ಕನ್ನಡದ ಪ್ರತಿಭಾನ್ವಿತ ಜೆಕೆ ಊರೂಫ್ ಜಯರಾಮ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಇಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಜೆಕೆ ಹೊಸ ಸಿನಿಮಾಗೆ ವೀರ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ವೀರ್ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆಕೆ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
No Comment! Be the first one.