ಕಿಕಿ ಡ್ಯಾನ್ಸ್ ಎಂಬ ಕಾಯಿಲೆ ಸಾಂಕ್ರಾಮಿಕವಾಗೋದು ಕರ್ನಾಟಕದ ಮಟ್ಟಿಗೆ ತಪ್ಪಿದೆ. ನಿವೇದಿತಾ ಎಂಬ ಎಳಸು ಹುಡುಗಿ ಈ ಡ್ಯಾನ್ಸು ಮಾಡಿ ಎಲ್ಲೆಡೆಯಿಂದ ಉಗಿಸಿಕೊಂಡದ್ದಿನ್ನೂ ಹಸಿಯಾಗಿರೋವಾಗಲೇ ಯುವ ನಿರ್ದೇಶಕ, ನಟ ಅಂತ ಹೇಳಿಕೊಳ್ಳೋ ಯೋಗಿ ಕೈಲಿ ರಾಷ್ಟ್ರಧ್ವಜ ಹಿಡಿದು, ಕಪಿಯಂತೆ ಕಾರಿಂದ ಜಿಗಿದು ಕುಣಿದಾಡಿದ್ದ! ತಮಿಳಿನ ಪಾರ್ತಿಬನ್ ಕಾದಲ್ ಎನ್ನುವ ಸಿನಿಮಾದಲ್ಲಿ ಯೋಗಿ ಹೀರೋ ಆಗಿ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮಿಳು ಮಾಧ್ಯಮಗಳ ಮುಂದೆ ‘ಕಾವೇರಿ ನಮ್ಮದು. ಜೈ ಕರ್ನಾಟಕ ಮಾತೆ ಎಂದಿದ್ದ ಕುರಿತು ಸಿನಿಬಜ಼್ ಮೊಟ್ಟ ಮೊದಲ ಬಾರಿಗೆ ಸುದ್ದಿ ಮಾಡಿತ್ತು. ನಂತರ ಆ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಮುಂಚೆ ಪ್ರಿಯಾ ವಾರಿಯರ್ನ ಕನ್ನಡಕ್ಕೆ ಕರೆತರೋದಾಗಿ ಹೇಳಿದ್ದ ಪ್ರತಿಭೆ ಕೂಡಾ ಇದೇ. ಒಳ್ಳೇದು ಅನಿಸಿದಾಗ ನಾಲ್ಕು ಒಳ್ಳೆಯ ಮಾತು ಬರೆಯೋದು ಮಾಧ್ಯಮದವರ ರೀತಿ.
ಆದರೆ, ಈ ಯಡವಟ್ಟು ಯೋಗಿ ಮಾಡಿರೋ ಕೆಲಸವನ್ನು ಯಾವ ಆಂಗಲ್ಲಿನಿಂದಲೂ ಹೊಗಳೋಕೆ ಸಾಧ್ಯವಿಲ್ಲ. ಮೊನ್ನೆ ಕಿಕಿ ಡ್ಯಾನ್ಸಿನ ವೀಡಿಯೋವನ್ನೇ ಯೋಗಿ ಸ್ವಾತಂತ್ರ್ಯ ದಿನಾಚರಣೆ ಸ್ಪೆಷಲ್ ಎಂಬಂತೆ ಪೋಸು ಕೊಟ್ಟು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ. ಇದದ ಬಗ್ಗೆ ಸಾಕಷ್ಟು ವಿರೋಧಗಳು ಬಂದಿದ್ದವು. ಇದೀಗ ಪೊಲೀಸ್ ಆಯುಕ್ತರು ಯೋಗಿಗೆ ಫೋನಾಯಿಸಿ ಸರಿಯಾಗಿಯೇ ಬೆಂಡೆತ್ತಿದ್ದಾರೆ. ರಾಷ್ಟ್ರ ಧ್ವಜ ಎಂಬುದು ಪ್ರಚಾರದ ತೆವಲಿಗೆ ಬಳಸಿಕೊಳ್ಳೋ ಆಟಿಕೆಯಲ್ಲ ಅಂತೆಲ್ಲ ಸುದೀರ್ಘವಾಗಿಯೇ ಯೋಗಿಗೆ ಬುದ್ಧಿ ಹೇಳಿದ್ದಾರೆ. ಇದಲ್ಲದೇ ಇನ್ನೊಂದು ಸಲ ಇಂಥಾ ಕೀಕಿ ಕಿರಿಕ್ಕು ಮಾಡಿಕೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸೋದಾಗಿ ಎಚ್ಚರಿಕೆಯನ್ನೂ ರವಾನಿಸಿದ್ದಾರೆ!
ಸ್ವಾತಂತ್ರ್ಯ ದಿನದಂದು ಇಂಥಾದ್ದೊಂದು ವೀಡಿಯೋ ಹಾಕಿಕೊಂಡಿದ್ದ ಯೋಗಿ ಒಂದಷ್ಟು ಪ್ರಚಾರ ಸಿಕ್ಕ ಖುಷಿಯಲ್ಲಿ ಮೈಮರೆತಿದ್ದನೇನೋ. ಆದರೆ ಇತ್ತೀಚೆಗೆ ಆತನ ಫೋನು ರಿಂಗಣಿಸಿದಾಗ ಮಾಮೂಲಾಗೇ ರಿಸೀವು ಮಾಡಿದ ಯೋಗಿಗೆ ಶಾಕು ಕಾದಿತ್ತು. ಯಾಕೆಂದರೆ, ಅತ್ತಲಿಂದ ಮಾತಾಡುತ್ತಿದ್ದವರು ಇನ್ಫ್ಯಾಂಟ್ರಿ ರಸ್ತೆಯಲ್ಲಿರೋ ಜಾಯಿಂಟ್ ಕಮಿಷನರ್ ಕಚೇರಿಯ ಪೊಲೀಸ್ ಅಧಿಕಾರಿ. ಅವರು ವಿಚಾರಿಸಿಕೊಳ್ಳುತ್ತಲೇ ಯೋಗಿ ಎದೆಯುಬ್ಬಿಸಿಕೊಂಡು ಗತ್ತಿನಿಂದಲೇ ತಾನು ನಿರ್ದೇಶಕ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಅದಾದೇಟಿಗೆ ಅತ್ತಲಿಂದ ಬೆಂಡೆತ್ತುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ಫೇಸ್ಬುಕ್ನಲ್ಲಿ ಏನು ಬೇಕಾದರೂ ಹಾಕಿಕೊಂಡು ಬಚಾವಾಗಬಹುದು ಅಂದುಕೊಂಡಿದ್ರೆ ಅದು ನಿನ್ನ ತಪ್ಪು ತಿಳುವಳಿಕೆ. ಪ್ರಚಾರ ಬೇಕಂದ್ರೆ ಅದಕ್ಕೆ ಸಾವಿರ ದಾರಿಗಳಿದ್ದಾವೆ. ಅದಕ್ಕೆ ರಾಷ್ಟ್ರ ಧ್ವಜವನ್ನ ಬಳಸಿಕೊಳ್ಳಬೇಡ ಅಂತ ಎಚ್ಚರಿಕೆ ನೀಡಿರೋ ಅಧಿಕಾರಿ, ರಾಷ್ಟ್ರ ಧ್ವಜವನ್ನು ಗೌರವಿಸುವಂತೆ ಬುದ್ಧಿ ಮಾತು ಹೇಳಿದ್ದಾರೆ. ರಾಷ್ಟ್ರಧ್ವಜದ ಘನತೆ, ಗೌರವಗಳ ಬಗ್ಗೆ ತಿಳಿ ಹೇಳಿದ್ದಾರೆ. ಇನ್ನೊಂದು ಸಲ ಕಿಕಿ ಅಂತೆಲ್ಲ ಬಾಲ ಬಿಚ್ಚಿ ಭವಿಷ್ಯ ಹಾಳುಮಾಡಿಕೊಳ್ಳದಂತೆಯೂ ಹೇಳಿ, ಇದು ಪುನರಾವರ್ತನೆಯಾದರೆ ಖಂಡಿತಾ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟನ್ನೆಲ್ಲ ವಿಧೇಯತೆಯಿಂದಲೇ ಕೇಳಿಕೊಂಡ ಯೋಗಿ ಸದ್ಯ ಕಿಕಿ ಡ್ಯಾನ್ಸಿನ ಪಿತ್ಥವೆಲ್ಲ ಜರ್ರನೆ ಇಳಿದಂತಾಗಿದ್ದಾನೆ!
#