ಕೈದಿಗಳ ಮನಪರಿವರ್ತನೆಗೆಂದೇ ಇರುವ ಸೆಂಟ್ರಲ್ ಜೈಲಿಗೆ ‘ಯೂನಿವರ್ಸಿಟಿ’ ಎನ್ನುವ ಮತ್ತೊಂದು ಹೆಸರೂ ಇದೆ. ಈಗ ಇದೇ ‘ಜೆಸಿ – ದಿ ಯೂನಿವರ್ಸಿಟಿ’ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬಂದಿದೆ. ಡಾಲಿ ಧನಂಜಯ ನಿರ್ಮಾಣದಲ್ಲಿ ಈ ಚಿತ್ರ ಶುರುವಾದಾಗಿನಿಂದಲೂ ಎಲ್ಲರಲ್ಲೂ ಕುತೂಹಲವಿತ್ತು. ಅದರಲ್ಲೂ ಹೊಸ ನಿರ್ದೇಶಕ, ಹೊಸ ಹೀರೋಗಾಗಿ ಡಾಲಿ ಸಿನಿಮಾ ಮಾಡ್ತಿದ್ದಾರೆ ಅಂದಮೇಲೆ ‘ಇದರಲ್ಲೇನೋ ಇರಬೇಕು’ ಎನ್ನುವ ಕೌತುಕವಿತ್ತಲ್ಲಾ? ಅದೀಗ ತೆರೆದುಕೊಂಡಿದೆ. ನಿಜಕ್ಕೂ ‘ಜೆಸಿ’ಯಲ್ಲಿ ಸಾಕಷ್ಟು ವಿಚಾರಗಳಿವೆ. ‘ಶಕ್ತಿಶಾಲಿ ಸಿನಿಮಾವೊಂದು ಹತ್ತಾರು ಜನ ಕಲಾವಿದರು, ತಂತ್ರಜ್ಞರನ್ನು ಹುಟ್ಟುಹಾಕುತ್ತದೆ’ ಎನ್ನುವ ಹಳೆಯ ನಂಬಿಕೆಯನ್ನು ಇವತ್ತಿಗೂ ನಿಜವಾಗಿಸಿರೋದು ‘ಜೆಸಿ’ ಸಿನಿಮಾ!

ರೌಡಿಸಂ ಕಥಾವಸ್ತು ಕನ್ನಡ ಚಿತ್ರರಂಗಕ್ಕೇನೂ ಹೊಸದಲ್ಲ. ಹಾಗೆ ನೋಡಿದರೆ ಅಂಡರ್ ವರ್ಲ್ಡ್ ಕುರಿತಾಗಿ ಬೇರೆ ಯಾವ ಭಾಷೆಯಲ್ಲೂ ಹೇಳದಷ್ಟು ವಿವರಣೆಗಳು, ಮಜಲುಗಳು ಕನ್ನಡ ಸಿನಿಮಾಗಳಲ್ಲಿ ತೆರೆದುಕೊಂಡಿವೆ. ‘ಜೆಸಿ’ಯಲ್ಲಿ ಇನ್ನೊಂಚೂರು ಆಳಕ್ಕಿಳಿದಿದ್ದಾರೆ ಅಷ್ಟೇ. ಆದರೆ, ಪಕ್ವವಾದ ಕಥೆಯೊಂದಕ್ಕೆ ಅಷ್ಟೇ ಅಚ್ಚುಕಟ್ಟಾದ ಚಿತ್ರಕಥೆ ರೂಪಿಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ಚೇತನ್ ಜಯರಾಮ್.
“ಪ್ರತಿಯೊಬ್ಬ ತಂದೇನೂ, ತಮ್ಮ ಮಗ ಕಿರೀಟ ಹೊತ್ಕೊಳ್ಳದಿದ್ದರೂ ಪರವಾಗಿಲ್ಲ… ಕಳಂಕ ಹೊತ್ಕೊಬಾರದು ಅನ್ಕೊಂತಾನೆ…”
ಜೆಸಿ ಸಿನಿಮಾಗಾಗಿ ಮಾಸ್ತಿ ಅವರು ಬರೆದಿರುವ ಮಾತಿದು. ಎಷ್ಟೊಂದು ನಿಜ ಅಲ್ವಾ? ಮಕ್ಕಳನ್ನು ಹೆತ್ತು ಬೆಳೆಸಿದ ಪ್ರತಿಯೊಬ್ಬ ತಂದೆ-ತಾಯಿ ಬಯಸೋದು ಇದನ್ನೇ… ಆದರೆ, ಎಷ್ಟೋ ಸಲ ಮಕ್ಕಳು ಉಲ್ಟಾ ಹೊಡೆದುಬಿಡ್ತಾರೆ. ಕೆಲವೊಮ್ಮೆ ಸಂದರ್ಭವೆಲ್ಲವೂ ನಸೀಬನ್ನು ಚೇಟಾಯಿಸುವುದಕ್ಕೇ (ಗೆಲಿಸುವುದಕ್ಕೆ) ಎದುರಾಗುತ್ತಿವೆಯೇನೋ ಅನ್ನಿಸಿಬಿಡುತ್ತದೆ. ಸಿಟ್ಟು ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಕರೆದುಕೊಂಡು ಹೋಗಿ ನಿಲ್ಲಿಸಿಬಿಡುತ್ತದೆ. ಸಣ್ಣದೊಂದು ಜಗಳ, ಕಾನೂನಿನ ಅಡಿಯಲ್ಲಿ ದೂರು (ಕಂಪ್ಲೇಂಟ್) ಕೊಡಲು ಹೋದಾಗ ಆಗುವ ಅವಮಾನ, ಪ್ರತೀಕಾರಕ್ಕೆ ನಿಲ್ಲುವಂತೆ ಮಾಡುತ್ತದೆ. ಯುದ್ಧಕ್ಕೆ ಅಂತಾ ಕರೆದುಕೊಂಡು ಹೋದವನೊಬ್ಬ, ರಣಾಂಗಣಕ್ಕೆ ತಳ್ಳಿ ತಾನು ಎಸ್ಕೇಪ್ ಆಗುತ್ತಾನೆ. ‘ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು’ ಅನ್ನೋ ಮಾತು ಇಲ್ಲಿ ಹೀರೋ ಬದುಕಿನಲ್ಲಿ ಅಕ್ಷರಶಃ ನಿಜವಾಗುತ್ತದೆ. ಸಣ್ಣ ಗಲಾಟೆಯಿಂದ ಶುರುವಾಗಿ ದೊಡ್ಡವನೊಬ್ಬನ ಕುತ್ತಿಗೆ ಸೀಳುತ್ತದೆ. ಏನಾಗುತ್ತಿದೆ ಅಂತ ನೋಡಿಕೊಳ್ಳಲೂ ಅವಕಾಶ ಕೊಡದ ಬದುಕಿನಲ್ಲಿ ಏನೇನೋ ಘಟಿಸಿಹೋಗುತ್ತದೆ…
ಇದು ‘ಜೆಸಿ’ ಸಿನಿಮಾದ ಮೂಲ ಧಾತು. ಮಧ್ಯಮ ವರ್ಗದ ಕುಟುಂಬದ ಹುಡುಗ; ಕಾಲೇಜು, ಹುಡುಗಿ, ಓಡಾಟ ಅಂತಾ ಜಾಲಿಯಾಗಿರುತ್ತಾನೆ. ಸಣ್ಣದೊಂದು ಅವಮಾನ, ಸಿಟ್ಟುಗಳೆಲ್ಲವೂ ಸೇರಿ ನಡೆಯಬಾರದ್ದೆಲ್ಲಾ ನಡೆಯುವಂತಾಗುತ್ತದೆ. ಆರಂಭದಲ್ಲೇ ಜೈಲಿನ ಕುರಿತು ಇಂಚಿಂಚೂ ವಿವರವನ್ನು ತೆರೆದಿಟ್ಟಿದ್ದಾರೆ. “ಆರು ಸಾವಿರದ ಐನೂರು ಜನರಲ್ಲಿ ಆರು ಸಾವಿರ ಜನ ಗಂಡಸರು, ಮಿಕ್ಕವರು ಮಹಿಳೆಯರು, ಇತ್ಯಾದಿಗಳು…” ಅಂತಾ ಶುರುವಾಗಿ, ಜೈಲಿನಲ್ಲೇ ಏನೇನು ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ರಿಸರ್ಚ್ ಮಾಡಿ ಹೇಳಲಾಗಿದೆ. “ಈ ಜಾಗ ಒಂಥರಾ ಟೀಚರ್ ಇಲ್ದೇ ಇರೋ ಸ್ಕೂಲ್ ತರ. ಬರ್ಬೇಕು, ಕಲಿಬೇಕು, ಬೆಳೀಬೇಕು, ಹೊಡಿತಾಯಿರ್ಬೇಕು…” ಅನ್ನೋ ಮಾತನ್ನು ಸಿನಿಮಾದ ಪಾತ್ರವೊಂದು ಹೇಳುತ್ತದೆ. ಪ್ರಸ್ತುತ ಪರಿಸ್ಥಿತಿಗೆ ಈ ಮಾತು ಅಕ್ಷರಶಃ ಕನ್ನಡಿ ಹಿಡಿದಂತಿದೆ.
ಇಡೀ ಸಿನಿಮಾದಲ್ಲಿ ಇಂಥ ಸಾಕಷ್ಟು ವಾಸ್ತವಕ್ಕೆ ಹತ್ತಿರವಿರುವ, ಮನಸ್ಸಿಗೊಪ್ಪುವ ಮಾತುಗಳಿವೆ. ಇಂಥದ್ದೊಂದು ಕಥೆ ಮತ್ತು ಚಿತ್ರಕಥೆ ಕೈಗೆ ಸಿಕ್ಕರೆ, ಅದನ್ನು ಹೇಗೆಲ್ಲಾ ಚೆಂದಗೊಳಿಸಬೇಕೋ ಅಷ್ಟನ್ನೂ ಮಾಸ್ತಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ನಿರ್ದೇಶಕ ಚೇತನ್ ಜಯರಾಮ್ ಕೂಡಾ ತೀರಾ ಶ್ರದ್ಧೆ ವಹಿಸಿ ದುಡಿದಿರುವುದು ಹಾಗೂ ಜೊತೆಗಿರುವವರನ್ನೆಲ್ಲಾ ದುಡಿಸಿರುವುದು ತೆರೆ ಮೇಲೆ ಪ್ರತಿಫಲಿಸಿದೆ. ಇವರು ಸೃಷ್ಟಿಸಿರುವ ಒಂದೊಂದು ಪಾತ್ರ (ಕ್ಯಾರೆಕ್ಟರ್) ಕೂಡಾ ಅಷ್ಟು ಸಹಜವಾಗಿ ಮೂಡಿಬಂದಿವೆ. ಎ-ಟು-ಜೆಡ್ ಪಾತ್ರಧಾರಿಗಳು ಅತ್ಯುತ್ತಮವಾಗಿ ನಟನೆ ಮಾಡಿದ್ದಾರೆ. ರಾಕಾ ಎನ್ನುವ ನಟ ಭಯಂಕರ ಕನ್ನಡ ಮಾತ್ರವಲ್ಲ, ಸೌತ್ ಇಂಡಿಯಾದಲ್ಲಿ ವಿಲನ್ ಆಗಿ ಅಬ್ಬರಿಸೋದು ಖಚಿತ. ಶಿವಮೊಗ್ಗದ ಜೈಲಿನ ವಾತಾವರಣದ ಜೊತೆಗೆ ರಾಘು ಮೈಸೂರು ಮತ್ತು ಅಂಬಿ ಅವರ ಕಲಾ ನಿರ್ದೇಶನ ಸಿನಿಮಾಗೆ ಒಳ್ಳೆ ಮೂಡ್ ಕ್ರಿಯೇಟ್ ಮಾಡಿದೆ. ರೋಹಿತ್ ಸೋವೆರ್ ಹಿನ್ನೆಲೆ ಸಂಗೀತ ಗುಣಮಟ್ಟ ಹೊಂದಿದೆ. ಅರ್ಜುನ್ ರಾಜ್ ಸಾಹಸ ಕೂಡ ಇಡೀ ಸಿನಿಮಾದಲ್ಲಿ ಹೆಚ್ಚು ಸ್ಕೋರ್ ಮಾಡಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪೂರ್ತಿ ಸಿನಿಮಾ ನೋಡಿದ ಮೇಲೆ ‘ಕ್ಯಾಮರಾ ವರ್ಕ್ ಯಾರದ್ದು?’ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಅಷ್ಟರಮಟ್ಟಿಗೆ ಡಿಓಪಿ ಕಾರ್ತಿಕ್ ಗೆದ್ದಿದ್ದಾರೆ.
ಬಹುಮುಖ್ಯವಾಗಿ ಸೂರ್ಯ ಪ್ರಖ್ಯಾತ್ ಎನ್ನುವ ಪಕ್ಕಾ ಹೀರೋ ಮೆಟೀರಿಯಲ್ ‘ಜೆಸಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ದಕ್ಕಿದೆ. ಕಾಲೇಜು ಹುಡುಗನಾಗಿ ಎಂಟ್ರಿ ಕೊಟ್ಟು, ಕಟ್ಟಕಡೆಯಲ್ಲಿ ರೌಡಿಸಂನಲ್ಲಿ ತಲೆಯೆತ್ತಿ ನಿಲ್ಲುವ ತನಕ ಹಂತ-ಹಂತವಾಗಿ ಈ ಹುಡುಗನ ನಟನೆ ಇಷ್ಟವಾಗುತ್ತಾ ಹೋಗುತ್ತದೆ. ನಾಯಕಿ ಭಾವನಾ ರೆಡ್ಡಿ ಕೂಡ ಅಷ್ಟೇ ಚೆಂದವಾಗಿ ನಟಿಸಿದ್ದಾಳೆ. ರಂಗಾಯಣ ರಘು ತಮ್ಮ ಪಾತ್ರವನ್ನು ಜೀವಂತಗೊಳಿಸಿದ್ದಾರೆ.
ಇಷ್ಟೆಲ್ಲಾ ಇರುವ ‘ಜೆಸಿ’ ಸಿನಿಮಾದಲ್ಲಿ ಸಣ್ಣದೊಂದು ಯಡವಟ್ಟಾಗಿದೆ. ಎಲ್ಲವನ್ನೂ ಹೇಳಬೇಕು ಎನ್ನುವ ಹಠಕ್ಕೆ ಬಿದ್ದು, ಸಿನಿಮಾವನ್ನು ತುಸು ಎಳೆದುಬಿಟ್ಟಿದ್ದಾರೆ. ಕಡೇ ಪಕ್ಷ ಇಪ್ಪತ್ತು ನಿಮಿಷ ಕತ್ತರಿ ಹಾಕಿದ್ದಿದ್ದರೆ ಬಹುಶಃ ‘ಜೆಸಿ’ ಇನ್ನಷ್ಟು ಶಕ್ತಿ ಪಡೆಯುತ್ತಿತ್ತು. ಅದೆಲ್ಲ ಏನೇ ಇರಲಿ, ಕಮರ್ಷಿಯಲ್ ಮಾತ್ರವಲ್ಲ, ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಇದಾಗಿದೆ.
- ಅರುಣ್ ಕುಮಾರ್ ಜಿ.









































