ಬನಾರಸ್ ಚಿತ್ರದ ಮೂಲಕ ಅದ್ಧೂರಿ ಎಂಟ್ರಿ ನೀಡಿದವರು ಜಾಹಿದ್ ಖಾನ್. ಜಮೀರ್ ಅಹಮದ್ ಅವರ ಪುತ್ರ ಅನ್ನೋದರ ಹೊರತಾಗಿ, ಮೊದಲ ಸಿನಿಮಾಗೇ ಒಳ್ಳೆ ಸಬ್ಜೆಕ್ಟು ಆಯ್ಕೆ ಮಾಡಿಕೊಂಡು, ಚೊಚ್ಚಲ ಪ್ರಯತ್ನದಲ್ಲೇ ಉತ್ತಮ ನಟ ಅನ್ನಿಸಿಕೊಂಡವರು. ಜೈದ್ ಮನಸ್ಸು ಮಾಡಿದ್ದರೆ ಬನಾರಸ್ ನಂತರ ಇಷ್ಟೊತ್ತಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಬಹುದಿತ್ತು. ಸುಮಾರಷ್ಟು ಜನ ಹೆಸರಾಂತ ನಿರ್ದೇಶಕರು ಜೈದ್ ಅವರಿಗೆ ಕಥೆ ಕೂಡಾ ಹೇಳಿದ್ದರು. ಆದರೆ ಜೈದ್ ಎಲ್ಲೂ ಆತುರಕ್ಕೆ ಬೀಳಲಿಲ್ಲ. ಮೊದಲ ಸಿನಿಮಾ ಬನಾರಸ್ ತಂದುಕೊಟ್ಟ ಹೆಸರನ್ನು ಮುಂದುವರೆಸುವಂಥಾ ಕಥಾವಸ್ತುವಿಗಾಗಿ ಕಾದರು. ನಿಧಾನವಾದರೂ ಪರವಾಗಿಲ್ಲ, ಅಂತಾ ಒಂದಿಷ್ಟು ಸಮಯಾವಕಾಶ ತೆಗೆದುಕೊಂಡು ಕಥೆ ಆಯ್ಕೆ ಮಾಡಿಕೊಂಡು, ಪಾತ್ರಕ್ಕಾಗಿ ತಯಾರಾದರು. ಈಗ ಸಿನಿಮಾ ಶುರುವಾಗುತ್ತಿದೆ.
ಜೈದ್ ನಟನೆಯಲ್ಲಿ ಆರಂಭವಾಗುತ್ತಿರುವ ಚಿತ್ರಕ್ಕೆ ಕಲ್ಟ್ ಎನ್ನುವ ಹೆಸರಿಡಲಾಗಿದೆ. ಟೈಟಲ್ ಕೆಳಗೆ ಬರೆದಿರುವ ಬ್ಲಡಿ ಲವ್ ಎನ್ನುವ ಅಡಿಬರಹ ಹೆಚ್ಚು ಗಮನ ಸೆಳೆಯುತ್ತಿದೆ.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದರಲ್ಲಿ ರಚಿತಾರಾಮ್ ಒಬ್ಬರಾಗಿದ್ದಾರೆ. ಮತ್ತೊಬ್ಬ ನಾಯಕಿ ಯಾರೆನ್ನುವ ವಿಚಾರ ಕೂಡಾ ಇಷ್ಟರಲ್ಲೇ ಜಾಹೀರಾಗಲಿದೆ. ಈ ಹಿಂದೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಜೈದ್ ಈ ಸಲ ಯಾವ ಲುಕ್ ನಲ್ಲಿ ಎದ್ದುಬರಬಹುದು ಅನ್ನೋದು ಸದ್ಯ ಎಲ್ಲರ ಕುತೂಹಲ. ಲೋಕಿ ಸಿನಿಮಾಸ್ ನಿರ್ಮಿಸುತ್ತಿರುವ ಕಲ್ಟ್ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಅನಿಲ್ ಈ ತನಕ ಮಾಡಿರುವ ಎಲ್ಲ ಚಿತ್ರಗಳೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡಿವೆ. ಈ ಸಲ ಜೈದ್ ಅವರಿಗಾಗಿ ಅಪರೂಪದ ಕಥಾವಸ್ತುವನ್ನು, ಕಾಡುವ ರೀತಿಯಲ್ಲಿ ಕಟ್ಟಿಕೊಡಲು ಅನಿಲ್ ಸನ್ನದ್ದರಾಗಿದ್ದಾರೆ.
ಸದ್ಯ ಹೊರಬಂದಿರುವ ಕಲ್ಟ್ ಚಿತ್ರದ ಟೈಟಲ್ ಪೋಸ್ಟರ್ ನೋಡಿದರೆ, ಇದೊಂದು ಪಕ್ಕಾ ಕಮರ್ಷಿಯಲ್ ಮತ್ತು ಆಕ್ಷನ್ ಜಾನರಿನ ಸಿನಿಮಾ ಅನ್ನೋದನ್ನು ಸೂಚಿಸುತ್ತಿದೆ. ಪ್ರೀತಿಯ ಜೊತೆಗೆ ಮತ್ತೇನೋ ಕಾಡುವ ಅಂಶ ಇದರಲ್ಲಿದೆ ಅನ್ನೋದು ಕೂಡಾ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹೊಸ ಹುರುಪಿನಲ್ಲಿ ಎದ್ದು ಬಂದಿರುವ ಜೈದ್ ಖಾನ್ ಮತ್ತು ಕಲ್ಟ್ ಚಿತ್ರತಂಡಕ್ಕೆ ಒಳ್ಳೇದಾಗಲಿ…
No Comment! Be the first one.