• ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ವಿಚಾರ ಸಂಕಿರಣ
• ರಮೇಶ್ ಅರವಿಂದ್, ಪಿ. ಶೇಷಾದ್ರಿ, ಜೋಗಿ ಉಪಸ್ಥಿತಿ
• ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ
ಬೆಂಗಳೂರು, ಮಾ.31- ಮಾಡುವ ಕೆಲಸದಲ್ಲಿ ಬದಲಾವಣೆ ಇದ್ದಾಗ ಮಾತ್ರ ಫಲಿತಾಂಶದಲ್ಲೂ ಬದಲಾವಣೆ ಬರಲು ಸಾಧ್ಯ ಎಂದು ಖ್ಯಾತ ನಟ, ನಿರೂಪಕ, ನಿರ್ದೇಶಕ ರಮೇಶ್ ಅರವಿಂದ್ ಇಂದಿಲ್ಲಿ ಹೇಳಿದ್ದಾರೆ.
‘ಯಾವುದೇ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನೇ ಮಾಡುತ್ತಾ ಅದರಲ್ಲಿ ಬದಲಾವಣೆ ಬಯಸಿದರೆ ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ಫಲಿತಾಂಶ ಬೇಕಾದರೆ ಪ್ರಸ್ತುತ ದಿನಮಾನಗಳಲ್ಲಿ ಬದಲಾವಣೆ ಅಗತ್ಯ ಮತ್ತು ಅನಿವಾರ್ಯ’ ಎಂದು ಅವರು ತಿಳಿಸಿದರು.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ಎಂಬ ವಿಚಾರ ಸಂಕಿರಣ ಹಾಗೂ ಸದಸ್ಯರಿಗೆ ಗುರಿತನ ಚೀಟಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಆಸೆ ಮತ್ತು ಗುರಿ ಇರುವವರು ಬದಲಾವಣೆಗೆ ಒಗ್ಗಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಒಟಿಟಿ ಮೂಲಕ ಚಿತ್ರಗಳು ಕೈಗೆಟುಕುತ್ತಿವೆ. ಹೀಗಾಗಿ ನಿಗದಿತ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ನಾವು ಇರುವ ಕಡೆಯಲ್ಲಿ ಸಿನಿಮಾ ನೋಡುವ ಪರಿಪಾಠ ಹೆಚ್ಚಾಗಿದೆ. ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಆಗ ಮಾತ್ರ ಜನರನ್ನ ಚಿತ್ರಮಂದಿರದ ಕಡೆ ಕರೆತರಲು ಸಾಧ್ಯ. ಅದೇ ರೀತಿ ಪ್ರತಿಯೊಬ್ಬ ನಟನಲ್ಲಿ, ಮಾಧ್ಯಮದವರಲ್ಲಿ ಒಂದೊಂದು ವಿಶೇಷತೆಗಳಿವೆ ನಮ್ಮ ಸಾಮರ್ಥ್ಯವನ್ನ ಅರಿತು ವಿಭಿನ್ನ ಮತ್ತು ವಿಶೇಷವಾಗಿ ಕಾಣಿಸಬೇಕು. ಏನೇ ಬದಲಾವಣೆಗೆ ನಾವು ಒಗ್ಗಿಕೊಂಡರೂ, ಆತ್ಮವನ್ನು ಮಾತ್ರ ಮಾರಾಟ ಮಾಡಿಕೊಳ್ಳಬಾರದು. ಅದೊಂದನ್ನು ಜೋಪಾನವಾಗಿ ಇಟ್ಟುಕೊಂಡರೆ ಅಲ್ಲಿ ನಮ್ಮ ಉಳಿಗಾಲ ಇದೆ’ ಎಂದು ಕಿವಿಮಾತು ಹೇಳಿದರು.
ಹಿರಿಯ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಮಾತನಾಡಿ, ‘ಚಿತ್ರರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ .ಇದೇ ವಿಷಯಕ್ಕಾಗಿ ಹಿರಿಯ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಚಿತ್ರರಂಗವನ್ನು ಕಲೋದ್ಯಮ ಎಂದು ಕರೆದಿದ್ದಾರೆ ಅದು ಪ್ರಸ್ತುತವೂ ಕೂಡ. ಕನ್ನಡ ಚಿತ್ರರಂಗಕ್ಕೆ 90 ವರ್ಷಗಳಾಗಿವೆ. ಈ ಒಂಬತ್ತು ದಶಕಗಳ ಅವಧಿಯಲ್ಲಿ ಬರೋಬ್ಬರಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ, ನಷ್ಟ ಹೆಚ್ಚು ಎಂದಿದ್ದರೆ ಪ್ರತಿವರ್ಷವೂ ಸುಮಾರು 250ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ. ಇದಕ್ಕೆ ಪೂರಕವಾಗಿ ಇದುವರೆಗೂ ನಾನು ನಿರ್ದೇಶಿಸಿದ ಚಿತ್ರಗಳ ಪೈಕಿ ಒಂದನ್ನು ಹೊರತುಪಡಿಸಿದರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ತಂದುಕೊಟ್ಟಿದೆ’ ಎಂದು ಅವರು ಹೇಳಿದರು
‘ಸಾಮಾನ್ಯವಾಗಿ ನಾವು ಪರಭಾಷೆಯ ಚಿತ್ರಗಳು ಚೆನ್ನಾಗಿವೆ, ಅವರಂತೆ ನಾವು ಚಿತ್ರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾತಾಡುವುದನ್ನು ಕೇಳುತ್ತಿರುತ್ತೇವೆ. ಇತ್ತೀಚೆಗೆ ನನಗೆ ಮಲಯಾಳಂ, ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ಅದೇ ರಾಜ್ಯಗಳಿಗೆ ಹೋಗಿ, ಅಲ್ಲಿನವರ ಜೊತೆಗೆ ನೋಡುವ ಅವಕಾಶ ಸಿಕ್ಕಿತ್ತು. ಆ ಸಮಯದಲ್ಲಿ ಅಲ್ಲಿನ ನಟ-ನಟಿಯರು, ತಂತ್ರಜ್ಞರ ಜೊತೆ ಮಾತನಾಡುವಾಗ, ಅವರು ನಮ್ಮ ಚಿತ್ರರಂಗಕ್ಕಿಂತ ನಿಮ್ಮ ಚಿತ್ರರಂಗ ಚಂದ ಎಂದು ಹೇಳುತ್ತಿದ್ದರು. ಇದನ್ನೆಲ್ಲಾ ಗಮನಿಸಿದರೆ ಎಲ್ಲಾ ಚಿತ್ರರಂಗಗಳಲ್ಲೂ ತನ್ನದೇ ಆದ ಸಮಸ್ಯೆಗಳಿವೆ ಮತ್ತು ಇದರ ನಡುವೆಯೇ ಚಿತ್ರಗಳು ನಿರ್ಮಾಣವಾಗುತ್ತಿವೆ’ ಎಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಮತ್ತು ಸಾಹಿತಿ ಜೋಗಿ ಮಾತನಾಡಿ, ‘ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ನೋಡುವ ರೀತಿಯೇ ಬೇರೆಯಾಗಿದೆ. ಚಿತ್ರವೊಂದರ ಟೀಸರ್ ಬಿಡುಗಡೆಯಾದರೆ ಆ ಕ್ಷಣವೇ ಅದರ ಸುದ್ದಿ ಬರಬೇಕು. ಪತ್ರಿಕೆಯಲ್ಲಿ ಮರುದಿನ ಆ ಸುದ್ದಿ ಪ್ರಕಟವಾಗುವಷ್ಟರಲ್ಲಿ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಂಡಿರುತ್ತದೆ. ಆ ಟೀಸರ್ ಹೇಗಿದೆ ಎನ್ನುವುದಕ್ಕಿಂತ, ಟೀಸರ್ ಎಷ್ಟು ವೀಕ್ಷಣೆ ಕಂಡಿದೆ ಎಂದು ಬರೆಯುವ ಒತ್ತಡವು ನಮ್ಮ ಮೇಲೆ ಇರುತ್ತದೆ .ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಕರ್ತರನ್ನು ನೋಡುವ ಸ್ಥಿತಿಯೇ ಬೇರೆಯಾಗಿದೆ’ ಎಂದು ಅವರು ಹೇಳಿದರು.
‘ಸಿನಿಮಾ ನೋಡಿ ಹೊರ ಬಂದಾಗ ಕಥೆ ಹೇಗಿದೆ, ಚಿತ್ರ ಹೇಗಿದೆ ಎನ್ನುವುದನ್ನು ಕೇಳುವ ಬದಲು ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ ಎಂದು ಕೇಳುವ ಪರಿಪಾಠ ಹೆಚ್ಚಾಗಿದೆ. ಕನಿಷ್ಠ ಮೂರು ಸ್ಟಾರ್ ಕೊಡಲೇಬೇಕು. ವಿಮರ್ಶೆ ಮಾಡುವುದನ್ನು ಅರಗಿಸಿಕೊಳ್ಳುವ ಮನಸ್ಥಿತಿಯೇ ಇಲ್ಲ. ಎಲ್ಲವೂ ಪರವಾಗಿಯೇ ಬರಬೇಕು ಎನ್ನುವ ಉದ್ದೇಶ ಚಿತ್ರ ತಂಡದ್ದು’ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ, ಕಾರ್ಯಾಧ್ಯಕ್ಷ ಚೇತನ್ ನಾಡಿಗೇರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಜಿ, ಕಾರ್ಯದರ್ಶಿ ಜಗದೀಶ್ ಕುಮಾರ್, ಖಜಾಂಚಿ ಕೆ.ಎಸ್.ವಾಸು ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
Leave a Reply
You must be logged in to post a comment.