ಸವ್ಯಸಾಚಿ ಸಿನಿಮಾದ ಮುಖಾಂತರ ಬಣ್ಣದ ಬದುಕಿನಲ್ಲಿ ʻಓಂʼಕಾರ ಹಾಕಿದವರು ನಟಿ ಪ್ರೇಮ. ಸರಿಸುಮಾರು ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಅನಾಯಾಸವಾಗಿ ಆಳುತ್ತಾ ತೆಲುಗಲ್ಲೂ ಮೆರೆದ ನಾಯಕನಟಿ ಈಕೆ. ಒಂದು ಕಾಲದಲ್ಲಿ ಉಪೇಂದ್ರ ಹೆಸರಿನ ಜೊತೆಗೆ ಪ್ರೇಮಾ ನಾಮಧೇಯ ನಾನಾ ರೀತಿಯಲ್ಲಿ ತಳುಕು ಹಾಕಿಕೊಂಡಿತ್ತು. ಗಾಸಿಪ್ಪುಗಳಿಗೆಲ್ಲಾ ಉಫ್ ಅಂದು ಮತ್ತಷ್ಟು ಬೆಳೆಯುತ್ತಲೇ ಹೋದಳು ಲಂಬೂ ಹುಡುಗಿ. ಹೀಗೆ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೇರಿದ ಪ್ರೇಮಾ, ಖಾಸಗೀ ಬದುಕನ್ನು ಬಹುಪಾಲು ಸಂಕಟದಲ್ಲೇ ಕಳೆದವರು. ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳಿದ್ದ ಹೊತ್ತಲ್ಲೇ ಜೀವನ್ ಅಪ್ಪಚ್ಚು ಎಂಬಾತನನ್ನು ಮದುವೆಯಾದರು. ಎಷ್ಟೇ ಕಷ್ಟ ಪಟ್ಟರೂ ಇಬ್ಬರ ನಡುವೆ ಹೊಂದಾಣಿಕೆಯೆನ್ನೋದು ಆಗಲೇ ಇಲ್ಲ. ಕಟ್ಟಕಡೆಯದಾಗಿ ಅದೊಂದು ದಿನ ಅಪ್ಪಚ್ಚು ಜೊತೆಗಿನ ಸಂಬಂಧ ಕಳಚಿಕೊಂಡು ಆಚೆ ಬಂದರು ಪ್ರೇಮಾ. ಅಷ್ಟರಲ್ಲಾಗಲೇ ಅನಾರೋಗ್ಯ ಹಿಂಡಿಬಿಸಾಕಿತ್ತು. ʻಇವರೇನಾ ಆ ಪ್ರೇಮಾ?ʼ ಅಂತಾ ನೋಡಿದವರೆಲ್ಲಾ ಕಂಗಾಲಾಗುವಷ್ಟರ ಮಟ್ಟಿಗೆ ಕಳಾಹೀನರಾಗಿದ್ದರು ಈ ಕೊಡಗಿನ ಬೆಡಗಿ.
ಅಷ್ಟರಲ್ಲಾಗಲೇ ಆರ್.ಜೆ. ರಾಜೇಶ್ ಜೊತೆ ಪ್ರೇಮಾ ಓಡಾಡಲು ಶುರು ಮಾಡಿದರು. ಎಲ್ಲೆಲ್ಲಿ ಯೋಗ, ಧ್ಯಾನ, ಸಂತ್ಸಂಗಗಳು ನಡೆದರೂ ಅಲ್ಲಿ ಹಾಜರಾಗುತ್ತಿದ್ದರು. ನೋಡಿದವರೆಲ್ಲಾ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಮದುವೆ ಕೂಡಾ ಆಗುತ್ತಾರೆ ಅಂತಾ ಪುಕಾರೆಬ್ಬಿಸಿದರು. ಆದರೆ ಪ್ರೇಮಾ ಮಾತ್ರ ʼರಾಜೇಶ್ ನನ್ನ ಬ್ರದರ್ ಇದ್ದಂಗೆʼ ಅಂತಾ ವಿಚಾರವನ್ನು ತಳ್ಳಿಹಾಕುತ್ತಿದ್ದರು. ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದು ಸ್ವಲ್ಪ ಚೇತರಿಸಿಕೊಂಡಂತೆ ಕಾಣುತ್ತಿತ್ತು. ಸದ್ಯ ಪ್ರೇಮಾ ಕಿರುತರೆಯಲ್ಲಿ ಮೂಡಿಬರುತ್ತಿರುವ ಮಹಾನಟಿ ಎನ್ನುವ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರೇಮಾ ಬಗ್ಗೆ ಮತ್ತೊಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಸೀರಿಯಲ್ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಾಹಕರಾಗಿ ಹೆಸರು ಮಾಡಿರುವ, ನೂರಾರು ಜನ ಹೆಣ್ಣುಮಕ್ಕಳಿಗೆ ಗಾಡ್ ಫಾದರ್ ಥರಾ ಇರುವ ಅರವಿಂದ್ ಎನ್ನುವವರ ಜೊತೆ ತುಂಬಾನೇ ಆತ್ಮೀಯತೆ ಹೊಂದಿದ್ದರು. ಪ್ರೇಮಾ ಇದ್ದ ಕಡೆ ಅರವಿಂದ್ ಉಪಸ್ಥಿತಿ ಇದ್ದೇ ಇರುತ್ತಿತ್ತು. ಕಾಶಿಯಿಂದ ಗೋವಾದ ತನಕ ಒಟ್ಟೊಟ್ಟಿಗೇ ತೀರ್ಥಯಾತ್ರೆ ನಡೆಸಿದ್ದರು!
ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟು ಪ್ರೇಮಾ ಮೇಡಮ್ಮು ಮತ್ತೊಂದು ಮದುವೆಗೆ ಬೇಡಿಕೊಂಡಿದ್ದರಲ್ಲಾ? ಅದಾದನಂತರವಂತೂ ಅರವಿಂದ್ ಶಶಿಯನ್ನು ಮದುವೆಯಾಗೋದು ಖಚಿತ ಅಂತಲೇ ಎಲ್ಲರೂ ಮಾತಾಡಿಕೊಂಡಿದ್ದರು. ಈಗ ನೋಡಿದರೆ, ಮಹಾನಟಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಪ್ರೇಮಾ ಅವರು ಅರವಿಂದ್ ಅವರನ್ನು ಮರೆತೇಬಿಟ್ಟಿದ್ದಾರೆ ಎನ್ನುವ ಸುದ್ದಿ ಸುಯ್ ಅಂತಾ ಎಲ್ಲೆಡೆ ಸುಳಿದಾಡುತ್ತಿದೆ. ಯಾಕೆ? ಏನಾಯ್ತು ಅನ್ನೋದರ ಮಾಹಿತಿ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ!!
No Comment! Be the first one.