ನಾಲ್ವರು ಮಕ್ಕಳು ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನದಿಂದ ಅವರನ್ನು ಕಾಣಲೆಂದು ಬಿಜಾಪುರದಿಂದ ಬೆಂಗಳೂರಿಗೆ ಬರುತ್ತಾರೆ. ಅವರ ಆಸೆ ಈಡೇರಿತಾ,ಇಲ್ವಾ ಅನ್ನೋದನ್ನು ಯುವನಕ್ಷತ್ರ ಚಿತ್ರದ ಮೂಲಕ ಯುವ ನಿರ್ದೇಶಕ ಆನಂದ್ ಹೇಳಹೊರಟಿದ್ದಾರೆ. ಕಸ್ತೂರಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಸದ್ಯದಲ್ಲೇ ಚಿತ್ರ ಸೆನ್ಸಾರ್ ಗೆ ಹೋಗಲಿದೆ. ವಿಶೇಷವಾಗಿ ಈ ಚಿತ್ರದಲ್ಲಿ ನಿರ್ದೇಶಕ ಪವನ್ ವಡೆಯರ್ ಅವರು ಸ್ವತಃ ನಿರ್ದೇಶಕನಾಗಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಟ ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಅರ್ಚನಾ ಜೋಯಿಸ್ ಇವರೆಲ್ಲ ಗೌರವ ಪಾತ್ರಗಳಲ್ಲಿ ನಟಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸ್ಥಿತಿಗತಿ, ಪುಟ್ಟ ಮಕ್ಕಳ ಮೇಲೆ ಪುನೀತ್ ಅವರ ಆದರ್ಶಗಳ ಪ್ರಭಾವ ಇದನ್ನೆಲ್ಲ ನಿರ್ದೇಶಕ ಆನಂದ್ ಅವರು ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಯುವನಕ್ಷತ್ರ ಚಿತ್ರಕ್ಕೆ ನಿರ್ದೇಶಕ ರಂಗಾ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ರಾಜಾ ಶಿವಶಂಕರ್ ಅವರ ಛಾಯಾಗ್ರಹಣ, ಎಸ್. ಆಕಾಶ್ ಮಹೇಂದ್ರಕರ್ ಅವರ ಸಂಕಲನ, ಜೆಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನ, ಚಂದ್ರು ಬಂಡೆ ಅವರ ಸಾಹಸ, ಮಂಜು ಮಹದೇವ್ ಅವರ ಹಿನ್ನಲೆ ಸಂಗೀತವಿದೆ.
ಎಸ್.ಕೆ ಸಂತೋಷ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಅನಿಲ್ ಕುಮಾರ್ ಚಳ್ಳಕೆರೆ, ಎಂ ಧನಪಾಲ್, ಎನ್ ಎಂ ನರಸಿಂಹಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಸಿದ್ಧವಾಗಿದೆ. ಉಳಿದಂತೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಾಲ ನಟರಾಗಿ ರೋಹನ್ ಚಾರಿ, ಶಯನ್, ಪರಿಣಿತ್, ಆರ್ಯ ವಿನೋದ್ ಹಾಗೂ ಪೋಷಕ ಪಾತ್ರಗಳಲ್ಲಿ ಆನಂದ್ ತುಮಕೂರು, ಸುಗುಣ, ಮಹಾಂತೇಶ್ ಹಿರೇಮಠ್, ಸಂದೀಪ್ ನೀನಾಸಂ, ಚಂದ್ರು, ಕೈಲಾಶ್ ಮತ್ತಿತರರು ನಟಿಸಿದ್ದಾರೆ
Leave a Reply
You must be logged in to post a comment.