ತನ್ನ ವೀಕ್ಷಕರಿಗೆ ಸದಾ ಸದಭಿರುಚಿಯ ವಿಭಿನ್ನ ಶೈಲಿಯ ಕಾರ್ಯಕ್ರಮಗಳನ್ನೇ ನೀಡುವ ಮೂಲಕ ಜನಸಾಮಾನ್ಯರ ಮನೆಮಾತಾಗಿರುವ ಹಾಗೂ ನಂಬರ್ ಒನ್ ಸ್ಥಾನದಲ್ಲಿರುವ ಜೀ ಕನ್ನಡ ವಾಹಿನಿ ಹಾಸ್ಯ ದಿಗ್ಗಜರಿಗೊಂದು ವೇದಿಕೆ ಸೃಷ್ಟಿಸಿ ಅವರೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಗೌರವಿಸಬೇಕೆಂಬ ಆಶಯದೊಂದಿಗೆ ಜೀ ಕನ್ನಡ ಕಾಮಿಡಿ ಅವಾರ್ಡ್ಸ್ ೨೦೨೦ ಕಾರ್ಯಕ್ರಮವನ್ನು ಇತ್ತೀಚೆಗಷ್ಟೇ ಆಯೋಜಿಸಿತ್ತು.  ಕನ್ನಡ ಚಿತ್ರರಂಗದಲ್ಲಿ ಈಗಾಗಲೇ  ಹಲವಾರು ಅವಾರ್ಡ್ಸ್ ಕಾರ್ಯಕ್ರಮಗಳು ನಡೆದಿವೆ, ಆದರೆ ಹಾಸ್ಯ ಕಲಾವಿದರಿಗಾಗಿಯೇ ಪ್ರತ್ಯೇಕವಾಗಿ ಒಂದು ಅಭಿನಂದನೆ ಸಲ್ಲಿಸುವ  ವೇದಿಕೆ ಈವರೆಗೆ ನಿರ್ಮಾಣವಾಗಿರಲಿಲ್ಲ, ಮನುಷ್ಯನ ಜೀವನದ ಮುಖ್ಯ ಭಾಗವೇ ಆಗಿರುವ ಹಾಸ್ಯಕ್ಕೆ ಗೌರವ ಸಲ್ಲಿಸುವ  ಚೊಚ್ಚಲ ಕಾಮಿಡಿ ಅವಾರ್ಡ್ಸ್ ಕಾರ್ಯಕ್ರಮ ಇಷ್ಟೊಂದು ವಿಜೃಂಭಣೆಯಿಂದ ನಡೆಯುತ್ತಿರುವುದು ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು.

ಕಳೆದ ವರ್ಷ ಅಂದರೆ ೨೦೧೯ರಲ್ಲಿ ತೆರೆಗೆ ಬಂದು ಪ್ರೇಕ್ಷಕರ ಮನರಂಜಿಸಿದ ಹಾಸ್ಯಚಿತ್ರಗಳಿಗೆ ಹಾಗೂ ಹಾಸ್ಯ ಕಲಾವಿದರುಗಳಿಗೆ ಅಭಿನಂದನೆ ಸಲ್ಲಿಸುವುದು ಜೀ ಕನ್ನಡ ಕಾಮಿಡಿ ಅವಾರ್ಡ್ಸ್ ೨೦೨೦ರ ಮುಖ್ಯ ಉದ್ದೇಶ. ಇತ್ತೀಚೆಗೆ ನಡೆದ ಈ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ನಿರೂಪಣೆಯನ್ನು ಮಾಸ್ಟರ್ ಆನಂದ್ ಅವರು  ಮಾಡಿದರು. ಜೀ ಕನ್ನಡ ಕಾಮಿಡಿ ಅವಾರ್ಡ್ಸ್ ೨೦೨೦ಕ್ಕೆ ನಾಮಿನೇಶನ್ ಆಗಿದ್ದ  ಹಾಸ್ಯ ದಿಗ್ಗಜರನ್ನು ಸನ್ಮಾನಿಸಲು ಕನ್ನಡ ಚಿತ್ರರಂಗದ ಬಹುತೇಕ ಗಣ್ಯರುಗಳು ಅಲ್ಲಿ ನೆರೆದಿದ್ದರು.  ಕಾರ್ಯಕ್ರಮಕ್ಕೆ ಮತ್ತಷ್ಟು ಮನರಂಜನೆಯ ಮೆರುಗು ತುಂಬಿದ್ದು ಕಾಮಿಡಿ ಕಿಲಾಡಿಗಳು ಸೀಸನ್ ೧, ಸೀಸನ್ ೨, ಸೀಸನ್ ೩ ಹಾಗೂ ಪಾರು ಧಾರಾವಾಹಿ ತಂಡದ  ನೃತ್ಯ. ಇದರ ಜೊತೆಗೆ ಡ್ರಾಮಾ ಜೂನಿಯರ‍್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ವಿಜೇತರಾದ ಮುದ್ದುರಾಜ ಅನೂಪ ಹಾಗು ಡಿಂಪನರವರ ಮೈಜುಮ್ಮೆನ್ನಿಸುವ ನೃತ್ಯಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿತ್ತು.

ನಿರೀಕ್ಷೆಗು ಮೀರಿದ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದ್ದು ಚಂದನವನದ ತಾರಾಬಳಗದ ಸಮೂಹ, ಕರುನಾಡಿನ ಹೆಮ್ಮೆಯ ಪ್ರತಿಭಾನ್ವಿತ ಕಲಾವಿದರುಗಳೆಲ್ಲ ಒಂದೇ ಸೂರಿನಡಿ ಸೇರಿ ಹಬ್ಬದ ವಾತವರಣವನ್ನೇ ಸೃಷ್ಟಿಸಿ ವೇದಿಕೆಯ ಘನತೆಯನ್ನು ಹೆಚ್ಚಿಸುವುದರ ಜೊತೆಗೆ, ಬಾಂಧವ್ಯಗಳ ಬೆಸುಗೆಯ ಸಂತಸದ ಸಂಭ್ರಮದಲ್ಲಿ ಮೀಯುವುದರೊಂದಿಗೆ ನಕ್ಕು ನಲಿದಾಡಿದ್ದು  ಕಾರ್ಯಕ್ರಮದ ಸಾರ್ಥಕತೆಯ ದ್ಯೋತಕವಾಗಿತ್ತು.  ಕನ್ನಡ ಹಾಸ್ಯ ದಿಗ್ಗಜರಿಗೆ ಗೌರವಿಸುವ ಕಾರ್ಯಕ್ರಮ “ಜೀ ಕನ್ನಡ ಕಾಮಿಡಿ ಅವಾರ್ಡ್ಸ್ ೨೦೨೦”ರ ಮಹಾಹಬ್ಬ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕೆಂಡ್‌ನಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮ ಕನ್ನಡ ನಾಡಿನ ಪ್ರತಿಯೊಬ್ಬರ  ಮನೆಮನೆಯಲ್ಲಿಯೂ ನಗೆಯ ರಸದೌತಣವನ್ನೇ ನೀಡಲಿದೆ ಎನ್ನುವುದು ಜೀ ತಂಡದ ಆಶಯ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೇಕಿತ್ತಾ ಗುರುವೇ ಇದೆಲ್ಲಾ?

Previous article

ವಿಹಾನ್ ಜೊತೆಗೆ ಜಾಗ್ವಾರ್ ದೀಪ್ತಿ ಫಿಕ್ಸ್!!

Next article

You may also like

Comments

Leave a reply

Your email address will not be published. Required fields are marked *