ಬೆಚ್ಚಿ ಬೀಳಿಸುವ ‘ಸೀಟ್ ಎಡ್ಜ್’!

Picture of Cinibuzz

Cinibuzz

Bureau Report

ಇಂದಿನ ಡಿಜಿಟಲ್ ಯುಗದಲ್ಲಿ ರಾತ್ರೋರಾತ್ರಿ ಫೇಮಸ್ ಆಗಬೇಕು ಎಂಬ ಹಪಾಹಪಿ ಯುವಜನತೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ‘ಸೀಟ್ ಎಡ್ಜ್’ ಸಿನಿಮಾ ಒಂದು ಕನ್ನಡಿ ಹಿಡಿದಂತಿದೆ. ನಿರ್ದೇಶಕ ಚೇತನ್ ಶೆಟ್ಟಿ ಅವರು ಇಂದಿನ ಟ್ರೆಂಡ್‌ಗೆ ಹಾರರ್ ಮಸಾಲೆ ಬೆರೆಸಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತಹ ಒಂದು ರೋಚಕ ಕಥೆಯನ್ನು ತೆರೆಯ ಮೇಲೆ ತಂದಿದ್ದಾರೆ. ಕೇವಲ ಭಯ ಹುಟ್ಟಿಸುವುದು ಮಾತ್ರವಲ್ಲದೆ, ಇಂದಿನ ತಲೆಮಾರಿನ ಹುಡುಗರು ಪ್ರಸಿದ್ಧಿಗಾಗಿ ಎಂತಹ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬ ನೈಜ ಅಂಶವನ್ನೂ ಸಿನಿಮಾ ಚರ್ಚಿಸುತ್ತದೆ.

ಚಿತ್ರದ ನಾಯಕ ಸಿದ್ದು (ಸಿದ್ದು ಮೂಲಿಮನಿ) ಒಬ್ಬ ಕನಸುಗಾರ. ಎಲ್ಲರಂತೆ ಕೆಲಸಕ್ಕೆ ಹೋಗಿ ಬದುಕುವ ಬದಲು, ಕೈಯಲ್ಲೊಂದು ಮೊಬೈಲ್ ಹಿಡಿದು ‘ವ್ಲಾಗರ್’ ಆಗಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಬೇಕು ಎಂಬುದು ಅವನ ಆಸೆ. ಆದರೆ ಅವನು ಮಾಡುವ ವಿಡಿಯೋಗಳು ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿರುತ್ತವೆ. ತನ್ನನ್ನು ಹೀಯಾಳಿಸುವವರ ಬಾಯಿ ಮುಚ್ಚಿಸಲು ಸಿದ್ದು ಆಯ್ಕೆ ಮಾಡಿಕೊಳ್ಳುವ ದಾರಿ ಭಯಾನಕವಾದುದು. ಯಾರೂ ವಾಪಸ್ ಬಾರದ ಆ ನಿಗೂಢ ‘ಘೋಸ್ಟ್ ಸಿಟಿ’ಯೊಳಗೆ ಕ್ಯಾಮೆರಾ ಹಿಡಿದು ನುಗ್ಗುವ ಸಿದ್ದು, ಅಲ್ಲಿ ಎದುರಿಸುವ ಸವಾಲುಗಳೇನು ಮತ್ತು ಆತ ಮರಳಿ ಬರುತ್ತಾನಾ ಎಂಬ ಕುತೂಹಲದ ಎಳೆಯೇ ಸಿನಿಮಾವನ್ನು ‘ಸೀಟ್ ಎಡ್ಜ್’ನಲ್ಲಿ ಕೂರಿಸುತ್ತದೆ.

ಸಿನಿಮಾದ ಮೊದಲಾರ್ಧವು ಹಾಸ್ಯದ ಲೇಪನದೊಂದಿಗೆ ಲಘುವಾಗಿ ಸಾಗುತ್ತದೆ. ನಾಯಕ ಮತ್ತು ನಾಯಕಿ ರವೀಕ್ಷಾ ಶೆಟ್ಟಿ ಅವರ ನಡುವಿನ ಕೆಮಿಸ್ಟ್ರಿ ಹಾಗೂ ಯೋಗ ಟ್ರೈನಿಯಾಗಿ ರವೀಕ್ಷಾ ಅವರ ಅಭಿನಯ ಗಮನ ಸೆಳೆಯುತ್ತದೆ. ರಾಘು ರಾಮನಕೊಪ್ಪ ಅವರ ಕಾಮಿಡಿ ಟೈಮಿಂಗ್ ಪ್ರೇಕ್ಷಕರಿಗೆ ಕಚಗುಳಿಯಿಡುತ್ತದೆ. ಆದರೆ ಕಥೆ ದ್ವಿತೀಯಾರ್ಧಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಚಿತ್ರದ ಸ್ವರೂಪವೇ ಬದಲಾಗುತ್ತದೆ. ಹಾಸ್ಯದ ಜಾಗವನ್ನು ಭಯ ಆಕ್ರಮಿಸಿಕೊಳ್ಳುತ್ತದೆ. ಘೋಸ್ಟ್ ಸಿಟಿಯ ದೃಶ್ಯಗಳು ತಣ್ಣಗೆ ಕೂತವರನ್ನು ಬೆಚ್ಚಿ ಬೀಳಿಸುವಂತಿವೆ. ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಗಿರೀಶ್ ಶಿವಣ್ಣ ಅಚ್ಚುಕಟ್ಟಾಗಿ ನಟಿಸಿದ್ದು, ಮಿಮಿಕ್ರಿ ಗೋಪಿ ಹಾಗೂ ಲಕ್ಷ್ಮೀ ಸಿದ್ದಯ್ಯ ಅವರ ಅಭಿನಯ ಚಿತ್ರಕ್ಕೆ ಬಲ ತುಂಬಿದೆ.

ತಾಂತ್ರಿಕವಾಗಿ ಸಿನಿಮಾ ಸಬಲವಾಗಿ ಮೂಡಿಬಂದಿದೆ. ಆಕಾಶ್ ಪರ್ವ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಕೇಳಲು ಇಂಪಾಗಿದ್ದು, ಹಿನ್ನೆಲೆ ಸಂಗೀತವು ಹಾರರ್ ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ಛಾಯಾಗ್ರಹಣವು ಚಿತ್ರದ ಗಂಭೀರತೆಯನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಂಕಲನ ಕಾರ್ಯದಲ್ಲಿ ಸ್ವಲ್ಪ ಬಿಗಿತವಿದ್ದಿದ್ದರೆ ಚಿತ್ರದ ಓಟಕ್ಕೆ ಇನ್ನಷ್ಟು ವೇಗ ಸಿಗುತ್ತಿತ್ತು ಎನಿಸಿದರೂ, ಇಡೀ ಸಿನಿಮಾ ಒಂದು ಕಂಪ್ಲೀಟ್ ಮಾಸ್ ಶೈಲಿಯ ಎಂಟರ್ಟೈನರ್ ಆಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ವಾರಾಂತ್ಯದಲ್ಲಿ ಥ್ರಿಲ್ ಅನುಭವಿಸಲು ಬಯಸುವ ಹಾರರ್ ಪ್ರಿಯರಿಗೆ ‘ಸೀಟ್ ಎಡ್ಜ್’ ಒಂದು ಮಿಸ್ ಮಾಡಬಾರದ ಸಿನಿಮಾ.

ಇನ್ನಷ್ಟು ಓದಿರಿ

Scroll to Top