ಕಲ್ಕಿ ಪ್ರೊಡಕ್ಷನ್ ನಡಿ ವೆಂಕಟೇಶ್.ಎಸ್ ನಿರ್ಮಾಣ ಮಾಡುತ್ತಿರುವ ಕನ್ನಡ ಮಾಧ್ಯಮ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ. ಗೀತೆ ಪ್ರಸ್ತುತಿ ಅಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲ ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ.. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿ ಎಂದು ಹೇಳಿದರು.
ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ಕನ್ನಡ ಮಾಧ್ಯಮ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನಾಗಿ ಪಾತ್ರ ಮಾಡುತ್ತಿದ್ದೇನೆ ಎಂದರು.
ಕನ್ನಡ ಮಾಧ್ಯಮ ಸಿನಿಮಾಗೆ ಅಖಿಲ್ ಪುತ್ತೂರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೇ ಅಖಿಲ್ ಅವರಿಗಿದು ನಿರ್ದೇಶಕನಾಗಿ ಮೊದಲ ಪ್ರಯತ್ನ. ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ –ಬರೆಯುವುದರ ಜೊತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮಗಳು ಪ್ರಾಮುಖ್ಯತೆಯನ್ನು ತಿಳಿಸುವ ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್ , ವಾಣಿ, ಅಖಿಲ್ , ಜಾಹ್ನವಿ , ಚಿನ್ಮಯ್ , ಶಿವಮೊಗ್ಗ ರಾಮಣ್ಣ , ಪ್ರದೀಪ್ ಕುಮಾರ್ ನಟಿಸುತ್ತಿದ್ದಾರೆ.
ಸಿ.ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ಒದಗಿಸುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ತಿಂಗಳ 7ರಿಂದ ಶೂಟಿಂಗ್ ಶುರುವಾಗ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
No Comment! Be the first one.