ರಾಘು ಮೇಲೆ ಇನ್ನೂ ಏನೇನು ಆರೋಪ ಬರತ್ತೋ?

ಇನ್ನೈದು ನಿಮಿಷದಲ್ಲಿ ಫೋನ್ ಎತ್ತಲಿಲ್ಲ ಎಂದರೆ ಗ್ರಹಚಾರ ಬಿಡಿಸುತ್ತೀನಿ ಮಗನೆ ಎಂದು ವಾರ್ನಿಂಗ್ ಕೊಟ್ಟೇ ಚಳಿ ಬಿಡಿಸಿದ್ದಾರೆ ಯೋಗರಾಜ್ ಭಟ್. ಅವರು ಜ಼ಡ್ ಕನ್ನಡದ ರಾಘು ಕುಣಸೂರು ಅವರಿಗೆ ಕಳೆದ 20 ದಿನಗಳಿಂದ ಫೋನ್ ಮಾಡುತ್ತಿದ್ದರಂತೆ. ರಾಘು ಎಂದಿನಂತೆ ನಾಟ್ ರೀಚಬಲ್. ಯಾವಾಗ ಅಷ್ಟು ದಿನವಾದರೂ ಫೋನ್ ಎತ್ತಲಿಲ್ಲವೋ, ಆಗ ಭಟ್ಟರ ತಲೆ ಕೆಟ್ಟಿದೆ. ತಲೆ ಕೆಟ್ಟ ಭಟ್ಟ ಯಬುಡಾ ತಬುಡಾ ಎಂದು ಅವರೇ ಬರೆದುಕೊಂಡಂತೆ, ಅವರೇ ರಾಘುಗೆ ಇನ್ನೊಂದು ವಾಯ್ಸ್ ರೆಕಾರ್ಡ್ ಬಿಟ್ಟಿದ್ದಾರೆ. ಅದರಲ್ಲಿ ಹಿಗ್ಗಾಮುಗ್ಗಾ ಬೈದು, ಇನ್ಯಾವತ್ತೂ ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಅಲ್ಲಿಗೆ ಅವರು ಜ಼ಡ್ ಕನ್ನಡ ಮತ್ತು  ರಾಘು ಕುಣಸೂರು ಜೊತೆಗೆ ಸಂಬಂಧ ಕಡಿದುಕೊಂಡರಾ? ಇನ್ನು ಮುಂದೆ ಅವರು ಜ಼ಡ್ ಕನ್ನಡದಲ್ಲಿ ಪ್ರಸಾರವಾಗುವ ರಿಯಾಲಿಟಿ ಕಾರ್ಯಕ್ರಮಗಳಿಂದ ದೂರ ಇರುತ್ತಾರಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಈ ಕೆಲಸ ಯಾವತ್ತೋ ಆಗಬೇಕಿತ್ತು ಮತ್ತು ರಾಘುಗೆ ಗ್ರಹಚಾರ ಬಿಡಿಸುವ ಅವಶ್ಯಕತೆ ಇತ್ತು ಎಂದು ಚಿತ್ರರಂಗದವರಷ್ಟೇ ಅಲ್ಲ, ಸ್ವತಃ ಜ಼ಡ್ ಕನ್ನಡದವರು ಸಹಾ ಮಾತಾಡಿಕೊಳ್ಳುತ್ತಿದ್ದಾರೆ.. ಅದು ಸ್ವಲ್ಪ ತಡವಾಗಿದೆ ಅಷ್ಟೇ. ಪರಮ ದುರಹಂಕಾರಿ ಎಂದು ಕುಖ್ಯಾತಿ ಗಳಿಸಿರುವ  ರಾಘು ಕುಣಸೂರು, ಚಿತ್ರರಂಗದವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಚಿತ್ರರಂಗದಲ್ಲಿರುವವರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಅದು ಹೊರಜಗತ್ತಿಗೆ ಗೊತ್ತಿರಲಿಲ್ಲ ಅಷ್ಟೇ. ಈಗ ಯೋಗರಾಜ್ ಭಟ್ ಅವರ ವಾಯ್ಸ್ ರೆಕಾರ್ಡಿನಿಂದ ಅದು ಹೊರಬಂದಿದೆ ಅಷ್ಟೇ.

ಜ಼ಡ್ ಕನ್ನಡದ ರಾಘು ಅದೆಷ್ಟೇ ಪ್ರತಿಭಾವಂತರಾದರೂ, ಭಯಂಕರ ಅಹಂ ಅನ್ನೋ ಮಾತಿದೆ. ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳ ವಿಷಯದಲ್ಲಿ ಅವರು ಚಿತ್ರರಂಗದವರನ್ನು ಆಟ ಆಡಿಸುವುದು, ತಮಗೆ ಸೂಕ್ತ ಕಮಿಷನ್ ಕೊಡುವವರೆಗೂ ಹಕ್ಕುಗಳನ್ನು ಖರೀದಿಸದೆ ಸತಾಯಿಸುವುದು, ಫೋನ್ ಮಾಡಿದಾಗ ಪ್ರತಿಕ್ರಿಯೆ ನೀಡದಿರುವುದು … ಇವೆಲ್ಲವೂ ಕೆಲವು ವರ್ಷಗಳಿಂದ ನಡೆದೇ ಇದೆ. ಇದೇ ಕಾರಣಕ್ಕೆ ಜ಼ಡ್ ಕನ್ನಡದಿಂದ ಒಬ್ಬೊಬ್ಬರೇ ನಟ-ನಟಿಯರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ವಿಜಯ್ ರಾಘವೇಂದ್ರಗೆ ಒಂದು ಸೀರಿಯಲ್ ನಿರ್ಮಿಸುವ ಅವಕಾಶ ಕೊಡುವುದಾಗಿ ಪ್ರಾಮಿಸ್ ಮಾಡಿದ್ದ ರಾಘು, ಕ್ರಮೇಣ ತಮ್ಮ ಪ್ರಾಮಿಸ್ನಿಂದ ಹಿಂದೆ ಸರಿದರು. ಒಂದಿಷ್ಟು ಲಕ್ಷ ಖರ್ಚು ಮಾಡಿ ನೊಂದಿದ್ದ ವಿಜಯ್ ರಾಘವೇಂದ್ರ, ಕೊನೆಗೆ ಈ ವಾಹಿನಿಯ ಸಹವಾಸವೇ ಬೇಡ ಎಂದು ಮತ್ತೊಂದು ಚಾನೆಲ್‌ಗೆ ಶಿಫ್ಟ್ ಆದರು. ಆ ನಂತರ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಹಕ್ಕುಗಳನ್ನು ಖರೀದಿಸುವ ಪುಂಗಿ ಬಿಟ್ಟು ಆಟ ಆಡಿಸಿದ್ದರು ರಾಘು. ಬಿಡುಗಡೆ ಹತ್ತಿರ ಇದ್ದರೂ, ಯಾವಾಗ ಜ಼ಡ್‌ ಕನ್ನಡದಿಂದ ಪ್ರತಿಕ್ರಿಯೆ ಬರಲಿಲ್ಲವೋ, ಆಗ ಜಗ್ಗೇಶ್ಗೂ ತಲೆ ಕೆಟ್ಟಿತು. ಎಷ್ಟೇ ಆದರೂ ಅವರು ಹಳೆಯ ಕಿಲಾಡಿ. ಕೊನೆಗೆ ಕಾರ್ಯಕ್ರಮಕ್ಕೆ ಹೋಗುವುದನ್ನು ನಿಲ್ಲಿಸಿದರು. ಕೊನೆಗೆ ಗಾಬರಿಯಾದ ರಾಘು, ಕೈಕಾಲು ಹಿಡಿದು, ತೋತಾಪುರಿ ಚಿತ್ರದ ಹಕ್ಕುಗಳನ್ನು ಪಡೆದು, ಸಮಸ್ಯೆ ಬಗೆಹರಿಸಿಕೊಂಡರು.

ಈಗ ಯೋಗರಾಜ್ ಭಟ್ಗೂ ಅದೇ ರಾಘು ಕಾಟ ಮುಂದುವರೆದಿದೆ. ರಾಘುಗೆ   ಅನಾದಿ ಕಾಲದಿಂದಲೂ ಬೆಂಬಲವಾಗಿ ನಿಂತವರು ಯೋಗರಾಜ್ ಭಟ್. ಆತ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ತರಲೆಗಳನ್ನು ಮಾಡಿಕೊಂಡಾಗಲೆಲ್ಲ, ಆತನ ಬೆಂಬಲಕ್ಕೆ ನಿಂತು, ಸರಿದಾರಿಗೆ ಕರೆದುಕೊಂಡು ಬಂದವರಲ್ಲಿ ಯೋಗರಾಜ್ ಭಟ್ ಪ್ರಮುಖರು. ಹೀಗಿರುವಾಗಲೇ ಭಟ್ಟರಿಗೆ ಉಲ್ಟಾ ಹೊಡೆದಿದ್ದಾರೆ ರಾಘವೇಂದ್ರ. ಭಟ್ಟರು ಪದವಿ ಪೂರ್ವ ಎಂಬ ಚಿತ್ರವನ್ನು ನಿರ್ಮಿಸಿದ್ದು ಗೊತ್ತಿರಬಹುದು.  ಅವರ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶನದ ಈ ಚಿತ್ರ ಬಿಡುಗಡೆಗೆ ಹೊಸ್ತಿಲಿಗೆ ಬಂತು ನಿಂತಿದೆ. ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನಾದರೂ ಮಾರಿದರೆ, ಸ್ವಲ್ಪ ಸೇಫ್ ಆಗಬಹುದು ಎಂಬ ನಂಬಿಕೆ ಅವರದು. ಅದೇ ಕಾರಣಕ್ಕೆ ಹಕ್ಕುಗಳನ್ನು ಖರೀದಿಸುವುದಕ್ಕೆ ರಾಘುಗೆ ಹೇಳಿದ್ದಾರೆ. ತಾವು ಸಮಸ್ಯೆಯಲ್ಲಿ ಇರುವಾಗ ರಾಘು ಕೈಜೋಡಿಸಬಹುದು ಎಂಬ ನಿರೀಕ್ಷೆ ಅವರದ್ದು. ಮೊದಲೆಲ್ಲ ಓ ಯೆಸ್ ಎಂದಿದ್ದ ರಾಘು, ಇತ್ತೀಚೆಗೆ ಫೋನ್ ಎತ್ತುತ್ತಿಲ್ಲ. ಎಷ್ಟು ಕರೆ ಮಾಡಿದರೂ ರಾಘು ಕ್ಯಾರೇ ಎಂದಿಲ್ಲ. ಭಟ್ಟರಿಗೆ ಭಯಂಕರ ಸಿಟ್ಟು ಬಂದು, ಒಂದು ರಾತ್ರಿ ತಲೆ ಬಿಸಿ ಮಾಡಿಕೊಂಡು, ಹಿಗ್ಗಾಮುಗ್ಗಾ ಬೈದು ಮೆಸೇಜ್ ಹಾಕಿದ್ದಾರೆ. ಈ ಆಡಿಯೋ ಅದ್ಹೇಗೋ ಲೀಕ್‌ ಆಗಿ ಹೋಗಿದೆ.

ಈಗ ಊರಲ್ಲೆಲ್ಲಾ ಭಟ್ಟರು ಮತ್ತು ರಾಘುದೇ ಸುದ್ದಿ. ಆದರೆ, ಇದರಿಂದ ಏನೋ ಆಗುತ್ತದೆ ಎಂದೇನಲ್ಲ. ಚಿತ್ರರಂಗದವರಿಗೆ ರಾಘು ಕೊಡುತ್ತಿದ್ದ ಉಪಟಳ ನಾಲ್ಕು ಜನರಿಗೆ ಗೊತ್ತಾದಂತೆ ಆಗಿದೆ. ಮಿಕ್ಕಂತೆ, ಏನಾದರೂ ಆಗಬಹುದು ಎಂದು ಯಾರಿಗೂ ನಿರೀಕ್ಷೆ ಇಲ್ಲ. ಕೋಪದಲ್ಲಿ ಭಟ್ಟರು ಕಳಿಸಿರುವ ಮೆಸೇಜಂತೆ ಇದು.  ಎಚ್ಚರ ಬಂದಾಗ, ರಾಘು ಫೋನ್ ಮಾಡಿದಾಗ ಎಲ್ಲವೂ ಬದಲಾಗುವ ಸಾಧ್ಯತೆ ಇರುತ್ತದೆ. ಇಷ್ಟರಲ್ಲಾಗಲೇ ಸಮಸ್ಯೆ ಬಗೆಹರಿದು, ಜ಼ಡ್ ಕನ್ನಡದವರು ಪದವಿಪೂರ್ವ ಚಿತ್ರದ ಹಕ್ಕುಗಳನ್ನು ಪಡೆದು, ಇತ್ತ ಭಟ್ಟರು ಮೇಕಪ್ ಹಾಕಿಕೊಂಡು ತೀರ್ಪುಗಾರರ ಸೀಟಿನಲ್ಲಿ ಕೂತಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ, ಇಲ್ಲಿ ಯಾವುದೂ ಶಾಶ್ವತವಲ್ಲ. ಆದರೂ ತಲೆ ಕೆಟ್ಟ ಭಟ್ಟ ಏನು ಮಾಡಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ …

ಈ ವರದಿ ಯಾವುದೇ ವ್ಯಕ್ತಿಯ ಮಾನ ಹಾನಿ ಮಾಡುವ ಉದ್ದೇಶ ಹೊಂದಿಲ್ಲ


Tags:

Comments

Leave a Reply