ಸೂಪರು-ಸುಮಾರುಗಳ ನಡುವೆ ಮಿಕ್ಕಿದ್ದೆಲ್ಲಾ ಢಮಾರು!
ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ದರ್ಶನ್ ಅವರ ಕಾಟೇರ ಐ.ಸಿ.ಯೂ ಬೆಡ್ಡಲ್ಲಿದ್ದ ಸ್ಯಾಂಡಲ್ವುಡ್ಗೆ ಆಕ್ಸಿಜನ್ ಕೊಟ್ಟಿದ್ದು ನಿಜ. ಆ ನಂತರ ಬಂದ ಉಪಾಧ್ಯಕ್ಷ ಮತ್ತಷ್ಟು ಚೈತನ್ಯ ತುಂಬಿದ್ದ. ಹಣೇಬರಹ ಮತ್ತೆ ಕೈಕೊಟ್ಟು ಬಂದ ಸಿನಿಮಾಗಳೆಲ್ಲಾ ದೊಪ್ಪದೊಪ್ಪನೆ ನೆಲಕ್ಕುರುಳುತ್ತಿವೆ. ಎಪ್ಪತ್ತು ಚಿತ್ರಗಳಲ್ಲಿ ಹತ್ತು ಹನ್ನೆರಡು ಸಿನಿಮಾಗಳು ಉತ್ತಮ ಮತ್ತು ಅತ್ಯುತ್ತಮ ಅನ್ನಿಸಿಕೊಂಡರೆ ಮಿಕ್ಕೆಲ್ಲವೂ ಸುಮಾರು ಢಮಾರುಗಳೇ. ಈ ವರ್ಷ ತೆರೆಗೆ ಬಂದು ಹೆಸರು ಮಾಡಿದ ಮತ್ತು ಸೋಲುಂಡ ಕೆಲವು ಸಿನಿಮಾಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ…
ಬೆಸ್ಟ್ ಮೂವೀಸ್ : ಕೆರೆಬೇಟೆ, ಕೋಳಿ ಹೆಸ್ರು, ಒಂದು ಸರಳ ಪ್ರೇಮಕಥೆ, ಮಾರಿಗೋಲ್ಡ್, ರಂಗಸಮುದ್ರ, ಶಾಖಾಹಾರಿ, ಬ್ಲಿಂಕ್, ಫೋಟೋ, ಧೈರ್ಯಂ ಸರ್ವತ್ರ ಸಾಧನಂ, ಚೌಚೌ ಬಾತ್, ಜಸ್ಟ್ಪಾಸ್…
ಯುವ : ಸಂತೋಷ್ ಆನಂದರಾಮ್ ಅವರ ಓವರ್ ಕಾನ್ಫಿಡೆನ್ಸಿನಲ್ಲಿ ಹುಟ್ಟಿಕೊಂಡ ಸರಾಸರಿ ಸಿನಿಮಾ ಯುವ. ಒಬ್ಬ ಹೀರೋನನ್ನು ಲಾಂಚ್ ಮಾಡಲು ಬೇಕಾದ ಅಂಶಗಳಿಲ್ಲದ, ಪೂರ್ವ ತಯಾರಿಗಳಿಲ್ಲದೇ ರೂಪಿಸಿರುವ ಸಿನಿಮಾ ಇದು. ಒಂದು ವೇಳೆ ಯುವ ಕಂಟೆಂಟು, ಹಾಡುಗಳೆಲ್ಲಾ ಕ್ಲಿಕ್ ಆಗಿದ್ದಿದ್ದರೆ, ಈ ವರ್ಷದ ಅತಿ ದೊಡ್ಡ ಹಿಟ್ ಆಗುವ ಎಲ್ಲ ಸಾಧ್ಯತೆ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ಇದು ನಿರ್ದೇಶಕರ ಅಜಾಗರೂಕತೆ ಅಲ್ಲದೆ ಬೇರೇನೂ ಅಲ್ಲ.
5ಡಿ : ಎಸ್.ನಾರಾಯಣ್ ಯಾಕಿನ್ನೂ ನಿವೃತ್ತಿ ತೆಗೆದುಕೊಂಡಿಲ್ಲ? 5 ಡಿ ಸಿನಿಮಾವನ್ನು ನೋಡಿದವರಲ್ಲಿ ಸಾಕಷ್ಟು ಜನ ಹೀಗಂದುಕೊಂಡಿದ್ದರು. ಸಿನಿಮಾ ವ್ಯಾಮೋಹಿ ನಿರ್ಮಾಪಕ ಕುಮಾರ್ ಅವರನ್ನು ಹಳ್ಳಕ್ಕೆ ತಳ್ಳಿ ಆಳ ಅಳತೆ ಮಾಡಿದ್ದಾರೆ ನಾಣಿ. ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಆದಿತ್ಯ ಹೀರೋ ಅಂತಾ ಬಿಂಬಿಸಿದ್ದರು. ಆದರೆ, ಸಿನಿಮಾದ ಪೂರ್ತಿ ನಾಣಿ ಆವರಿಸಿಕೊಂಡಿದ್ದರು. ಒಂದು ಕಾಲದಲ್ಲಿ ನಿರ್ದೇಶಕ ನಾಣಿ ಹೆಸರು ನೋಡಿ ಜನ ಥೇಟರಿಗೆ ಬರುತ್ತಿದ್ದ ಕಾಲವಿತ್ತು. ಈ ಸಲ ಅವರ ಹೆಸರೇ ʻ5 ಡಿʼಗೆ ಮುಳುವಾಯಿತು.
ಅವತಾರ ಪುರುಷ 2 : ನಿರ್ದೇಶಕ ಸಿಂಪಲ್ಅವರ ಸ್ಟ್ರೆಂಥೇ ಬೇರೆ. ತೀರಾ ಸರಳ ಎನ್ನಿಸುವ ಕಥಾವಸ್ತುವನ್ನು ಮನಸ್ಸಿನ ಹತ್ತಿರಕ್ಕೆ ತಂದು ನಿಲ್ಲಿಸುವ ಕಲೆ ಅವರಿಗೆ ಸಿದ್ಧಿಸಿದೆ. ಇದೇ ವರ್ಷ ತೆರೆಗೆ ಬಂದಿರುವ ಸರಳ ವಿರಳ ಪ್ರೇಮಕಥೆ ಅದಕ್ಕೊಂದು ಉದಾಹರಣೆ. ಇದರ ನಡುವೆ ಆಗಾಗ ಸುನಿ ತಮಗಲ್ಲದ, ತಮ್ಮದಲ್ಲದ ಸಬ್ಜೆಕ್ಟುಗಳನ್ನು ಮುಟ್ಟುತ್ತಾರೆ. ಅವತಾರ ಪುರುಷ ಸಿನಿಮಾದಂತೆ. ಮೊದಲ ಭಾಗದಲ್ಲೇ ಇದನ್ನೂ ಸೇರಿಸಿ ಮುಗಿಸೋದನ್ನು ಬಿಟ್ಟು ಎರಡು ಪಾರ್ಟುಗಳಾಗಿ ವಿಂಗಡಿಸಿದ್ದೇ ದೊಡ್ಡ ತಪ್ಪು!
ಕರಟಕ ದಮನಕ : ಪ್ರಭುದೇವಾ ಇಂಡಿಯಾ ಮಾತ್ರವಲ್ಲದೆ, ಜಾಗತಿಗ ಮಟ್ಟದಲ್ಲಿ ಹೆಸರು ಮಾಡಿರುವ ನಟ. ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಏನು ಕಮ್ಮೀನಾ? ಕರ್ನಾಟಕ ದಾಟಿ, ದಕ್ಷಿಣ ಭಾರತದ ಪೂರ್ತಿ ಈಗ ಹವಾ ಕ್ರಿಯೇಟ್ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದಿರುವ ಕರಟಕ-ದಮನಕ ಸಿನಿಮಾ ಒಂದು ವಾರ ಕೂಡಾ ನೆಟ್ಟಗೆ ಪ್ರದರ್ಶನ ಕಂಡಿಲ್ಲ. ಯಾಕೆ ಹೀಗಾಯ್ತು? ಹಾಗೆ ನೋಡಿದರೆ, ಸಿನಿಮಾ ಭಟ್ಟರ ಇನ್ನಿತರೆ ಸಿನಿಮಾಗಳಷ್ಟು ಕಳಪೆ ಕೂಡಾ ಅಲ್ಲ. ಈ ಸಲ ಖುದ್ದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರೇ ಆತುರ ಮಾಡಿಕೊಂಡರಾ? ನೆಟ್ಟಗೆ ಪಬ್ಲಿಸಿಟಿಯನ್ನೂ ಮಾಡದೆ ಥೇಟರಿಗೆ ತಂದರಾ? ಯಾರಾದರೂ ಸಿನಿಮಾ ರಿಲೀಸ್ ಹಿಂದಿನ ದಿನ ಟ್ರೇಲರ್ ಬಿಡ್ತಾರಾ? ಇವೆಲ್ಲಾ ಯಾರ ತಪ್ಪು ಧೀರ?
ರಂಗನಾಯಕ : ಟಿ.ಎನ್.ಸೀತಾರಾಮ್ ಅವರ ಗರಡಿಯಿಂದ ಎದ್ದು ಬಂದು ಮಠ ಮತ್ತು ಎದ್ದೇಳು ಮಂಜುನಾಥ ಎಂಬೆರಡು ಸಿನಿಮಾಗಳನ್ನು ಕೊಟ್ಟು ಎಲ್ಲರನ್ನೂ ಅಚ್ಛರಿಕೊಳಿಸಿದ್ದವರು ನಿರ್ದೇಶಕ ಗುರುಪ್ರಸಾದ್. ಅದಾದ ನಂತರ ಗುರು ತಮ್ಮ ಖಾಸಗಿ ಮತ್ತು ಪ್ರೊಫೆಷನಲ್ ಲೈಫಲ್ಲಿ ತುಂಬಾನೇ ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಬಹುಶಃ ಈಗ ತೆರೆಗೆ ಬಂದಿರುವ ʻರಂಗನಾಯಕʼ ಅವರ ವೃತ್ತಿ ಬದುಕಿನ ಕಟ್ಟಕಡೆಯ ಪ್ರಮಾದವಿರಬಹುದು!
ಸೋಮು ಸೌಂಡ್ಇಂಜಿನಿಯರ್: ದುನಿಯಾ ಸೂರಿ, ದುನಿಯಾ ವಿಜಯ್ಅವರೊಟ್ಟಿಗೆ ಕೆಲಸ ಮಾಡಿದ್ದ ಹುಡುಗ ಅಭಿ. ಉತ್ತಮ ಹೆಸರು ಮಾಡಿದ್ದವರೆನ್ನಲ್ಲಾ ಒಂದು ಕಡೆ ಗುಡ್ಡೆ ಹಾಕಿ ರೂಪಿಸಿದ್ದ ಸಿನಿಮಾ ʻಸೋಮು ಸೌಂಡ್ ಇಂಜಿನಿಯರ್ʼ. ನಿಜಕ್ಕೂ ಭರವಸೆ ಹುಟ್ಟಿಸಿದ್ದ ಸೋಮು. ಕಡೆಗೆ ತನ್ನ ಪೇವಲ ಕತೆಯಿಂದ ನೀರೀಕ್ಷೆಗಳನ್ನೆಲ್ಲಾ ಮಣ್ಣುಮುಕ್ಕಿಸಿದ.
ಪುರುಷೋತ್ತಮನ ಪ್ರಸಂಗ : ಪ್ಯಾನ್ಇಂಡಿಯಾ ಲೆವೆಲ್ಲಿನಲ್ಲಿ ಇತ್ತೀಚೆಗೆ ಆಡು ಜೀವಿತಂ ಎನ್ನುವ ಸಿನಿಮಾ ಬಂದಿತ್ತು. ದುಬೈಗೆ ಹೋಗೋದನ್ನೇ ಬದುಕಿನ ಪರಮ ಗುರಿ ಅಂದುಕೊಂಡವನು ಕಡೆಗೆ ಏನಾಗುತ್ತಾನೆ ಅನ್ನೋದು ಆ ಚಿತ್ರದ ಸಾರ. ಈ ಸಿನಿಮಾಗಿಂತಾ ಮೊದಲೇ, ಇನ್ನೂ ಚೆನ್ನಾಗಿ ಕನ್ನಡದಲ್ಲಿ ತೆರೆಗೆ ಬಂದ ಸಿನಿಮಾ ಪುರುಷೋತ್ತಮನ ಪ್ರಸಂಗ. ಇಲ್ಲಿ ಕೂಡಾ ನಾಯಕನಿಗೆ ತಾನು ದುಬೈಗೆ ಹೋಗಬೇಕು ಅನ್ನೋ ಕನಸಿರುತ್ತದೆ. ನಂತರ ಅದು ಪ್ರೀತಿ, ಫ್ಯಾಮಿಲಿ ಕಡೆಗೆ ಹೊರಳಿಕೊಳ್ಳುತ್ತದೆ. ತುಳುವಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದ ದೇವರಾಜ್ ಕಾಪಿಕಾಡ್ ನಿರ್ದೇಶನದಲ್ಲಿ ಬಂದ ಮೊದಲ ಕನ್ನಡ ಸಿನಿಮಾವಿದು. ಮೊದಲ ಸಿನಿಮಾ ಆದರೂ ಅಜಯ್ಪೃಥ್ವಿ ತುಂಬಾ ಮುದ್ದಾಗಿ ನಟಿಸಿದ್ದರು. ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು ಯಾರ ತಪ್ಪೋ ಗೊತ್ತಿಲ್ಲ. ಸಿನಿಮಾ ಬಂದಿದ್ದು ಹೋಗಿದ್ದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ.
ಲೈನ್ ಮ್ಯಾನ್ : ರನ್ ಆಂಟನಿ ಮತ್ತು ಟಕ್ಕರ್ ಎನ್ನುವ ಎರಡು ಸಿನಿಮಾಗಳನ್ನು ನೀಡಿದ್ದ ರಘು ಶಾಸ್ರ್ತಿಯ ಮೂರನೇ ಪ್ರಯತ್ನವಿದು. ಒಳ್ಳೆ ಕಥಾವಸ್ತುವನ್ನು ಕೆಟ್ಟ ರೀತಿಯಲ್ಲಿ ಪ್ರೆಸೆಂಟ್ ಮಾಡೋದರಲ್ಲಿ ಶಾಸ್ತ್ರಿಗಳು ಎಕ್ಸ್ಪರ್ಟು. ಈ ಸಲ ಲೈನ್ಮನ್ ವಿಚಾರದಲ್ಲೂ ಅದನ್ನು ನಿಯತ್ತಾಗಿ ಮಾಡಿದ್ದಾರೆ. ಒಂದು ಊರು, ಕರೆಂಟು, ಪಕ್ಷಿ, ಮೊಟ್ಟೆಗಳನ್ನೆಲ್ಲಾ ಎಷ್ಟು ನೀಟಾಗಿ ಜೋಡಿಸಬಹುದಿತ್ತು. ಆದರೆ, ಅದನ್ನು ಹೇಗೇಗೋ ಮಾಡಿ ಕಾಗೆ ಹಾರಿಸಿಬಿಟ್ಟರು. ಬೆಂಗಳೂರು ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿದ್ದೇ ಇದರ ಹೆಚ್ಚುಗಾರಿಕೆ!
ಅಬ್ಬಬ್ಬ : ಒಂದೇ ಒಂದು ಯಶಸ್ವಿ ಚಿತ್ರ ಅದರ ನಿರ್ದೇಶಕನಿಗೆ ಕನಿಷ್ಟ ಹತ್ತು ಹದಿನೈದು ವರ್ಷ ಬದುಕು ನೀಡುತ್ತದೆ. ಆ ದಿನಗಳು ಸಿನಿಮಾ ಹಿಂದೆ ಸಾಕಷ್ಟು ಜನರ ಶ್ರಮವಿತ್ತು. ಅಗ್ನಿ ಶ್ರೀಧರ್, ನರೇಂದ್ರ ಬಾಬು ಮೊದಲಾದರವರು ಇದ್ದು ಗೆಲ್ಲಿಸಿದ್ದ ಚಿತ್ರ ಆ ದಿನಗಳು. ಆದರೆ ಅದರ ಪೂರ್ತಿ ಕ್ರೆಡಿಟ್ಟು ಕೆ.ಎಂ. ಚೈತನ್ಯ ಪಾಲಾಗಿತ್ತು. ಆ ದಿನಗಳು ನಂತರ ಚೈತನ್ಯ ಕೊಟ್ಟಿದ್ದೆಲ್ಲಾ ಅರೆಬರೆ, ಕಲಬೆರಕೆ ಚಿತ್ರಗಳೇ.. ಈ ವರ್ಷ ರಿಲೀಸಾಗಿರುವ ಅಬ್ಬಬ್ಬ ಎನ್ನುವ ಸಿನಿಮಾ ಬಹುಶಃ ಚೈತನ್ಯ ಫಿಲ್ಮೋಗ್ರಫಿಯಲ್ಲೇ ಅತ್ಯಂತ ಕಳಪೆ ಸಿನಿಮಾದಂತಿದೆ.
ನಟ್ವರ್ಲಾಲ್ : ಅಪಾರ ಉತ್ಸಾಹದ ಯುವಕ ತನುಷ್ ಶಿವಣ್ಣ. ಏನೇ ಆದರೂ ಗೆಲ್ಲದೇ ಬಿಡೋದಿಲ್ಲ ಅಂತಾ ಪದೇ ಪದೇ ಪ್ರಯತ್ನ ಮಾಡಿದವರು. ಹೀಗೆ ಪ್ರಯತ್ನಿಸುವುದೇನೋ ಸರಿ ಆದರೆ ಇವರ ಆಯ್ಕೆಗಳೇ ಸರಿ ಇದ್ದಂತಿಲ್ಲ. ಹೀರೋ ಆಗಿ ನಿಲ್ಲಲು ಬೇಕಿರುವ ಎಲ್ಲ ಕ್ವಾಲಿಟಿಗಳನ್ನು ಹೊಂದಿರುವ ತನುಷ್ ಪ್ರತೀ ಸಲವೂ ತಮಗಲ್ಲದ ಪಾತ್ರಗಳನ್ನೇ ಚ್ಯೂಸ್ ಮಾಡುತ್ತಿದ್ದಾರೆ. ಇದೇ ಅವರ ಸೋಲಿಗೆ ಕಾರಣವಿರಬಹುದು. ಈ ಬಾರಿಯ ನಟ್ವರ್ಲಾಲ್ ಅದಕ್ಕೆ ಉದಾಹರಣೆ!
ರವಿಕೆ ಪ್ರಸಂಗ : ಓದುವ ಕಥೆಗೂ ನೋಡುವ ಕಥೆಗೂ ತುಂಬಾ ವ್ಯತ್ಯಾಸವಿರುತ್ತದೆ. ರವಿಕೆ ಪ್ರಸಂಗ ಅಕ್ಷರ ರೂಪದಲ್ಲಿ ಓದಲು ಅತ್ಯುತ್ತಮ ಕಥೆ. ಅದನ್ನು ದೃಶ್ಯರೂಪದಲ್ಲಿ ಅಳವಡಿಸಿದರೆ ಅಂತಾ ಮಜಾ ಇರೋದಿಲ್ಲ. ಆದರೂ ಒಂದು ಮಟ್ಟಕ್ಕೆ ನೋಡಿಸಿಕೊಂಡು ಹೋಗುವ ಗುಣ ಹೊಂದಿತ್ತು. ಕಲಾತ್ಮಕ ಸಬ್ಜೆಕ್ಟನ್ನು ಜನಪ್ರಿಯ ಶೈಲಿಯಲ್ಲಿ ಪ್ರೆಸೆಂಟ್ ಮಾಡಿದ್ದರು.
ತಾರಿಣಿ : ಇದ್ದುದರಲ್ಲೇ ಕಂಟೆಂಟ್ ಓರಿಯೆಂಟೆಂಡ್ ಸಿನಿಮಾ ಅನ್ನಿಸಿಕೊಂಡಿರುವುದು ತಾರಿಣಿ. ಇವತ್ತಿಗೂ ಪ್ರಸ್ತುತವಾಗಿರುವ ಭ್ರೂಣ ಹತ್ಯೆಯಂತಾ ಹೀನ ಕೃತ್ಯದ ಸುತ್ತ ಬೆಸೆದುಕೊಂಡಿರುವ ತಾರಿಣಿ ನಿಜಕ್ಕೂ ಗುಣಮಟ್ಟದ ಚಿತ್ರ. ಸದಾ ಗಂಭೀರ ಸಿನಿಮಾಗಳನ್ನು ರೂಪಿಸುವ ಸಿದ್ದು ಪೂರ್ಣಚಂದ್ರ ನಿರ್ದೇಶನ ಮತ್ತು ಮಮತಾ ರಾಹುತ್ನಟನೆ ಗಮನ ಸೆಳೆದಿದೆ.
ಮಾರಿಗೋಲ್ಡ್ : ಈ ಮೂರು ತಿಂಗಳಲ್ಲಿ ತೆರೆಗೆ ಬಂದದಿರವ ಪರಿಪೂರ್ಣ ಮನರಂಜನೆಯ ಸಿನಿಮಾ ಯಾವುದು ಅಂತಾ ಹುಡುಕಿದರೆ ಸಿಗುವುದು ʻಮಾರಿ ಗೋಲ್ಡ್ʼ ಚಿತ್ರ ಮಾತ್ರ. ಪ್ರೇಕ್ಷಕರನ್ನು ರಂಜಿಸುವುದನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ರೂಪಿಸಲಾಗಿದೆ. ನಟ ದಿಗಂತ್ ಮತ್ತು ಸಂಪತ್ ಮೈತ್ರೇಯ ಅದ್ಭುತ ನಟನೆ ಈ ಚಿತ್ರದ ಜೀವಾಳ. ರಾಘವೇಂದ್ರ ನಾಯಕ್ ಸದ್ಯ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
ಈ ಮೂರು ತಿಂಗಳಲ್ಲಿ ಮಂಡ್ಯ ಹೈದ, ಅಲೆಕ್ಸಾ , ಆದರ್ಶ ರೈತ, ಆನ್ಲೈನ್ಮದುವೆ, ಪ್ರಣಯಂ, ಬ್ಯಾಚುಲರ್ ಪಾರ್ಟಿ, ಭರ್ಜರಿ ಗಂಡು ಸೇರಿದಂತೆ ಸರಿ ಸುಮಾರು ಎಪ್ಪತ್ತು ಸಿನಿಮಾಗಳು ತೆರೆಗೆ ಬಂದಿವೆ. ಅರ್ಧಕ್ಕರ್ಧ ಕಳಪೆ ಗುಣಮಟ್ಟದ ಚಿತ್ರಗಳೇ. ಒಳ್ಳೇ ಸಿನಿಮಾಗಳೇ ನಿಲ್ಲದೇ ಹೋಗುತ್ತಿರುವಾಗ ಕ್ವಾಲಿಟಿ ಇಲ್ಲದ ಸಿನಿಮಾಗಳು ಅದರ ಜೊತೆಗೆ ಸುಳ್ಳು ಪ್ರಚಾರ ಸಿನಿಮಾ ರಂಗವನ್ನು ದಿಕ್ಕುಗೆಡಿಸಿದೆ.
ಓಟಿಟಿಗಾಗಿ ಮಾಡಿದ ಕಂಟೆಂಟು ಥೇಟರಲ್ಲಿ ಕೂರಲ್ಲ!
ಜೂನಿ, ಕೆಟಿಎಂ, ಫಾರ್ರಿಜಿಸ್ಟ್ರೇಷನ್, ಕೇಸ್ಆಫ್ ಕೊಂಡಾಣ, ಸಾರಾಂಶ, ಮಸ್ತ್ತ್ಯಗಂಧ – ಇಂತಹ ಸಿನಿಮಾಗಳು ನೋಡಲಿಕ್ಕೆ ನಿಜಕ್ಕೂ ಚೆನ್ನಾಗೇ ಇರುತ್ತವೆ. ಆದರೆ, ಇವೆಲ್ಲಾ ಓಟಿಟಿ ವ್ಯಾಪಾರವನ್ನೇ ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ ಚಿತ್ರಗಳಂತಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಇವು ಥೇಟರಲ್ಲಿ ಕೂರೋದಿಲ್ಲ.
ಪ್ರಚಾರದ ಪರಿಕಲ್ಪನೆ ಬದಲಾಗಬೇಕಿದೆ!
ಯಾವುದೇ ಸಿನಿಮಾ ತೆರೆಗೆ ಬರುವ ಒಂದು ವಾರದ ಮುಂಚೆ ಚಿತ್ರತಂಡದವರು ಯೂಟ್ಯೂಬರುಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿ ಇಂಟರ್ವ್ಯೂ ಮಾಡಿಸಿ ಅಪ್ಲೋಡ್ಮಾಡಿಸುತ್ತಾರೆ. ಯಾವುದೇ ಸೋಷಿಯಲ್ಮೀಡಿಯಾ ತೆರೆದರೂ ಒಂದೇ ಥರದ ಸಂದರ್ಶನಗಳು, ಅವೇ ಜೆರಾಕ್ಸ್ ಕಾಪಿಯಂಥಾ ಮಾತುಗಳು ಉದುರುತ್ತಿರುತ್ತವೆ. ಇನ್ನು, ಮೀಮ್ಸು-ರೀಲ್ಸುಗಳನ್ನೆಲ್ಲಾ ನೋಡಿ ಜನ ಸಿನಿಮಾಗೆ ಬರೋದಿದ್ದರೆ ʻಕರಟಕ ದಮನಕʼ ಸೂಪರ್ಹಿಟ್ ಆಗಬೇಕಿತ್ತು. ಇಂಡಿಯಾದ ಯಾವ ಭಾಷೆಯ ಸೋಷಿಯಲ್ ಮೀಡಿಯಾ ತೆರೆದರೂ ʻಹಿತ್ತಲಕ್ಕ ಕರಿಬ್ಯಾಡ ಮಾವʼಹಾಡಿಗೆ ಜನ ಸೊಂಟ ಅಲ್ಲಾಡಿಸಿಕೊಂಡು ಕುಣೀತಿದ್ದಾರೆ. ಇದನ್ನು ನೋಡಿದವರೆಲ್ಲಾ ಯಾಕೆ ಥೇಟರಿಗೆ ಬರಲಿಲ್ಲ? ಯಾವುದೇ ಸಿನಿಮಾ ರಿಲೀಸಾದರೂ ʻಸೂಪರ್ ಹಂಡ್ರೆಡ್ ಡೇಸ್ʼ ಅಂತಾ ಹೇಳಿಸುವುದು ಕೂಡಾ ಇವತ್ತಿನ ದಿನಗಳಲ್ಲಿ ಕ್ಲೀಷೆ ಅನ್ನಿಸಿಬಿಟ್ಟಿದೆ. ಇವೆಲ್ಲಾ ನೋಡಿದರೆ, ಸಿನಿಮಾಗಳಿಗೆ ನೀಡುವ ಪ್ರಚಾರದ ವರಸೆಯಲ್ಲಿ ಏನೋ ಬದಲಾಗಬೇಕಿದೆ ಅಂತಾ ಅನ್ನಿಸುತ್ತಿರುವುದಂತೂ ಸತ್ಯ. ಕಟ್ಟಕಡೆಯದಾಗಿ ಒಂದಂತೂ ನಿಜ. ಸಿನಿಮಾದಲ್ಲಿ ಧಮ್ ಇದ್ದರೆ ಅದು ಗೆದ್ದೇ ಗೆಲ್ಲುತ್ತದೆ. ಅದನ್ನು ಜನಕ್ಕೆ ಪ್ರಾಪರ್ವೇನಲ್ಲಿ ತಲುಪಿಸಬೇಕಷ್ಟೇ… ಈ ಹಿಂದಿನ ವರ್ಷಗಳಲ್ಲಿ ಬಂದಿದ್ದ ಸರ್ಕಾರಿ ಪ್ರಾಥಮಿಕ ಶಾಲೆ, ಲವ್ಮಾಕ್ಟೇಲ್, ಕಾಂತಾರ ಥರದ ಸಿನಿಮಾಗಳು ಅದಕ್ಕೆ ಸಾಕ್ಷಿ.
No Comment! Be the first one.