ಮೊದಲೆಲ್ಲಾ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ರಂಥಾ ಕಲಾವಿದರು ವರ್ಷಕ್ಕೆ ಒಂದು ಅಥವಾ ಎರಡು ಸಲ ಮೀಡಿಯಾದವರನ್ನು ತಮ್ಮ ಮನೆಗೇ ಕರೆಸಿಕೊಂಡು ಆತ್ಮೀಯ ಸಭೆ ನಡೆಸುತ್ತಿದ್ದರು. ಯಾವುದಾದರೂ ವಿಶೇಷ ಸಂದರ್ಭಕ್ಕೆ ಇಂಥಾ ಕಾರ್ಯಕ್ರಮಗಳು ಏರ್ಪಾಟಾಗುತ್ತಿದ್ದವು.
ಈಗ ಕಾಲ ಬದಲಾಗಿದೆ…!
ಹೀರೋಗಳ ಮನೆಗಳೇ ಮಾಧ್ಯಮಗೋಷ್ಟಿಗಳ ಕೇಂದ್ರವಾಗುತ್ತಿವೆ… ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೀಗ ಕನ್ನಡದ ಹಿರಿಯ ನಟ. ಈ ವಯಸ್ಸಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ತಮ್ಮ ʻಎನರ್ಜಿʼಯಿಂದಲೇ ದೇಶವ್ಯಾಪಿ ಹೆಸರಾಗಿರುವವರು. ಇಂಥ ಶಿವಣ್ಣ ಈಗ ಪತ್ರಿಕಾಗೋಷ್ಠಿಗಳಿಗಾಗಿ ಹೊರಗೆಲ್ಲೂ ಹೋಗುತ್ತಿಲ್ಲ. ತಮ್ಮ ಮನೆಯನ್ನೇ ಮೀಡಿಯಾ ಸೆಂಟರ್ ಆಗಿ ಮಾರ್ಪಡಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಸಿನಿಮಾ, ಅವರ ಪತ್ನಿಯ ರಾಜಕೀಯ, ಆಪ್ತರ ಚಿತ್ರಗಳ ಬಗ್ಗೆ ಏನಾದರೂ ಹೇಳಿಕೊಳ್ಳಬೇಕೆಂದರೆ, ಪ್ರತೀ ಸಲಕ್ಕೂ ತಮ್ಮ ಮನೆಗೇ ಮೀಡಿಯಾದವರನ್ನು ಕರೆಸಿಕೊಳ್ಳುತ್ತಾರೆ!
ಡಾ. ಶಿವರಾಜ್ ಕುಮಾರ್ ಅವರ ಮನೆ ಬೆಂಗಳೂರಿನ ಸಿಟಿ ಒಳಗೇ ಎಲ್ಲಾದರೂ ಇದ್ದಿದ್ದರೆ ಮೀಡಿಯಾದವರು ಯಾರೂ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ!
ಸಿಟಿಯ ಈ ಕೆಟ್ಟ ಟ್ರಾಫಿಕ್ಕಿನಲ್ಲಿ ಅರಮನೆ ರಸ್ತೆ, ಹೆಬ್ಬಾಳ ಫ್ಲೈಓವರ್ ದಾಟಿ ನಾಗವಾರದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿನ ಒಳಗಿದೆ ಶಿವಣ್ಣನ ʻಶ್ರೀಮುತ್ತುʼಬಂಗಲೆ. ಇಷ್ಟು ದೂರ ತಲುಪುವುದು ಬೆಂಗಳೂರಿನ ಒಳಭಾಗದಲ್ಲಿರುವವರಿಗೆ ನಿಜಕ್ಕೂ ಕಷ್ಟದ ಕೆಲಸ. ಇತ್ತೀಚೆಗೆ ವಾರಕ್ಕೆರಡು ಮೂರು ಸಲವಾದರೂ ಇಷ್ಟು ದೂರ ಕ್ರಮಿಸಬೇಕಾದ ಅನಿವಾರ್ಯ ಮಾಧ್ಯಮದ ಪ್ರತಿನಿಧಿಗಳಿಗೆ ಒದಗಿಬಂದಿದೆ. ಮೀಡಿಯಾ ಅಂದರೆ ಗೊತ್ತಲ್ಲ… 24X7 ಒತ್ತಡವೇ ಇಲ್ಲಿನ ಬದುಕು. ನ್ಯೂಸ್ ಕವರ್ ಮಾಡಲೂ ವಾಹಿನಿಗಳ ಟಾರ್ಗೆಟ್ಟು. ಹೀಗಿರುವಾಗ ವರದಿಗಾರರು, ಕ್ಯಾಮೆರಾಮನ್ಗಳು, ಯೂಟ್ಯೂಬ್ ಹುಡುಗರು ಜೀವದ ಹಂಗು ತೊರೆದು ನಾಗವಾರದ ಕಡೆ ಓಡಾಡುತ್ತಿದ್ದಾರೆ. ಇಷ್ಟೊಂದು ಜನರನ್ನು ಆ ಕಡೆ ಕರೆಸಿಕೊಳ್ಳುವ ಬದಲು ತಾವೇ ಒಂದು ಹೆಜ್ಜೆ ಈ ಕಡೆ ಎಲ್ಲಾದರೂ ಬಂದು ಹೋದರೆ ಒಳ್ಳೇದಲ್ವಾ? ದೊಡ್ಮನೆಯ ಹಿರಿಯಣ್ಣ ಶಿವಣ್ಣ ದೊಡ್ಡ ಮನಸ್ಸು ಮಾಡಿ ಈ ಕಡೆ ಗಮನಹರಿಸಲಿ….
No Comment! Be the first one.