ʻರಕ್ಕಸಪುರದೊಳ್’ ಕೊಳ್ಳಿ ದೆವ್ವ ಇದೆಯಾ?

Picture of Cinibuzz

Cinibuzz

Bureau Report


ರಾಜ್ ಬಿ. ಶೆಟ್ಟಿ ಸಿನಿಮಾ ಬರ್ತಿದೆ ಅಂದರೇನೆ ಒಂಥರಾ ಸಂಭ್ರಮ. ಇವರ ಸಿನಿಮಾಗಳಲ್ಲಿ ಏನೋ ಒಂದು ಜಾದೂ ಇರುತ್ತದೆ ಅನ್ನೋದು ಪ್ರಜ್ಞಾವಂತ ಪ್ರೇಕ್ಷಕರ ನಂಬಿಕೆ. ಈ ಸಲ ಅವರು ನಮ್ಮನ್ನು ಸೀದಾ ಕರೆದೊಯ್ದಿರುವುದು ‘ರಕ್ಕಸಪುರದೊಳ್’ ಎಂಬ ವಿಚಿತ್ರ ಹಾಗೂ ನಿಗೂಢ ಲೋಕಕ್ಕೆ. ಹಳ್ಳಿಯ ಮುಗ್ಧ ಜನರ ನಡುವೆ ಹೆಪ್ಪುಗಟ್ಟಿದ ಮೌಢ್ಯ, ಕತ್ತಲಲ್ಲಿ ಕಾಡುವ ‘ಕೊಳ್ಳಿ ದೆವ್ವ’ದ ಭೀತಿ ಮತ್ತು ಅರಳು ಪೋಲಾಗುತ್ತಿರುವ ಮದುವಣಗಿತ್ತಿಯರ ಸರಣಿ ಕೊಲೆಗಳು – ಇವಿಷ್ಟನ್ನೂ ಇಟ್ಟುಕೊಂಡು ಸಿದ್ಧವಾಗಿರುವ ಈ ಸಿನಿಮಾ ಕೇವಲ ಕ್ರೈಂ ಥ್ರಿಲ್ಲರ್ ಆಗಿ ಉಳಿಯದೆ, ಮನುಷ್ಯನ ಮನಸ್ಸಿನ ಆಳದ ತಲ್ಲಣಗಳನ್ನು ಅನಾವರಣಗೊಳಿಸುವ ಮನೋವೈಜ್ಞಾನಿಕ ಕಥೆಯಾಗಿ ಹೊರಹೊಮ್ಮ


ರಕ್ಕಸಪುರದ ಅರಾಜಕತೆಯನ್ನು ಸರಿಪಡಿಸಲು ಎಂಟ್ರಿ ಕೊಡುವ ಇನ್ಸ್‌ಪೆಕ್ಟರ್ ಶಿವನಾಗಿ ರಾಜ್ ಬಿ. ಶೆಟ್ಟಿ ಇಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅಂದಹಾಗೆ, ಈ ಶಿವ ನಾವೂ ನೋಡುವ ಸಿದ್ದ ಮಾದರಿಯ ಸಿಂಗಂ ಸ್ಟೈಲ್ ಪೊಲೀಸಲ್ಲ! ಹಗಲಲ್ಲೇ ಕುಡಿತಕ್ಕೆ ಶರಣಾಗುವ ಮತ್ತು ಮಾನಸಿಕ ಕಾಯಿಲೆಯ ಹಿನ್ನೆಲೆ ಹೊಂದಿರುವ ಈ ಇನ್ಸ್‌ಪೆಕ್ಟರ್ ಪಾತ್ರದ ಸುತ್ತ ಹೆಣೆಯಲಾದ ಆವರಣವೇ ವಿಭಿನ್ನ. ಸಿನಿಮಾದ ಕಥೆ ಎಷ್ಟು ಗಟ್ಟಿಯಾಗಿದೆಯೋ, ಅದಕ್ಕೆ ಪೂರಕವಾಗಿರುವ ಸ್ಕ್ರೀನ್‌ಪ್ಲೇ ಅಷ್ಟೇ ಬಿಗಿಯಾಗಿದೆ. ಪ್ರತಿ ದೃಶ್ಯವನ್ನೂ ಅಚ್ಚುಕಟ್ಟಾಗಿ ಪೋಣಿಸಲಾಗಿದ್ದು, ಪ್ರೇಕ್ಷಕರು ಒಂದು ಕ್ಷಣವೂ ಕಣ್ಣು ಮಿಟುಕಿಸದಂತೆ ಕುಳಿತಲ್ಲೇ ಅಲುಗಾಡದಂತೆ ಮಾಡುವ ತಾಕತ್ತು ಈ ಕಥೆಗಿದೆ.


ಮದುವಣಗಿತ್ತಿಯರು ಒಂದಾದ ಮೇಲೊಂದರಂತೆ ಕೊಲೆಯಾದಾಗ ಇಡೀ ಹಳ್ಳಿ ಕೊಳ್ಳಿ ದೆವ್ವದ ಕಾಟವೆಂದು ಬೆಚ್ಚಿ ಬೀಳುತ್ತದೆ. ಇಲ್ಲಿ ಸ್ವಾಮೀಜಿಯೊಬ್ಬರ ಮಂತ್ರ-ತಾಯತಗಳ ಮಾಂತ್ರಿಕ ಆಟವೂ ಸಖತ್ ಜೋರಾಗಿದೆ. ಈ ಗೊಂದಲದ ಗೂಡಿಗೆ ಕಾಲಿಡುವ ಇನ್ಸ್‌ಪೆಕ್ಟರ್ ಶಿವ, ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ತನಿಖೆ ಆರಂಭಿಸುತ್ತಾನೆ. ಈ ಹಾದಿಯಲ್ಲಿ ಎದುರಾಗುವ ಸವಾಲುಗಳು ಮತ್ತು ತೆರೆದುಕೊಳ್ಳುವ ರಹಸ್ಯಗಳು ಸ್ಕ್ರೀನ್‌ಪ್ಲೇನ ನೈಜ ಶಕ್ತಿಯನ್ನು ತೋರಿಸುತ್ತವೆ. ಇನ್ನು ಈ ಚಿತ್ರದ ಅತಿದೊಡ್ಡ ಸರ್ಪ್ರೈಸ್ ಅಂದ್ರೆ ಅದು ಸೈಕೋ ಪಾತ್ರದಲ್ಲಿ ಮಿಂಚಿರುವ ಅನಿರುದ್ಧ್ ಭಟ್. ಅವರ ಅದ್ಭುತ ನಟನೆ ಪ್ರೇಕ್ಷಕರಲ್ಲಿ ಅಕ್ಷರಶಃ ನಡುಕ ಹುಟ್ಟಿಸುತ್ತದೆ. ಒಬ್ಬ ಸೈಕೋ ಕಿಲ್ಲರ್ನ ಮನಸ್ಥಿತಿ, ಬಾಡಿ ಲಾಂಗ್ವೇಜ್ ಮತ್ತು ಆ ಕ್ರೌರ್ಯವನ್ನು ಅನಿರುದ್ಧ್ ತೆರೆಯ ಮೇಲೆ ಸಮರ್ಥವಾಗಿ ನಿಭಾಯಿಸಿದ್ದು, ಮುಂದಿನ ದಿನಗಳಲ್ಲಿ ಅವರು ಸ್ಯಾಂಡಲ್‌ವುಡ್ನಲ್ಲಿ ದೊಡ್ಡ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವೇ ಇಲ್ಲ.


ನಿರ್ದೇಶಕ ರವಿ ಸಾರಂಗ ಇಲ್ಲಿ ಹಳ್ಳಿಯ ಪರಿಸರ ಮತ್ತು ಅಲ್ಲಿನ ನಿಗೂಢತೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಳ್ಳಿಯ ಅಂದವನ್ನು ಸೆರೆಹಿಡಿಯುತ್ತಲೇ ಕತ್ತಲಲ್ಲಿ ಅಡಗಿರುವ ಭಯವನ್ನು ತೆರೆಯ ಮೇಲೆ ಜೀವಂತವಾಗಿಸಿದೆ. ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಸಿನಿಮಾದ ವೇಗಕ್ಕೆ ಪೂರಕವಾಗಿದ್ದು, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಅರ್ಚನಾ ಕೊಟ್ಟಿಗೆ ಸೇರಿದಂತೆ ಪೋಷಕ ಕಲಾವಿದರ ನಟನೆ ಕಥೆಗೆ ಮತ್ತಷ್ಟು ಬಲ ತುಂಬಿದೆ. ಕ್ಲೈಮ್ಯಾಕ್ಸ್ ತಲುಪುವಾಗ ಸಿಗುವ ಟ್ವಿಸ್ಟ್‌ಗಳು ಸಿನಿಮಾದ ಮೆರುಗನ್ನು ಹೆಚ್ಚಿಸುತ್ತವೆ. ಒಟ್ಟಾರೆಯಾಗಿ, ‘ರಕ್ಕಸಪುರದೊಳ್’ ಸೈಕಲಾಜಿಕಲ್ ಥ್ರಿಲ್ಲರ್ ಪ್ರಿಯರಿಗೆ ಫುಲ್ ಮೀಲ್ಸ್ ಇದ್ದಂತೆ. ದೆವ್ವದ ಭಯಕ್ಕಿಂತಲೂ ಮನುಷ್ಯನ ಮನಸ್ಸಿನ ಕರಾಳತೆ ಎಂತಹದ್ದು ಎಂಬುದನ್ನು ಈ ಸಿನಿಮಾ ಮನಮುಟ್ಟುವಂತೆ ಚಿತ್ರಿಸಿದೆ.
*ಅರುಣ್ *

ಇನ್ನಷ್ಟು ಓದಿರಿ

Scroll to Top