‘ತಾಯವ್ವ’ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದು, ಹಲವರಿಗೆ ಗೊತ್ತಿರಬಹುದು. ಕನ್ನಡ ಚಿತ್ರರಂಗದ ನಟ ‘ಕಿಚ್ಚ’ ಸುದೀಪ್ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಆಗ ತೆರೆಗೆ ಬಂದಿದ್ದ ‘ತಾಯವ್ವ’ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ‘ತಾಯವ್ವ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಬಾರಿ ‘ತಾಯವ್ವ’ನಾಗಿ ಈ ಚಿತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ ʼತಾಯವ್ವʼ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ‘ತಾಯವ್ವ’ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಹಿರಿಯ ನಟ ‘ಪ್ರಣಯರಾಜ’ ಶ್ರೀನಾಥ್ ‘ತಾಯವ್ವ’ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿದರು. ಈ ವೇಳೆ ‘ಪದ್ಮಶ್ರೀ’ ಪುರಸ್ಕೃತ ವೈದ್ಯೆ ಡಾ. ಕಾಮಿನಿ ರಾವ್, ಲಹರಿ ವೇಲು, ಲಕ್ಷ್ಮೀ ನಾರಾಯಣ, ಹಿರಿಯ ನಿರ್ಮಾಪಕ ಭಾ. ಮ. ಹರೀಶ್, ಪದ್ಮಾವತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ಹಿರಿಯ ನಟ ಶ್ರೀನಾಥ್, ‘ಗೀತಪ್ರಿಯಾ ಎಂಬುದು ನನಗೆ ತುಂಬ ಇಷ್ಟವಾದ ಹೆಸರು. ಹಿರಿಯ ನಿರ್ದೇಶಕ ಗೀತಪ್ರಿಯಾ ಅವರನ್ನು ಈ ಹೆಸರು ನೆನಪಿಸುವಂತಿದೆ. ‘ತಾಯವ್ವ’ ಸಿನಿಮಾದಲ್ಲಿ ತಾಯವ್ವನಾಗಿ ಅಭಿನಯಿಸಿರುವವರು ಕೂಡ ಗೀತಪ್ರಿಯಾ. ಈ ಸಿನಿಮಾದ ಕಥೆ ಮತ್ತು ತುಣುಕುಗಳನ್ನು ನೋಡಿದಾಗ ಇದೊಂದು ಸಾಮಾಜಿಕ ಕಥಾಹಂದರದ ಸಿನಿಮಾ ಎಂಬುದು ಗೊತ್ತಾಗುತ್ತದೆ. ಸೂಲಗಿತ್ತಿಯ ಕಾರ್ಯ, ಹೆಣ್ಣಿನ ಮಹತ್ವ ಎರಡನ್ನೂ ಈ ಸಿನಿಮಾ ಹೇಳುತ್ತದೆ. ಈ ಸಿನಿಮಾದಲ್ಲಿ ಒಂದು ಸಂದೇಶವಿದೆ. ಇಂಥ ಸಿನಿಮಾಗಳು ಹೆಚ್ಚಾಗಿ ಬರಬೇಕು. ‘ತಾಯವ್ವ’ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನಿಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಹಾಜರಿದ್ದ ಹಿರಿಯ ವೈದ್ಯರಾದ ಡಾ. ಕಾಮಿನಿರಾವ್ ಮಾತನಾಡಿ, ‘ಇದೊಂದು ಸೂಲಗಿತ್ತಿಯ ಕುರಿತಾದ ಸಿನಿಮಾ ಎಂಬುದನ್ನು ಕೇಳಿ ಸಂತೋಷವಾಯಿತು. ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ದೇವರ ರೂಪದಲ್ಲಿದ್ದವರು ಸೂಲಗಿತ್ತಿಯರು. ತಾವು ಮಾಡುವ ಕೆಲಸಕ್ಕೆ ಯಾವುದೇ ಲಾಭದ ನಿರೀಕ್ಷೆ ಮಅಡದೆ, ಅದೊಂದು ಸಮಾಜ ಸೇವೆ, ದೇವರ ಕೆಲಸ ಎಂಬಂತೆ ಸೂಲಗಿತ್ತಿಯರು ಕೆಲಸ ಮಾಡುತ್ತಿದ್ದರು. ಅದೇಷ್ಟೋ ಜೀವಗಳನ್ನು ಭೂಮಿಗೆ ತಂದ ಇಂಥ ಸೂಲಗಿತ್ತಿಯರನ್ನು ಇಂಥದ್ದೊಂದು ಸಿನಿಮಾದ ಮೂಲಕ ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಿನಿಮಾಕ್ಕೆ ಶುಭವಾಗಲಿ. ಇಂಥದ್ದೊಂದು ಸಿನಿಮಾವನ್ನು ತೆರೆಮೇಲೆ ತರಲು ಹೊರಟಿರುವ ನಿರ್ಮಾಪಕಿ ಮತ್ತು ನಟಿ ಗೀತಪ್ರಿಯಾ ಅವರಿಗೆ ‘ತಾಯವ್ವ’ ಸಿನಿಮಾ ದೊಡ್ಡ ಯಶಸ್ಸು ತಂದುಕೊಡಲಿ’ ಎಂದು ಹಾರೈಸಿದರು.

‘ತಾಯವ್ವ’ ಚಿತ್ರದ ಮೂಲಕ ಮೊದಲ ಬಾರಿಗೆ ನವ ಪ್ರತಿಭೆ ಗೀತಪ್ರಿಯ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ‘ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಸೂಲಗಿತ್ತಿ ನರಸಮ್ಮ ಅವರಂಥ ನೂರಾರು ಸೂಲಗಿತ್ತಿಯರು ಈ ಸಿನಿಮಾ ಮಾಡಲು ನಮಗೆ ಪ್ರೇರಣೆ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಾನು ʼತಾಯವ್ವʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದಲ್ಲಿ ಒಂದು ಸಂದೇಶವಿದೆ. ಎಲ್ಲರಿಗೂ ತಲುಪುವಂಥ ವಿಷಯ ಈ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ. ಈ ಸಿನಿಮಾ ಪ್ರೇಕ್ಷಕರ ಮನಮುಟ್ಟಿಲಿದೆʼ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅನಂತ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ತಾಯವ್ವ’ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ‘ತಾಯವ್ವ’ನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ‘ತಾಯವ್ವ’ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ.