”ಒಬ್ಬರಲ್ಲ ನಾಲ್ಕು ಹುಡುಗೀರು ನನ್ನ ತೊಡೆ ಮೇಲೆ ಕೂತಿದ್ದರು!!”

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದಲ್ಲಿ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕ್ಷಣದಿಂದಲೇ ಅಭಿಮಾನಿಗಳೆಲ್ಲ ಕಂಗಾಲಾಗಿದ್ದರು. ಅದೆಷ್ಟೋ ಜನ ದರ್ಶನ್ ಬೇಗ ಗುಣಮುಖರಾಗಲೆಂದು ಹರಕೆ ಹೊತ್ತರು. ಚಿತ್ರರಂಗದ ಮಂದಿಯೆಲ್ಲ ಅವರು ಬೇಗನೆ ಮೇಲೆದ್ದು ಬರಲೆಂದು ಹಾರೈಸಿದರು. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬೆಡ್ಡಿಂದ ಬೇಗನೆ ಮೇಲೆದ್ದು ಬರಲಿ ಅಂತ ಆಶಿಸಿದ್ದರು…

ಅದೆಲ್ಲವೂ ಈಗ ಫಲ ನೀಡಿದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ!

ದರ್ಶನ್ ಅವರು ಬೆಂಗಳೂರಿಗೆ ತೆರಳುತ್ತಿದ್ದ ಕಾರು ಮೈಸೂರು ಸಮೀಪ ಅಪಘಾತಕ್ಕೀಡಾಗಿದ್ದು ಇದೇ ತಿಂಗಳ ೨೪ರಂದು. ಅದಾದ ನಂತರ ಮುರಿದ ಕೈಯನ್ನು ಆಪರೇಷನ್ ಮಾಡಲಾಗಿತ್ತು. ಮುರಿದ ಮೂಳೆಗೆ ಪ್ಲೇಟ್ ಜೋಡಿಸಿ ಚಿಕಿತ್ಸೆ ನೀಡಲಾಗಿತ್ತು. ಇದೆಲ್ಲದರಿಂದ ಐದು ದಿನಗಳ ಕಾಲ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿಯೇ ಇದ್ದ ದರ್ಶನ್ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ.

ಸತತವಾಗಿ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದುದರಿಂದ ದರ್ಶನ್ ಬಳಲಿದಂತೆ ಕಂಡರೂ ಅವರಲ್ಲಿ ಬಿಡುಗಡೆಯ ಖುಷಿ ಎದ್ದು ಕಾಣಿಸುತ್ತಿತ್ತು. ಆದರೆ ಆಸ್ಪತ್ರೆಯಿಂದ ಹೊರ ಬಂದ ಕೂಡಲೆ ಎದುರುಗೊಂಡ ದೃಷ್ಯ ಮಾಧ್ಯಮದವರನ್ನು ನೋಡಿದಾಕ್ಷಣವೇ ದರ್ಶನ್ ಏಕಾಏಕಿ ಸಿಟ್ಟಾಗಿದ್ದರು. ಅದಕ್ಕೆ ಕಾರಣ ಕೆಲ ವಾಹಿನಿಗಳು ‘ಅಪಘಾತವಾದ ಸಂದರ್ಭದಲ್ಲಿ ದರ್ಶನ್ ಅವರಿದ್ದ ಕಾರಿನಲ್ಲಿ ಹುಡುಗಿಯೊಬ್ಬಳಿದ್ದಳು’ ಎಂಬಂತೆ ಮಾಡಿದ್ದ ವರದಿ. ಇದಕ್ಕೆ ಪ್ರತಿಕ್ರಿಯೆ ನೀಡಿದ ದರ್ಶನ್ ‘ಎಲ್ಲವನ್ನೂ ನೀವೇ ನಿರ್ಧಾರ ಮಾಡಿದರೆ ಹೇಗೆ? ಯಾಕೆ ಊಹಾಪೋಹಗಳನ್ನು ಸುದ್ದಿ ಮಾಡ್ತೀರಿ. ಆವತ್ತು ನನ್ನ ಜೊತೆ ಹುಡುಗಿ ಇದ್ದಳು ಅಂತ ವರದಿ ಮಾಡಿದ್ದಿರಿ. ಒಬ್ಬಳಲ್ಲ ನಾಲ್ವರು ಹುಡುಗೀರು ನನ್ನ ತೊಡೆ ಮೇಲೆ ಕೂತಿದ್ದರು’ ಅಂತ ವ್ಯಂಗ್ಯವಾಗಿಯೇ ಎದಿರೇಟು ನೀಡಿದ್ದಾರೆ!

ಕಡೆಗೂ ಆಸ್ಪತ್ರೆಯಿಂದ ಬಿಡುಗಡೆಯಾಗಿರೋ ದರ್ಶನ್ ಇನ್ನೊಂದು ವಾರಗಳ ಕಾಲ ಮೈಸೂರಿನಲ್ಲಿಯೇ ಇರಲಿದ್ದಾರೆ. ಇದೇ ಮಂಗಳವಾರ ಮತ್ತೆ ಚೆಕಪ್‌ಗೆ ಹೋಗಬೇಕಿರೋದರಿಂದಾಗಿ ಮೈಸೂರಲ್ಲಿಯೇ ಉಳಿಯುವ ತೀರ್ಮಾನ ಮಾಡಿದ್ದಾರೆ. ಅಂತೂ ದರ್ಶನ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರ ಬಿದ್ದ ಸುದ್ದಿ ಕೇಳಿ ಅಭಿಮಾನಿಗಳೆಲ್ಲ ಸಂಭ್ರಮಿಸುತ್ತಿದ್ದಾರೆ.

#

ಇನ್ನಷ್ಟು ಓದಿರಿ

Scroll to Top