ಥೇಟರ್ ಸಮಸ್ಯೆ ಎದುರಾದಾಗ ಪುನೀತ್ ಅವರನ್ನು ಎದುರಿಟ್ಟುಕೊಂಡು, ಮೂರು ದಿನದ ವಿನಾಯ್ತಿ ಪಡೆದರಲ್ಲಾ? ಈಗ ನಿಯಮದಂತೆ 90 ದಿನ ದಾಟುವ ಮುಂಚೆ, ಎಂಟೇ ದಿನಕ್ಕೆ ಓಟಿಟಿಗೆ ಕೊಟ್ಟಿದ್ದಾರಲ್ಲಾ? ಇದು ಸರಿಯಾ? ಇದನ್ನೆಲ್ಲಾ ಪವರ್ ಸ್ಟಾರ್ ಪ್ರಶ್ನಿಸುತ್ತಿಲ್ಲವಾ? ಮೊದಲೇ ಜನ ಥೇಟರಿಗೆ ಬರುತ್ತಿಲ್ಲ. ಸ್ಟಾರ್ ಸಿನಿಮಾ ರಿಲೀಸಾಗಿ ವಾರ ಕಳೆಯುವುದರೊಳಗೆ ಅದು ಓಟಿಟಿಗೆ ಬಂದರೆ ಹೇಗೆ? ಹೇಗೂ ಓಟಿಟಿಗೆ ಬರುತ್ತದಲ್ಲಾ ಅಂತಾ ಜನ ಥೇಟರಿಗೆ ಬರೋದನ್ನೇ ನಿಲ್ಲಿಸಿಬಿಟ್ಟರೆ ಏನು ಗತಿ?
ಯುವರತ್ನ ಸಿನಿಮಾದವರು ಜನರಿಗೆ ಮಾಡಿದ್ದು ಮಹಾ ಮೋಸ ಅಲ್ಲವಾ? ಹೀಗಂತಾ ಸಾಮಾನ್ಯ ಜನರೂ ಪ್ರಶ್ನಿಸುತ್ತಿದ್ದಾರೆ. ವಾರಕ್ಕೆ ಮುಂಚೆಯಷ್ಟೇ ʻಅಯ್ಯೋ… ಅಯ್ಯಯ್ಯೋ… ಫಿಫ್ಟಿ ಪರ್ಸೆಂಟ್ ಸೀಟ್ ಮಾಡ್ತಾರೆ ಅಂತಾ ಗೊತ್ತಿದ್ರೆ ಸಿನಿಮಾನ ರಿಲೀಸ್ ಮಾಡುತ್ತಲೇ ಇರಲಿಲ್ಲ… ಯಾವಾಗ ಹಂಡ್ರೆಂಟ್ ಪರ್ಸೆಂಟ್ ಅವಕಾಶ ನೀಡುತ್ತಾರೋ ಆಗಲೇ ಬಿಡುಗಡೆ ಮಾಡಿಕೊಳ್ತಿದ್ವಿ…ʼ ಅಂತಾ ರಾಗ ಎಳೆದಿದ್ದರು. ಶೇ.100ರಷ್ಟನ್ನು ಬರೀ ಮೂರು ದಿನಕ್ಕೆ ವಿಸ್ತರಿಸಿದಾಗ ʻಓಕೆʼ ಅಂತಾ ಒಪ್ಪಿಕೊಂಡರಲ್ಲಾ? ಆಗಲೇ ಇದರ ಹಿಂದೆ ಏನೋ ಮಾಸ್ಟರ್ ಪ್ಲಾನ್ ಇದೆ ಅನ್ನೋ ಅನುಮಾನ ಮೂಡಿತ್ತು. ಈಗ ನೋಡಿದರೆ ಯಾವ ಮುನ್ಸೂಚನೆ ನೀಡದೆ, ಕೆಲವೇ ಗಂಟೆಗಳ ಮುಂಚೆ ತಿಳಿಸಿ, ರಾತ್ರೋ ರಾತ್ರಿ ಅಮೆಜ಼ಾನ್ ಪ್ರೈಮ್ ನಲ್ಲಿ ಯುವರತ್ನ ಬಿಟ್ಟಿದ್ದಾರೆ!
ಯಾವುದೇ ಒಂದು ಸಿನಿಮಾವನ್ನು ಧಡಕ್ಕನೆ ಅಪ್ ಲೋಡ್ ಮಾಡಿ, ಓಟಿಟಿಯಲ್ಲಿ ಬಿಡಲು ಸಾಧ್ಯವೇ ಇಲ್ಲ. ಯುವರತ್ನ ಸಿನಿಮಾವನ್ನು ಓಟಿಟಿಯಲ್ಲೇ ರಿಲೀಸ್ ಮಾಡಲು ಮೂರು ತಿಂಗಳ ಹಿಂದೆಯೇ ತೀರ್ಮಾನಿಸಲಾಗಿತ್ತು. ಜನವರಿ 10ರಂದು ಲೆಟ್ಸ್ ಓಟಿಟಿ ಗ್ಲೋಬಲ್ ಟ್ವಿಟರ್ ನಲ್ಲಿ ಯುವರತ್ನ ನೇರವಾಗಿ ಓಟಿಟಿಗೆ ಬರುವುದಾಗಿ ಟ್ವೀಟ್ ಮಾಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಇದೇ ಕೆಆರ್ ಜಿ ಸ್ಟುಡಿಯೋ ಮುಖ್ಯಸ್ಥ, ವಿತರಕ ಕಾರ್ತಿಕ ಗೌಡ ಏಪ್ರಿಲ್ 1ರಂದು ಥೇಟರಿನಲ್ಲಿ ರಿಲೀಸ್ ಮಾಡುತ್ತೀವಿ ಅಂತಾ ಹೇಳಿದ್ದರು. ಆದರೆ ಒಂದು ವಾರದ ಒಳಗೆ ಒಟಿಟಿಗೆ ಬಿಡುತ್ತೇವೆ ಅನ್ನೋದನ್ನು ಮರೆಮಾಚಿದ್ದರು.
ಕಾಟಾಚಾರಕ್ಕೆ ಥೇಟರಿನಲ್ಲಿ ಬಿಡುಗಡೆ ಮಾಡಿ ಜನರನ್ನು ಏಪ್ರಿಲ್ ಫೂಲ್ ಮಾಡಿ ಈಗ ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ಎಂಟು ದಿನದ ಕಲೆಕ್ಷನ್ ಮಾಡಿಕೊಂಡು ಇವರೇನೋ ಅಮೆಜಾನಿಗೆ ಸಿನಿಮಾ ಮಾರಿಕೊಂಡುಬಿಟ್ಟಿದ್ದಾರೆ. ಇವರನ್ನು ನಂಬಿಕೊಂಡು ಥೇಟರ್ ನೀಡಿದ ಪರದರ್ಶಕರ ಪಾಡು ಏನಾಗಬೇಡ? ಎಷ್ಟೋ ಸೆಂಟರುಗಳಲ್ಲಿ ಯುವರತ್ನ ತೆಗೆದು ತೆಲುಗಿನ ವಕೀಲ್ ಸಾಬ್ ಚಿತ್ರವನ್ನು ಪ್ರದರ್ಶಿಸುತ್ತಿದ್ದಾರೆ. ಕನ್ನಡಕ್ಕಷ್ಟೇ ಮೀಸಲಾದ ಹಲವು ಚಿತ್ರಮಂದಿರಗಳು ಯುವರತ್ನ ಸಿನಿಮಾವನ್ನು ನಂಬಿ ನಿಜಕ್ಕೂ ಮೋಸ ಹೋಗಿವೆ.
ಏನೋ ಕೆ ಜಿ ಎಫ್ ಸಿನಿಮಾ ನಿರ್ಮಿಸಿದ ಸಂಸ್ಥೆ ಅಂತಾ ಜನ ಹೊಂಬಾಳೆ ಮತ್ತು ವಿತರಣೆ ಮಾಡಿದ್ದ ಕೆ ಆರ್ ಜಿ ಸ್ಟುಡಿಯೋ ಮೇಲೆ ಭರವಸೆ ಇಟ್ಟುಕೊಂಡಿದ್ದರು. ಆದರೆ ಯುವರತ್ನ ಚಿತ್ರ ಥೇಟರಿನಲ್ಲಿ ಇದ್ದಾಗಲೇ ಓಟಿಟಿಗೆ ಸೇಲ್ ಮಾಡಿಕೊಂಡಿರುವುದು ಕಂಡು ಜನ ಭ್ರಮನಿರಸನಕ್ಕೊಳಗಾಗಿದ್ದಾರೆ.
ಅಸಲೀ ವಿಚಾರ! : ಏಪ್ರಿಲ್ ಒಂದರಂದು ಯುವರತ್ನ ಸಿನಿಮಾ ತೆರೆಗೆ ಬಂದಿತ್ತು. ಮೊದಲ ಶೋ ಮುಗಿಯುತ್ತಿದ್ದಂತೇ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿಜಕ್ಕೂ ಹೇಳಬೇಕೆಂದರೆ, ಈ ಸಲ ಸಂತೋಷ್ ಆನಂದ್ ರಾಮ್ ಕತೆಯೇ ಇಲ್ಲದೆ, ಚಿತ್ರಕತೆಯಲ್ಲಿ ಆಟವಾಡಲು ಹೋಗಿ ಅಕ್ಷರಶಃ ಮುಗ್ಗರಿಸಿದ್ದರು. ತಮಿಳಿನ ಸರ್ಕಾರ್, ಬಿಗಿಲ್, ಮೊದಲಾದ ಸಿನಿಮಾಗಳ ಛಾಯೆ ಸಿನಿಮಾದಲ್ಲಿ ಎದ್ದು ಕಾಣುತ್ತಿತ್ತು. ಈ ಹಿಂದೆ ಕೂಡಾ ಸಂತೋಷ್ ನಾಲ್ಕಾರು ಚಿತ್ರಗಳನ್ನು ಬೆರೆಸಿ ಸಿನಿಮಾ ಮಾಡಿದ್ದರಾದರೂ ಅದು ನೋಡುಗರಿಗೆ ಎಲ್ಲೂ ಬೋರ್ ಹೊಡೆಸಿರಲಿಲ್ಲ.
ಯುವರತ್ನ ಸಿನಿಮಾ ಸ್ವತಃ ಪುನೀತ್ ಅಭಿಮಾನಿಗಳಿಗೂ ಪೂರ್ತಿಯಾಗಿ ಮೆಚ್ಚುಗೆಯಾಗಿರಲಿಲ್ಲ. ಸಿನಿಮಾ ಕಾಲೇಜು, ಕ್ಲಾಸ್ ರೂಮು, ಕಾರಿಡಾರುಗಳನ್ನು ಬಿಟ್ಟು ಹೊರಬರದೇ ನೋಡುಗರನ್ನು ಒದ್ದಾಡಿಸಿತ್ತು. ಆನಂದ್ ರಾಮ್ ಹಿಂದಿನ ಚಿತ್ರಗಳಲ್ಲಿ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಆದರೆ, ಯುವರತ್ನ ಹಾಡು ಹೇಳಿಕೊಳ್ಳುವ ಮಟ್ಟಕ್ಕೆ ಸೌಂಡು ಮಾಡಲಿಲ್ಲ. ಇದರ ಜೊತೆಗೆ ಕಿಡಿಗೇಡಿಗಳು ಚಿತ್ರವನ್ನು ಟೆಲಿಗ್ರಾಮಿನಲ್ಲಿ ಮೊದಲ ದಿನವೇ ಲೀಕ್ ಮಾಡಿಬಿಟ್ಟಿದ್ದರು.
ಇದನ್ನೆಲ್ಲ ಅರಿತ ನಿರ್ಮಾಣ ಸಂಸ್ಥೆ ತಕ್ಷಣ ಹನ್ನೆರಡರು ಕೋಟಿಗೆ ವ್ಯಾಪಾರ ಕುದುರಿಸಿ ಅಮೇಜಾನಿಗೆ ಮಾರಿಬಿಟ್ಟರು. ತಮ್ಮ ಚಿತ್ರಮಂದಿರಗಳಿಗೆ ಅಡ್ವಾನ್ಸ್ ಹಣ ಕೊಟ್ಟು ಪಡೆದಿದ್ದ ಪ್ರದರ್ಶಕರಿಗೆ ಮೊದಲ ವಾರದ ಕಲೆಕ್ಷನ್ನಿನಿಂದ ಹಾಕಿದ ಬಂಡವಾಳವಷ್ಟೇ ವಾಪಾಸು ಬಂದಿದೆ. ಅಷ್ಟೊಂದು ಹಣ ಹೂಡಿಕೆ ಮಾಡಿ, ಸ್ಟಾರ್ ನಟನ ಸಿನಿಮಾದಿಂದ ನಾಲ್ಕು ಕಾಸು ವರಮಾನ ಬರುತ್ತದೆ ಅಂತಾ ಕಾದವರ ಕೈಗೆ ಸಿಕ್ಕಿರೋದು ಅಮೆಜಾನಿನಲ್ಲಿ ಆರ್ಡರ್ ಮಾಡಿದ ಲಡ್ಡು ಮಾತ್ರ!
ಥೇಟರ್ ಸಮಸ್ಯೆ ಎದುರಾದಾಗ ಪುನೀತ್ ಅವರನ್ನು ಎದುರಿಟ್ಟುಕೊಂಡು, ಮೂರು ದಿನದ ವಿನಾಯ್ತಿ ಪಡೆದರಲ್ಲಾ? ಈಗ ನಿಯಮದಂತೆ 90 ದಿನ ದಾಟುವ ಮುಂಚೆ, ಎಂಟೇ ದಿನಕ್ಕೆ ಓಟಿಟಿಗೆ ಕೊಟ್ಟಿದ್ದಾರಲ್ಲಾ? ಇದು ಸರಿಯಾ? ಇದನ್ನೆಲ್ಲಾ ಪವರ್ ಸ್ಟಾರ್ ಪ್ರಶ್ನಿಸುತ್ತಿಲ್ಲವಾ? ಮೊದಲೇ ಜನ ಥೇಟರಿಗೆ ಬರುತ್ತಿಲ್ಲ. ಸ್ಟಾರ್ ಸಿನಿಮಾ ರಿಲೀಸಾಗಿ ವಾರ ಕಳೆಯುವುದರೊಳಗೆ ಅದು ಓಟಿಟಿಗೆ ಬಂದರೆ ಹೇಗೆ? ಹೇಗೂ ಓಟಿಟಿಗೆ ಬರುತ್ತದಲ್ಲಾ ಅಂತಾ ಜನ ಥೇಟರಿಗೆ ಬರೋದನ್ನೇ ನಿಲ್ಲಿಸಿಬಿಟ್ಟರೆ ಏನು ಗತಿ?
No Comment! Be the first one.