಿಯಲ್ಲಿ ಸೃಷ್ಟಿಸಿದ್ದಾರೆಂಬ ಸುದ್ದಿಯೂ ಇದೆ. ಮಾಮೂಲಿಯಂತೆ ಕಾಮಿಡಿಗೇ ಹೆಚ್ಚು ಒತ್ತು ಕೊಡಲಾಗಿದೆಯಂತೆ.ಗಾಳಿಪಟ ಚಿತ್ರದ ಮೂಲಕ ಯೋಗರಾಜ ಭಟ್ ಫ್ರೆಶ್ ಆದೊಂದು ಕಥೆಯನ್ನು ಅದಕ್ಕೆ ಪೂರಕವಾದ ದೃಷ್ಯಾವಳಿಗಳ ಮೂಲಕ ಮಜವಾಗಿಯೇ ಹೇಳಿದ್ದರು. ಅದು ಯಶಸ್ಸನ್ನೂ ಪಡೆದುಕೊಂಡಿದ್ದೀಗ ಇತಿಹಾಸ. ಗಾಳಿ ಪಟದಲ್ಲಿನ ಹಸಿರಸಿರು ಸನ್ನಿವೇಶಗಳು, ಕೀಟಲೆ, ಭಾವುಕತೆಗಳನ್ನೆಲ್ಲ ಜನ ಈವತ್ತಿಗೂ ಮನಸಲ್ಲಿ ತುಂಬಿಕೊಂಡಿದ್ದಾರೆ. ಹಾಗಿರೋವಾಗ ಗಾಳಿಪಟ ೨ ಚಿತ್ರದ ಬಗ್ಗೆಯೂ ಸಹಜವಾಗಿಯೇ ಕುತೂಹಲಗಳಿದ್ದಾವೆ.
#