One N Only Exclusive Cine Portal

ವ್ಯಾಪಾರ ಹೆಂಗೈತೆ ಸ್ವಾಮಿ?


ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅನೇಕರನ್ನು ಅಕಾಲದಲ್ಲಿ ಸೆಲೆಬ್ರಿಟಿಗಳೆಂದು ಬಿಂಬಿಸಿ ಹೊರ ಬಿಡುತ್ತಾ ಬಂದಿದೆ. ಈ ಶೋಗೆ ಹೋಗಿ ಬಂದ ನಂತರ ಆ ಮಂದಿಯ ಬದುಕಿನ ದಿಕ್ಕೇ ಬದಲಾಗಿ ಬಿಡುತ್ತದೆ ಎಂಬಂಥಾ ಭ್ರಮೆಯನ್ನೂ ಕೂಡಾ ಆಯೋಜಕರು ವ್ಯವಸ್ಥಿತವಾಗಿಯೇ ಹಬ್ಬಿಸುತ್ತಾ ಬಂದಿದ್ದಾರೆ. ಆದರೆ ಈವರೆಗಿನ ಸೀಜನ್ನುಗಳನ್ನು ಎತ್ತಲಿಂದ ನೋಡಿದರೂ ಹಾಗೆ ಖುಲ್ಲಂಖುಲ್ಲ ಅದೃಷ್ಟ ಖುಲಾಯಿಸಿಕೊಂಡೋರ‍್ಯಾರೂ ಕಣ್ಣಿಗೆ ಬೀಳೋದಿಲ್ಲ!


ಅದೆಲ್ಲ ಹಾಳುಬಿದ್ದೋಗಲಿ, ನಮ್ಮ ಸಂಖ್ಯಾಶಾಸ್ತ್ರ ನಿಪುಣ ಜಯಶ್ರೀನಿವಾಸನ್ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದ ಮೇಲೆ ಏನು ಮಾಡುತ್ತಿದ್ದಾರೆ? ಜಯನಗರದ ಅವರ ಮನೆ ಮುಂದಿನ ಕ್ರೌಡು ಹೇಗಿದೆ? ಈ ಕ್ರೌಡನ್ನು ಕಂಡು ಕರುಬಿದ ಆಸುಪಾಸಿನ ಮನೆಯವರ‍್ಯಾರಾದರೂ ಪಕ್ಕದ ಪೊಲೀಸ್ ಸ್ಟೇಷನ್ನಿಗೆ ದೂರು ಕೊಟ್ಟಿದ್ದಾರಾ? ಇಂಥಾ ನಾನಾ ಪ್ರಶ್ನೆಗಳನ್ನಿಟ್ಟು ಹುಡುಕ್ಯಾಡಿದರೆ ಅಂಥಾ ಯಾವ ದುರಂತಗಳೂ ನಡೆದ ಕುರುಹುಗಳು ಸಿಗೋದಿಲ್ಲ!


ಅರೇ ಈ ಜಯಶ್ರೀನಿವಾಸನ್ ತಾವೇ ಬಾಯಾರೆ ಬಿಗ್‌ಬಾಸ್‌ನೊಳಗೆ ತಮ್ಮ ಪ್ರಖಾಂಡ ಪಾಂಡಿತ್ಯ ಮತ್ತು ಜನಪ್ರಿಯತೆಯ ಬಗ್ಗೆ ಹೇಳಿಕೊಂಡಿದ್ದರಲ್ಲಾ? ಅಂಥಾ ಜಯಶ್ರೀನಿವಾಸನ್ ಈಗಂತೂ ಬಿಗ್‌ಬಾಸಿಂದ ಭಾಳಾ ಫೇಮಸ್ಸಾಗಿ ಅವರ ಮನೆ ಮುಂದೆ ಜಾತ್ರೆ ನೆರೆಯಲೇ ಬೇಕಲ್ಲಾ? ಅಂತ ಅಚ್ಚರಿ ಹುಟ್ಟಿಕೊಂಡಿರೋವಾಗಲೇ ಶ್ರೀ ಶ್ರೀ ಜಯಶ್ರೀನಿವಾಸ ಗುರೂಜಿ ಪಕ್ಕಾ ಅಪ್‌ಡೇಟಾಗಿ ಆನ್‌ಲೈನಲ್ಲೇ ಅಂಗಡಿ ತೆರೆದು ಕೂತಿದ್ದಾರೆ. ಅದಕ್ಕಾಗಿ ಅವರು ಫೇಸ್‌ಬುಕ್ ಲೈವ್ ಎಂಬ ಐಡಿಯಾದ ಮೊರೆ ಹೋಗಿದ್ದಾರೆ!


ಈ ಹಿಂದೆ ನಾನಾ ಚಾನೆಲ್ಲುಗಳಲ್ಲಿ ಅವರಿವರ ಹೆಸರು ಬದಲಾವಣೆ ಮಾಡೋ ಮೂಲಕ, ನೆಮ್ಮದಿಯಾಗಿ ಬಾಳುತ್ತಿದ್ದ ಗಂಡ-ಹೆಂಡರಿಯರಿಗೆ ‘ಮರುಮಾಂಗಲ್ಯ ಹೆಸರಿನಲ್ಲಿ ತಿರುಪತಿಗೆ ಕರೆದೊಯ್ದು ಉಂಡೆ ನಾಮ ತಿಕ್ಕುವ ಜ್ಯೋತಿಷಿಯಾಗಿ, ಸಂಖ್ಯಾಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದವರು. ಆದರೀಗ ಅವರು ಫೇಸ್ ಬುಕ್ ಲೈವ್‌ನಲ್ಲೇ ಮಿಕಗಳನ್ನು ಹುಡುಕಿ ಅಲ್ಲೇ ಸಂಖ್ಯಾ ಶಾಸ್ತ್ರದ ಮೂಲಕ ಅವರಿವರ ಸಂಕಷ್ಟಗಳನ್ನು ಪರಿಹಾರ ಮಾಡಲಾರಂಭಿಸಿದ್ದಾರೆ.


ನಿಜ, ಬಿಗ್‌ಬಾಸ್ ಮನೆಗೆ ಹೋಗಿ ಬಂದವರ ಬದುಕು ಬದಲಾಗುತ್ತೆ. ಜಯಶ್ರೀನಿವಾಸನ್ ತಮ್ಮ ಅಂಗಡಿಯನ್ನು ಫೇಸ್‌ಬುಕ್ ಲೈವಿಗೆ ಬದಲಾಯಿಸಿಕೊಂಡಿದ್ದಾರಲ್ಲಾ ಹಾಗೆ!

Leave a Reply

Your email address will not be published. Required fields are marked *


CAPTCHA Image
Reload Image