ನೆನಪಿರಲಿ ಪ್ರೇಮ್ ಚಿತ್ರರಂಗಕ್ಕೆ ಕಾಲಿಟ್ಟು ಕರೆಕ್ಟಾಗಿ 24 ವರ್ಷ ಆಗಿದೆ. ಬೇರೆ ನಟರಿಗೆ ಹೋಲಿಸಿದರೆ ಪ್ರೇಮ್ ನಟಿಸಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಹಾಗೆ ನೋಡಿದರೆ ಪ್ರೇಮ್ ಇಂಡಸ್ಟ್ರಿಗೆ ಬಂದಾಗ ಹೀರೋಗಳ ಕೊರತೆ ಸಿಕ್ಕಾಪಟ್ಟೆ ಇತ್ತು. ಆಗಿನ್ನೂ ಗಣೇಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ಅಜಯ್ ರಾವ್ ಮೊದಲಾದವರೆಲ್ಲ ಹೀರೋಗಳಾಗಿರಲಿಲ್ಲ. ಪೋಷಕ ಪಾತ್ರಗಳಲ್ಲಷ್ಟೇ ಅಭಿನಯಿಸಿಕೊಂಡಿದ್ದರು. ಶರಣ್ ಕೋಮಲ್ ತರದ ಕಲಾವಿದರು ಕಾಮಿಡಿ ಪಾತ್ರಗಳನ್ನು ಮಾಡಿಕೊಂಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ದರ್ಶನ್ ಥರದ ಹೀರೋಗಳು ಆಕ್ಷನ್ ಸಿನಿಮಾಗಳಿಗೆ ಬ್ರಾಂಡ್ ಆಗಿದ್ದರು. ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಕ್ರೇಜ್ ಕ್ರಿಯೇಟ್ ಮಾಡಿಕೊಂಡು ಮೆರೆಯುತ್ತಿದ್ದರು. ರಮೇಶ್ ಅರವಿಂದ್ ಕಾಮಿಡಿ ಹೀರೋ ಪಾತ್ರಗಳಲ್ಲಿ ಸೆಟಲ್ ಆಗಿದ್ದರು.
ಸುನಿಲ್ ರಾವ್ ಬಿಟ್ಟರೆ ಬೇರೊಬ್ಬ ಲವರ್ ಬಾಯ್ ಇರಲಿಲ್ಲ. ಆ ಹೊತ್ತಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಸುಂದರ ನಟ ಪ್ರೇಮ್. ಪ್ರಾಣ ಅನ್ನೋ ಚಿತ್ರದಲ ಪೋಸ್ಟರು ಬಿದ್ದಾಗಲೇ ಎಲ್ಲರ ಚಿತ್ತ ಪ್ರೇಮ್’ನತ್ತ ನೆಟ್ಟಿತ್ತು. ಆ ನಂತರ ಬಂದ ನೆನಪಿರಲಿ, ಜೊತೆಜೊತೆಯಲಿ ಚಿತ್ರಗಳು ಪ್ರೇಮ್ಗೆ ಒಂದೊಳ್ಳೆ ಸ್ಥಾನವನ್ನು ಕೊಟ್ಟಿದ್ದವು.
ಮನಸು ಮಾಡಿದ್ದಿದ್ದರೆ ಇನ್ನೂ ಒಳ್ಳೇ ಎತ್ತರದಲ್ಲಿ ಕೂರಬಹುದಿತ್ತು ಪ್ರೇಮ್. ಯಾಕೆಂದರೆ ಪ್ರೇಮ್ ತುಂಬಾ ಸ್ಪುರದ್ರೂಪಿಯಾಗಿದ್ದರು. ಆದರೆ ಪ್ರೇಮ್ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲಿಲ್ಲವೋ ಅಥವಾ ಒಳ್ಳೆಯ ಅವಕಾಶಗಳು ಪ್ರೇಮ್ ಪಾಲಿಗೆ ದಕ್ಕಲಿಲ್ಲವೋ ಗೊತ್ತಿಲ್ಲ. ಪ್ರೇಮ್ ನಂತರ ಬಂದ ಪ್ರಜ್ವಲ್, ದಿಗಂತ್, ಲೂಸ್ ಮಾದ ಯೋಗಿ, ಕಿಟ್ಟಿ, ಯಶ್, ನೀನಾಸಂ ಸತೀಶ್ ಮೊದಲಾದ ಹೀರೋಗಳು ಬೆಳೆದು ನಿಂತರು. ಆದರೆ ಪ್ರೇಮ್ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.
ಪ್ರೇಮ್ ಅವರನ್ನು ಗಮನಿಸಿದರೆ, ಅಗತ್ಯಕ್ಕಿಂತಾ ಹೆಚ್ಚು ಬಿಲ್ಡಪ್ ಕೊಡ್ತಾರಾ ಅಂತನ್ನಿಸತ್ತೆ. ಹೆಚ್ಚೂ ಕಡಿಮೆ ಎರಡು ದಶಕಗಳಿಂದ ಲಂಗರು ಹಾಕಿಕೊಂಡು ನಿಂತಲ್ಲೇ ನಿಂತಿರುವ ಪ್ರೇಮು ಕೆಲವೊಮ್ಮೆ ಲಿಮಿಟ್ಟಿಲ್ಲದಂತೆ ಡೌಲು ಕೊಚ್ಚುತ್ತಾರೆ. ಇಸವಿ 2021ರಲ್ಲಿ ಇದೇ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ವೃತ್ತಿಯಲ್ಲಿ ವೈದ್ಯರಾಗಿದ್ದ ಬಿ.ಎಸ್. ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದರು. ಬಹುಶಃ ಪ್ರೇಮ್ ವೃತ್ತಿ ಜೀವನದಲ್ಲೇ ಈ ಚಿತ್ರಕ್ಕೆ ಅತಿ ಹೆಚ್ಚು ಖರ್ಚಾಗಿತ್ತು. ಸಿನಿಮಾ ಕೂಡಾ ಒಂದು ಮಟ್ಟಕ್ಕೆ ಚನ್ನಾಗಿತ್ತು ಕೂಡ. ಇದರ ರಿಲೀಸ್ ಟೈಮಲ್ಲಿ ಸ್ವತಃ ಚಿತ್ರತಂಡ ಬಡಾರ್ ಅಂತಾ ಒಂದು ಸುದ್ದಿಯನ್ನು ಸಿಡಿಸಿದ್ದರು. ಅದೇನೆಂದರೆ, ಸರಿಸುಮಾರು ಐನೂರು ಕೋಟಿ ರೂಪಾಯಿಗಳ ಸಿನಿಮಾವೊಂದನ್ನು ಆರಂಭಿಸುತ್ತಿದ್ದೇವೆ. ಒಬ್ಬ ಮಹಾನ್ ನಾಯಕನ ಜೀವನ ಚರಿತ್ರೆ ಇದಾಗಿದೆ. ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ ತಯಾರಾಗಲಿರುವ ಈ ಸಿನಿಮಾದ ಬಜೆಟ್ಟು ಐನೂರು ಕೋಟಿ ಆದರೂ ಆಗಬಹುದು. ಬಜೆಟ್ಟಿಗೆ ಇಷ್ಟೇ ಅಂತಾ ಲಿಮಿಟೇಷನ್ನುಗಳಿಲ್ಲ… ಅಂತಾ ಸಾಕ್ಷಾತ್ ಪ್ರೇಮ್ ಅವರೇ ಹೇಳಿಕೆ ಕೊಟ್ಟಿದ್ದರು. ಇದನ್ನು ಕೇಳಿದವರೆಲ್ಲಾ ಮುಸಿ ಮುಸಿ ನಗಾಡಿದ್ದರು.
ಒಂದುವೇಳೆ ಶುರುವಾದ ಮೇಲೆ ಹೇಳಿಕೊಂಡಿದ್ದರೆ ನಂಬಬಹುದಿತ್ತು. ಏನೇನೂ ತಯಾರಿ ಶುರುವಾಗದೆಯೇ ಬಜೆಟ್ಟಿನ ಮಾತಾಡಿದ್ದಿದ್ದು ತಮಾಷೆಯಂತೆ ಕಂಡಿತ್ತು. ಅದಾಗಿ ಮೂರೂ ವರ್ಷಗಳೇ ಕಳೆದಿವೆ. ಪ್ರೇಮ್ ಅವರ ಬಳಿ ಈಗ ಇದರ ಬಗ್ಗೆ ಕೇಳಿದರೂ ‘ಆ ಸಿನಿಮಾ ಬಗ್ಗೆ ರಿಸರ್ಚ್ ನಡೀತಿದೆ…’ ಅಂತಲೇ ಹೇಳಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಚಾರ ನಿಜವಾ ಅನ್ನೋದರ ಬಗ್ಗೆ ರಿಸರ್ಚ್ ನಡೆಸಬೇಕಿದೆ..!
ಏನಾದರೂ ಆಗಲಿ ಮೊನ್ನೆ ತಾನೆ ಬರ್ತಡೇ ಆಚರಿಸಿಕೊಂಡಿರುವ ಪ್ರೇಮ್ ಗೆ ಶುಭಾಶಯ ತಿಳಿಸೋಣ…!!
No Comment! Be the first one.