ಕನ್ನಡ ಚಿತ್ರರಂಗದಲ್ಲಿ ಸದಾ ಕಮರ್ಷಿಯಲ್ ಚಿತ್ರಗಳ ಅಬ್ಬರವೇ ಜೋರು. ಈ ಅಬ್ಬರದ ನಡುವೆ ವಿಭಿನ್ನ ಹಾದಿಯ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳು ಬರುವುದು ಬಹಳ ವಿರಳ. ಆದರೆ, ಈ ವರ್ಷದ ಆರಂಭದಲ್ಲೇ ಗಾಂಧಿನಗರಕ್ಕೆ ಹೊಸ ಕಳೆ ತಂದಿರುವ ಚಿತ್ರ ‘ವಿಕಲ್ಪ’. ಇದೇ ಜನವರಿ 30ಕ್ಕೆ ತೆರೆಕಂಡಿರುವ ಈ ಸಿನಿಮಾ, ಸುಮ್ಮನೆ ಕೂತವರ ಮನಸ್ಸನ್ನು ಮೆಲ್ಲನೆ ಆವರಿಸಿಕೊಳ್ಳುತ್ತಾ, ಆಲೋಚನೆಗಳನ್ನು ಕೆದಕುವಲ್ಲಿ ಯಶಸ್ವಿಯಾಗಿದೆ. ಬಹುಕಾಲದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಒಂದು ಗಟ್ಟಿ ಕಥೆಯುಳ್ಳ ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರ ಮೂಡಿಬಂದಿದೆ ಎಂಬ ಸಮಾಧಾನ ಪ್ರೇಕ್ಷಕ ವಲಯದಲ್ಲಿ ಕೇಳಿಬರುತ್ತಿದೆ.

ಸುರೂಸ್ ಟಾಕೀಸ್ ಲಾಂಛನದಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಪೃಥ್ವಿರಾಜ್ ಪಾಟೀಲ್ ಕಥೆ ಹೆಣೆದು ಆಕ್ಷನ್ ಕಟ್ ಹೇಳಿದ್ದಾರೆ. ಇಡೀ ಸಿನಿಮಾದ ಆತ್ಮ ಇರುವುದು ‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ ಎನ್ನುವ ಮಾನಸಿಕ ವ್ಯಾಧಿಯ ಎಳೆಯಲ್ಲಿ. ಬಾಲ್ಯದಲ್ಲಿ ನಡೆದ ಒಂದು ಭಯಾನಕ ಘಟನೆ ಒಬ್ಬ ವ್ಯಕ್ತಿಯ ಭವಿಷ್ಯದ ಮೇಲೆ ಎಂತಹ ಕರಾಳ ನೆರಳು ಚೆಲ್ಲಬಹುದು ಎಂಬುದನ್ನು ಇಲ್ಲಿ ಅತ್ಯಂತ ಕುತೂಹಲಕಾರಿಯಾಗಿ ತೆರೆಮೇಲೆ ತರಲಾಗಿದೆ. ಪೃಥ್ವಿ ಎಂಬ ಬಾಲಕನ ಜೀವನದಲ್ಲಿ ಎದುರಾಗುವ ಆ ನಿಗೂಢ ಘಟನೆ ಯಾವುದು? ಅದು ಆತನನ್ನು ಯಾವ ಮಟ್ಟಕ್ಕೆ ಬಾಧಿಸುತ್ತದೆ? ಆ ನೆರಳಿನಿಂದ ಆತ ಪಾರಾಗುತ್ತಾನೋ ಅಥವಾ ಅದಕ್ಕೇ ಬಲಿಯಾಗುತ್ತಾನೋ ಎಂಬ ಪ್ರಶ್ನೆಗಳ ಸುತ್ತ ಇಡೀ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಸಿನಿಮಾದ ಶೀರ್ಷಿಕೆ ‘ವಿಕಲ್ಪ’ ಎನ್ನುವುದೇ ಒಂದು ಅರ್ಥಗರ್ಭಿತ ಪದ. ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಒಂದು ಗೊಂದಲಮಯ ಸ್ಥಿತಿ. ಈ ಸ್ಥಿತಿಯಲ್ಲಿ ಸಿಲುಕುವ ನಾಯಕನ ತೊಳಲಾಟ ಪ್ರೇಕ್ಷಕರಿಗೂ ಆತಂಕ ತರುತ್ತದೆ. ಆದರೆ, ನಿರ್ದೇಶಕ ಪೃಥ್ವಿರಾಜ್ ಅವರು ಕೇವಲ ಮನೋವೈಜ್ಞಾನಿಕ ಅಂಶಗಳಿಗೆ ಅಂಟಿಕೊಳ್ಳದೆ ಅದಕ್ಕೆ ಸಸ್ಪೆನ್ಸ್, ಕಾಮಿಡಿ ಮತ್ತು ಪ್ರೇಮಕಥೆಯ ಲೇಪನವನ್ನೂ ಹಚ್ಚಿದ್ದಾರೆ. ಹೀಗಾಗಿ, ಇದೊಂದು ಗಂಭೀರ ಸಿನಿಮಾದಂತೆ ಭಾಸವಾಗದೆ, ಎಲ್ಲೂ ಬೋರ್ ಹೊಡೆಸದ ಮನರಂಜನಾತ್ಮಕ ಚಿತ್ರವಾಗಿ ಮೂಡಿಬಂದಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಮಲೆನಾಡು ಮತ್ತು ಕರಾವಳಿಯ ಸುಂದರ ತಾಣಗಳಲ್ಲಿ ನಡೆದಿರುವುದು ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಅಲ್ಲಿನ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಕಲೆಯ ಸೊಗಡು ಚಿತ್ರದ ಓಟಕ್ಕೆ ಪೂರಕವಾಗಿ ಬಳಕೆಯಾಗಿದೆ.
ಪ್ರತಿಭೆಗೆ ಬೆಲೆ ನೀಡುವ ಈ ಚಿತ್ರದಲ್ಲಿ ಬಹುತೇಕ ಹೊಸಬರ ದಂಡೇ ಇದೆ. ನಾಯಕನಾಗಿ ಮತ್ತು ನಿರ್ದೇಶಕನಾಗಿ ಪೃಥ್ವಿರಾಜ್ ಪಾಟೀಲ್ ಎರಡು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಗಂಭೀರ ನಟನೆಗೆ ಸರಿಸಾಟಿಯಾಗಿ ನಿಲ್ಲುವ ನಾಗಶ್ರೀ ಹೆಬ್ಬಾರ್ ತಮ್ಮ ಸಹಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಹಿರಿಯ ನಟಿ ಹರಿಣಿ ಶ್ರೀಕಾಂತ್ ಅವರ ಅನುಭವ ಚಿತ್ರಕ್ಕೆ ಶಕ್ತಿ ತುಂಬಿದ್ದರೆ, ಗಣಪತಿ ವಡ್ಡಿನಗದ್ದೆ ಅವರ ಉತ್ತರ ಕನ್ನಡ ಶೈಲಿಯ ಹಾಸ್ಯವು ಪ್ರೇಕ್ಷಕರ ಮೊಗದಲ್ಲಿ ನಗು ತರಿಸುತ್ತದೆ. ಇನ್ನುಳಿದಂತೆ ಸಂಧ್ಯಾ ವಿನಾಯಕ್, ಸ್ವರೂಪ್ ಬಚ್ಚ್ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಬಹಳ ಶ್ರೀಮಂತವಾಗಿದೆ. ಅಭಿರಾಮ್ ಗೌಡ ಅವರ ಕ್ಯಾಮೆರಾ ಕಣ್ಣು ಮಲೆನಾಡಿನ ಹಸಿರು ಮತ್ತು ಕರಾವಳಿಯ ಸೊಬಗನ್ನು ಕಲಾತ್ಮಕವಾಗಿ ಸೆರೆಹಿಡಿದಿದೆ. ಸಂವತ್ಸರ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿದ್ದು, ಚಿತ್ರಮಂದಿರದಿಂದ ಹೊರಬಂದ ಮೇಲೂ ಗುನುಗುವಂತಿವೆ. ಸುರೇಶ್ ಆರ್ಮುಗಂ ಅವರ ಮೊನಚಾದ ಸಂಕಲನ ಚಿತ್ರಕ್ಕೆ ವೇಗ ನೀಡಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸೃಜನಶೀಲ ಹಾದಿಯಲ್ಲಿ ಸಾಗಿರುವ ‘ವಿಕಲ್ಪ’ ಒಂದು ಪ್ರಾಮಾಣಿಕ ಪ್ರಯತ್ನ. ಹೊಸತನವನ್ನು ಮತ್ತು ಗಟ್ಟಿ ಕಥೆಯನ್ನು ಪ್ರೀತಿಸುವ ಸಿನಿಮಾ ಪ್ರೇಮಿಗಳು ಖಂಡಿತವಾಗಿಯೂ ಒಮ್ಮೆ ಈ ಚಿತ್ರವನ್ನು ನೋಡಿಬರಬಹುದು. ಹೊಸಬರ ಈ ಸಾಹಸಕ್ಕೆ ಬೆನ್ನುತಟ್ಟುವ ಮೂಲಕ ಸ್ಯಾಂಡಲ್‌ವುಡ್‌ನ ಇಂತಹ ವಿಭಿನ್ನ ಪ್ರಯೋಗಗಳಿಗೆ ಸಾಥ್ ನೀಡಲು ಇದು ಸಕಾಲ.
ಶಿವು ಅರಿಸಿನಗೆರೆ









































