ಏಪ್ರಿಲ್ ಅಂದರೇನೇ ಡಾ. ರಾಜ್ ಮಾಸ ಎನ್ನುವಷ್ಟರ ಮಟ್ಟಿಗೆ ಕನ್ನಡಿಗರು ಸಂಭ್ರಮಿಸುತ್ತಾರೆ. ಯಾಕೆಂದರೆ, ಈ ಜಗತ್ತು ಕಂಡ ಮಹಾನ್ ಕಲಾವಿದ, ಮಣ್ಣಿನ ಮಗ, ಜನಪದ ನಾಯಕ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಹುಟ್ಟಿದ ದಿನ ಏಪ್ರಿಲ್ ೨೪. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಡಾ. ರಾಜ್ ಕುಟುಂದಿಂದ ನಾಯಕನಟರಾಗಿ, ಕಲಾವಿದರಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ದೊಡ್ಡ ಹೆಸರು, ಕೀರ್ತಿ ಸಂಪಾದಿಸಿದ್ದಾರೆ. ಈಗ ಅದೇ ಪಟ್ಟಿಗೆ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಸಹ ಸೇರಿಕೊಳ್ಳಲಿದ್ದಾರೆ.
೨೦೨೦ರ ಏಪ್ರಿಲ್ ೨೪ ಕನ್ನಡ ಚಿತ್ರರಂಗದ ಪಾಲಿಗೆ ಯುವ ರಾಜನ ಜನ್ಮದಿನ. ಅಪ್ಪಾಜಿಯ ಹುಟ್ಟುಹಬ್ಬದ ದಿನದಂದೇ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎನ್ನುವ ಹಂಬಲ ರಾಘವೇಂದ್ರ ರಾಜ್ ಕುಮಾರ್ ಅವರಿಗೆ. ಕೊರೋನಾ ಕಂಟಕ ಎದುರಾಗದೇ ಇದ್ದಿದ್ದರೆ, ಬಹುಶಃ ದೊಡ್ಡಮಟ್ಟದಲ್ಲಿ ಯುವರಾಜನನ್ನು ಲಾಂಚ್ ಮಾಡುತ್ತಿದ್ದರೋ ಏನೋ? ಆದರೇನಂತೆ, ಯುವ ರಾಜ್ ಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅದರಂತೆ, ಏಪ್ರಿಲ್ ೨೪ರ ಸಂಜೆ ೪ಕ್ಕೆ ಯುವರಾಜ್ ಕುಮಾರ್ ಪೋಸ್ಟರ್ ಅನಾವರಣಗೊಳ್ಳಲಿದೆ. ಆ ಮೂಲಕ ಸಿನಿಮಾ ರಂಗದ ಮಟ್ಟಿಗೆ ಅದು ಯುವರಾಜ್ ಜನ್ಮದಿನವಾಗಲಿದೆ!
ರಾಜ್ ಕುಟುಂಬದ ಯಾರೇ ಆಗಲಿ, ಚಿತ್ರರಂಗಕ್ಕೆ ಬರುವ ಮುನ್ನ ಏಕಾಏಕಿ ಬಂದವರಲ್ಲ. ಸಿನಿಮಾದಲ್ಲಿ ನಟಿಸುವುದು ಅಂತಾ ನಿರ್ಧಾರವಾಗುತ್ತಿದ್ದಂತೇ, ಅದಕ್ಕೆ ಬೇಕಿರುವ ಪೂರ್ವಸಿದ್ಧತೆ, ತಾಲೀಮುಗಳನ್ನು ನಡೆಸಿಯೇ ಬಂದವರು. ಈಗ ಯುವರಾಜ್ ಕುಮಾರ್ ಸಹ ನಟನೆ, ಡ್ಯಾನ್ಸು, ಸಾಹಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತರಬೇತಿ ಪಡೆದಿದ್ದಾರೆ. ಹುಟ್ಟಿದಾಗಿನಿಂದ ಸಿನಿಮಾ ವಾತಾವರಣದಲ್ಲೇ ಬೆಳೆದ, ಮನೆಯಲ್ಲಿಯೇ ಇರುವ ಹೀರೋಗಳ ಒಡನಾಟ ಯುವರಾಜ್ಕುಮಾರ್ಗೆ ಬಣ್ಣದ ಲೋಕದ ಸಂಪೂರ್ಣ ಪಚರಿಯ ಮಾಡಿಸಿದೆ. ಸಹೋದರ ವಿನಯ್ ರಾಜ್ ಕುಮಾರ್ ಅವರ ಸಿನಿಮಾಗಳ ವಿಚಾರದಲ್ಲೂ ಯುವ ಸಾಕಷ್ಟು ಮುತುವರ್ಜಿ ವಹಿಸಿಸುತ್ತಾ, ಮೇಲ್ವಿಚಾರಣೆ ನಡೆಸುತ್ತಾ ಬಂದಿರುವುದು ಮತ್ತಷ್ಟು ಸಹಕಾರಿಯಾಗಲಿದೆ. ಈ ಎಲ್ಲ ನಿಟ್ಟಿನಲ್ಲಿ ಯುವ ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಪರ್ಮನೆಂಟಾಗಿ ನೆಲೆ ನಿಲ್ಲುವ ಎಲ್ಲ ಸೂಚನೆಯೂ ಇದೆ. ಅದು ಸಾಧ್ಯವಾಗಲಿ ಅಂತಾ ಆಶಿಸೋಣ!