ಕನ್ನಡ ಚಿತ್ರರಂಗ ಯಾವಾಗೆಲ್ಲಾ ಡಲ್ ಅನ್ನಿಸುತ್ತೋ, ಆ ಹೊತ್ತಲ್ಲೇ ಎಂಟ್ರಿ ಕೊಟ್ಟು ಪವರ್ ಕೊಡೋದು ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಅವರ ಸ್ಟೈಲು. ತುಂಟಾಟ, ಲಂಕೇಶ್ ಪತ್ರಿಕೆ, ಮೊನಾಲಿಸಾ, ಐಶ್ವರ್ಯ, ಹುಡುಗ-ಹುಡುಗಿ, ಸೇರಿದಂತೆ ಬಹುತೇಕ ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದವರು ಇಂದ್ರಜಿತ್ ಲಂಕೇಶ್. ಈಗ ತಮ್ಮ ಮಗ ಸಮರ್ಜಿತ್ ಲಂಕೇಶ್ ಅವರನ್ನು ಹೀರೋ ಆಗಿ ಲಾಂಚ್ ಮಾಡುತ್ತಿದ್ದಾರೆ. ʻಗೌರಿʼ ಚಿತ್ರ ಪೂರ್ತಿ ರೆಡಿಯಾಗಿ ಬಿಡುಗಡೆಗೆ ತಯಾರಾಗಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕದ ನಂತರ ಹಾಡುಗಳಲ್ಲೇ ಕಥೆ ಹೇಳುವ ಪ್ರಯತ್ನವನ್ನು ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ. ʻಗೌರಿʼ ಸಿನಿಮಾದಲ್ಲಿ ಬರೋಬ್ಬರಿ ಎಂಟು ಅದ್ಭುತ ಹಾಡುಗಳಿವೆ. ʻಗೌರಿʼ ಸಿನಿಮಾಗೆ ಒಬ್ಬರಲ್ಲ, ಇಬ್ಬರಲ್ಲ ಒಟ್ಟು ಐದು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ.
ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಸಾಮಾನ್ಯಕ್ಕೆ ಸನ್ನಿವೇಶವನ್ನು ಹೇಳಿ ಗೀತರಚನೆಕಾರರಿಂದ ಹಾಡು ಬರೆಸಿಬಿಡುತ್ತಾರೆ. ಆದರೆ, ಇಂದ್ರಜಿತ್ ಲಂಕೇಶ್ ಸ್ವತಃ ತಾವೇ ಗೀತಸಾಹಿತಿಗಳೊಂದಿಗೆ ಕೂತು, ಪ್ರತಿಯೊಂದೂ ವಿವರವನ್ನು ಹೇಳಿ ಹಾಡುಗಳನ್ನು ಬರೆಸಿಕೊಂಡಿದ್ದಾರೆ. ಈ ಕಾರಣದಿಂದಲೇ ಈಗ ಬಿಡುಗಡೆಯಾಗಿರುವ ಮೊದಲ ಹಾಡು ಅದ್ಭುತ ರೆಸ್ಪಾನ್ಸ್ ಪಡೆದಿದೆ. ಬಿಡುಗಡೆಯಾದ ದಿನದೊಪ್ಪತ್ತಿಗೇ ಒಂದೂವರೆ ಕೋಟಿಯಷ್ಟು ವ್ಯೂಸ್ ಪಡೆದಿದೆ. ಈಗ ಯೂ ಟ್ಯೂಬ್ ರೀಲ್ಸ್, ಶಾರ್ಟ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ವಿಡಿಯೋಗಳಲ್ಲೆಲ್ಲಾ ಚಂದನ್ ಶೆಟ್ಟಿಯವರ ʻಒಳ್ಳೆ ಟೈಮ್ ಬರತ್ತೆʼ ಹಾಡು ವೈರಲ್ ಆಗಿ ಹರಿದಾಡುತ್ತಿದೆ.
ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ,ಜಾವೇದ್ ಅಲಿ,ಅನನ್ಯ ಭಟ್, ನಿಹಾಲ್ ತೌರೋ ,ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಅವರ ಜೊತೆಗೆ ಸ್ವತಃ ಚಿತ್ರ ಹೀರೋ ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ ಸಿನಿಮಾ ಅಂದಮೇಲೆ ಅಲ್ಲಿ ಅದ್ಧೂರಿ ತಾಂತ್ರಿಕತೆ ಇದ್ದೇ ಇರುತ್ತದೆ. ಈ ಸಲ ತಮ್ಮ ಮಗನನ್ನು ಲಾಂಚ್ ಮಾಡುತ್ತಿದ್ದಾರೆ ಅಂದಮೇಲೆ ಅದು ಇನ್ನೂ ಹೆಚ್ಚಾಗೇ ಇರುತ್ತದೆ ಅನ್ನೋದರಲ್ಲಿ ಡೌಟೇ ಇಲ್ಲ!
ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರದಲ್ಲಿ ಸಾನ್ಯಾ ಅಯ್ಯರ್ ಕೂಡಾ ಹೀರೋಯಿನ್ ಆಗಿ ಲಾಂಚ್ ಆಗುತ್ತಿರುವುದು ವಿಶೇಷ!
No Comment! Be the first one.