ಒಂದು ಗಂಡಿಗೆ ಒಂದು ಹೆಣ್ಣನ್ನು ಜೋಡಿ ಮಾಡಿ ಆ ದೇವರು ನಮ್ಮ ಹಣೇಬರಹದಲ್ಲಿ ಮೊದಲೇ ಬರೆದಿರುತ್ತಾನೆ ಎನ್ನುವುದು ಎಲ್ಲರೂ ಹೇಳುವ ಮಾತು. ಸಾಮಾನ್ಯವಾಗಿ ಗಂಡಿಗಿಂತ ಹೆಣ್ಣು ಮೂರ್ನಾಲ್ಕು ವರ್ಷ, ಐದಾರು ವರ್ಷ ಚಿಕ್ಕವಳಾಗಬೇಕು. ಆಗಲೇ ಆ ಜೋಡಿಯ ಜೀವನ ಪಯಣ ಸುಖಕರವಾಗುತ್ತದೆ. ಆದರೆ ಈ ಅಂತರ ಹತ್ತು-ಹದಿನೈದು ವರ್ಷಗಳಷ್ಟು ದೊಡ್ಡದಾದರೆ ಏನಾಗಬಹುದು, ಏನೆಲ್ಲಾ ಸಂದರ್ಭಗಳು ಎದುರಾಗಬಹುದು? ಎಂಬುದನ್ನು ಈಗಾಗಲೇ ಜೊತೆ ಜೊತೆಯಲಿ ಎನ್ನುವ ಜನಪ್ರಿಯ ಧಾರಾವಾಹಿಯ ಮೂಲಕ ಹೇಳಲಾಗಿದೆ.
ಜ಼ೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡು ಅತಿ ಹೆಚ್ಚು ವೀಕ್ಷಣೆಯಾದ ಸೀರಿಯಲ್ ಆಗಿ ಹೊರಹೊಮ್ಮಿದ ಜೊತೆ ಜೊತೆಯಲಿ ತನಗಿಂತ ದೊಡ್ಡ ವಯಸ್ಸಿನ ಹೆಣ್ಣನ್ನು ಪ್ರೀತಿಸುವ ಯುವಕರ ಕಥೆ ಹೊಂದಿತ್ತು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಹೊಸ ಕಥೆಯೊಂದಿಗೆ ಜೊತೆ ಜೊತೆಯಲಿ ಮೂಡಿಬರುತ್ತಿದೆ. ಇದೇ ತಿಂಗಳ ಸೆಪ್ಟೆಂಬರ್ ೯ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ ೮.೩೦ ಗಂಟೆಗೆ ಜ಼ೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ೪೫ ವರ್ಷದ ಉದ್ಯಮಿ ಹಾಗೂ ೨೦ ವರ್ಷದ ಮಧ್ಯಮ ವರ್ಗದ ಯುವತಿಯ ನಡುವೆ ನಡೆಯುವ ವಿಶಿಷ್ಠ ಪ್ರೇಮಕಥೆಯನ್ನು ಹೇಳಲಾಗುತ್ತಿದೆ. ಈ ಧಾರಾವಾಹಿಯ ಮೂಲಕ ಸಾಹಸ ಸಿಂಹ ವಿಷ್ಣುವರ್ಧನ ಅವರ ಅಳಿಯ ಅನಿರುದ್ ನಾಯಕನಾಗಿ ಕಿರುತೆರೆ ಪ್ರವೇಶಿಸಿದ್ದಾರೆ.
ಈ ಕಥೆಯನ್ನು ಕೇಳುತ್ತಲೇ ಕಥೆಯ ವಿಶೇಷತೆಯನ್ನು ಗುರುತಿಸಿ ಈ ಪಾತ್ರ ನಿರ್ವಹಿಸಲು ಒಪ್ಪಿದ್ದಾರೆ. ಆರ್ಯವರ್ಧನ್ ಎಂಬ ಶ್ರೀಮಂತ ಬ್ಯುಸಿನೆಸ್ಮೆನ್ ಆಗಿ ಈ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ೨೦ ರ ಹರೆದಯದ ಹೊಸ ಪ್ರತಿಭೆ ಮೇಘನಶೆಟ್ಟಿ ಅಭಿನಯಿಸಿದ್ದಾರೆ. ಶುಭ ವಿವಾಹ, ಜೋಡಿಹಕ್ಕಿಯಂತಹ ಯಶಸ್ವಿ ಧಾರವಾಹಿಗಳನ್ನು ನಿರ್ದೇಶಿಸಿದ್ದ ಆರೂರು ಜಗಧೀಶ್ ಈ ಸೀರಿಯಲ್ ಸಾರಥ್ಯ ವಹಿಸಿಕೊಂಡಿದ್ದಾರೆ. ಜ಼ೀ ತಂಡದ ಕಥೆ ಸುಧೀಂದ್ರ ಭಾರದ್ವಾಜ್, ಪವನ್ ಶ್ರೀವತ್ಸ ಚಿತ್ರಕಥೆ, ಸತ್ಯ ಕೆ ಸಂಭಾಷಣೆ ರಚಿಸಿದ್ದಾರೆ. ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಅಜಗಜಾಂತರ ವ್ಯತ್ಯಾಸ ಹೊಂದಿರುವ ಇವರಿಬ್ಬರು ಹೇಗೆ ಒಂದಾಗುತ್ತಾರೆ ಅಂತವರ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ರಸವತ್ತಾಗಿ ಈ ಕಥೆಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ.
ಈಗಾಗಲೇ ತನ್ನ ಪ್ರೋಮೋ ಮೂಲಕವೇ ವೀಕ್ಷಕರಲ್ಲಿ ಹೆಚ್ಚಿನ ಕಾತುರ ಕುತೂಹಲವನ್ನು ಈ ಧಾರಾವಾಹಿ ಕ್ರಿಯೇಟ್ ಮಾಡಿದ್ದು, ನಿರೀಕ್ಷೆಗಿಂತ ಹೆಚ್ಚಿನದನ್ನು ಪ್ರಯತ್ನಿಸಿದ್ದೇವೆ ಎಂದು ನಿರ್ದೇಶಕ ಆರೂರು ಜಗಧೀಶ್ ಹೇಳಿದ್ದಾರೆ. ಕಿರುತೆರೆಯಲ್ಲಿ ಜೊತೆ ಜೊತೆಯಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎಂದು ಜ಼ೀ ಕನ್ನಡದ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳುತ್ತಾರೆ. ಅಪೂರ್ವ, ಶಿವಾಜಿರಾವ್, ಜಾದವ್ ಸುಂದರಶ್ರೀ, ಮಾನಸ ಮನೋಹರ್, ಮುರಳಿ, ಶ್ರೀದೇವಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿರುವ ಈ ಧಾರಾವಾಹಿಯಲ್ಲಿ ವಿಶೇಷವಾಗಿ ನಾಯಕಿಯ ಮನೆ, ನಾಯಕನ ಕಛೇರಿ ಸೆಟ್ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಹಾಗೂ ಸುರೇಶ್ ಬಾಗಣ್ಣನವರ ಹಾಕಿದ್ದಾರೆ. ಸುನಾದ ಗೌತಮ್ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಂತೋಷ್ ಖಾರ್ವಿ ಛಾಯಾಗ್ರಹಣ ಈ ಧಾರವಾಹಿಗಿದೆ.