ಕನ್ನಡದ ಕ್ರಿಯಾಶೀಲ ನಿರ್ದೇಶಕ ಯೋಗರಾಜ್ ಭಟ್ಟರು ಹಿಂದಿ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿಯೊಂದು ವರ್ಷಗಳ ಹಿಂದೆ ಹರಿದಾಡಿತ್ತು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟು ಕ್ಯಾನ್ಸಲ್ ಕೂಡಾ ಆಗಿತ್ತು. ಆದರೀಗ ಯೋಗರಾಜ ಭಟ್ ಬಾಲಿವುಡ್ನತ್ತ ಹೊರಟಿದ್ದಾರೆ. ಈ ಬಾರಿ ಅವರ ಬಾಲಿವುಡ್ ಎಂಟ್ರಿಗೆ ಯಾವ ವಿಘ್ನಗಳೆದುರಾಗೋ ಸಾಧ್ಯತೆಯಿಲ್ಲ.
ಯಾಕೆಂದರೆ, ಭಟ್ಟರು ಬಾಲಿವುಡ್ನತ್ತ ಹೊರಟಿರೋದು ತಮ್ಮದೇ ಪಂಚತಂತ್ರ ಚಿತ್ರದ ಜೊತೆಗೆ. ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಪಂಚತಂತ್ರ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ. ವಿಶೇಷವೆಂದರೆ, ಪಂಚತಂತ್ರ ಚಿತ್ರವೀಗ ತೆಲುಗು ಮತ್ತು ಹಿಂದಿ ಭಾಷೆಗಳಿಗೆ ರೀಮೇಕ್ ಆಗುತ್ತಿದೆ. ಈ ಎರಡೂ ಭಾಷೆಗಳಲ್ಲಿಯೂ ಯೋಗರಾಜ್ ಭಟ್ಟರೇ ನಿರ್ದೇಶನ ಮಾಡಲಿದ್ದಾರಂತೆ.
ಈ ವಿಚಾರವನ್ನು ಖುದ್ದು ಭಟ್ಟರೇ ಸ್ಪಷ್ಟಪಡಿಸಿದ್ದಾರೆ. ತೆಲುಗಿನಲ್ಲಿಯಂತೂ ಪಂಚತಂತ್ರ ರೀಮೇಕ್ನ ಶೀರ್ಷಿಕೆಯೇ ಆಕರ್ಷಕವಾಗಿದೆ. ಆಂಧ್ರ ವರ್ಸಸ್ ತೆಲಂಗಾಣ ಎಂಬ ಶೀರ್ಷಿಕೆಯಡಿಯಲ್ಲಿ ಪಂಚತಂತ್ರ ತೆಲುಗರನ್ನು ಮುಖಾಮುಖಿಯಾಗಲಿದೆ. ಇನ್ನು ಹಿಂದಿ ಅವತರಣಿಕೆಯ ಶೀರ್ಷಿಕೆ ಇನ್ನಷ್ಟೇ ಜಾಹೀರಾಗಬೇಕಿದೆ. ಆದರೆ ಎರಡೂ ಭಾಷೆಗಳಲ್ಲಿಯೂ ಭರ್ಜರಿಯಾಗಿಯೇ ತಯಾರಾಗಲಿರೋದಂತೂ ನಿಜ.
ತೆಲುಗು ಮತ್ತು ಹಿಂದಿ ಭಾಷೆಗಳೆರಡರಲ್ಲಿಯೂ ಈ ಚಿತ್ರ ಅದ್ದೂರಿ ತಾರಾಗಣದೊಂದಿಗೇ ಮೂಡಿ ಬರಲಿದೆಯಂತೆ. ಆದರೆ ಯಾರ್ಯಾರು ನಟಿಸಲಿದ್ದಾರೆಂಬುದನ್ನು ಮಾತ್ರ ಯೋಗರಾಜ್ ಭಟ್ ಗೌಪ್ಯವಾಗಿಟ್ಟಿದ್ದಾರೆ.