One N Only Exclusive Cine Portal

ಕಾಂಚಾಣದ ಬಗ್ಗೆ ತಲೆಕೆಡಿಸಿಕೊಳ್ಳದ ಬಿಗ್‌ಬಜೆಟ್ ಕನಕ!

ಆಪ್ತ ಅನ್ನಿಸುವಂಥಾ, ಕಾಡುವಂಥಾ ಕಥಾ ಹಂದರದ ಚಿತ್ರಗಳ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವವರು ನಿರ್ದೇಶಕ ಆರ್. ಚಂದ್ರು. ಬದುಕಿಗೆ ಹತ್ತಿರಾದ ಪ್ರೇಮಕಥಾನಕಗಳ ಮೂಲಕವೇ ಅಪಾರ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರೋ ಚಂದ್ರು ಅವರ ಬಹು ನಿರೀಕ್ಷಿತ ಚಿತ್ರ ಕನಕ ತೆರೆ ಕಾಣಲು ಎರಡು ದಿನವಷ್ಟೇ ಬಾಕಿ ಉಳಿದಿದೆ. ಈ ಹಂತದಲ್ಲಿ ಮತ್ತೊಂದಷ್ಟು ವಿವರವನ್ನು ಹಂಚಿಕೊಳ್ಳಲು ಚಂದ್ರು ಚಿತ್ರ ತಂಡದೊಂದಿಗೆ ಪತ್ರಿಕಾಗೋಷ್ಟಿ ನಡೆಸಿದರು. ಈ ನಿಟ್ಟಿನಲ್ಲಿ ಸಿನಿಮಾ ಸುತ್ತಲಿನ ಒಂದಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಅನಾವರಣಗೊಳಿಸಿದರು.


ಡಾ. ರಾಜ್‌ಕುಮಾರ್ ಅವರ ಅಭಿಮಾನಿಯಾದ ಆಟೋ ಡ್ರೈವರ್ ಓರ್ವನ ಸತ್ಯ ಕಥೆಯನ್ನಾಧರಿಸಿದ ಚಿತ್ರ ಕನಕ. ಈ ಚಿತ್ರದಲ್ಲಿ ದುನಿಯಾ ವಿಜಯ್ ರಾಜ್ ಅಭಿಮಾನಿ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತೀ ದೊಡ್ಡ ರಾಜ್‌ಕುಮಾರ್ ಕಟೌಟ್, ಹಾಲಿನಾಭಿಷೇಕ ಮುಂತಾದವೂ ಸೇರಿದಂತೆ ನಾನಾ ಬಗೆಯಲ್ಲಿ ಸದ್ದು ಮಾಡುತ್ತಲೇ ಬಂದಿರೋ ಈ ಚಿತ್ರದ ಸೂಕ್ಷ್ಮ ವಿಚಾರಗಳನ್ನು, ಬಜೆಟ್ ಬಗೆಗಿನ ಕುತೂಹಲಕರ ವಿಚಾರಗಳನ್ನು ನಿರ್ದೇಶಕ ಚಂದ್ರು ರಸವತ್ತಾಗಿ ಅನಾವರಣಗೊಳಿಸಿದ್ದಾರೆ.


ಯಾವುದೇ ಚಿತ್ರವನ್ನಾದರೂ ಕಥೆಯ ಬೇಡಿಕೆಯ ಮೇರೆಗೆ ಅದ್ದೂರಿಯಾಗಿಯೇ ನಿರ್ದೇಶನ ಮಾಡೋ ಚಂದ್ರು ಈ ಚಿತ್ರದ ವಿಚಾರದಲ್ಲಿ ದುಡ್ಡಿನ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗದೆ ಖರ್ಚು ಮಾಡಿದ್ದಾರಂತೆ. ಸೆಟ್ ಸೇರಿದಂತೆ ಎಲ್ಲದರಲ್ಲಿಯೂ ಅದ್ದೂರಿತನ ಹೊಂದಿರೋ ಕನಕಕ್ಕಾಗಿ ಚಂದ್ರು ಖರ್ಚು ಮಾಡಿದ ಪರಿ ಕಂಡು ಖುದ್ದು ಗಾಂಧೀನಗರಕ್ಕೆ ಗಾಂಧೀನಗರವೇ ಬೆಚ್ಚಿಬಿದ್ದಿದೆ. `ವಿಜಿ ಅವರ ಮಾರ್ಕೆಟ್‌ಗೆ ಮೀರಿ ನೀವು ಖರ್ಚು ಮಾಡುತ್ತಿದ್ದೀರಿ’ ಅಂತ ಅನೇಕರು ಹೇಳಿದ್ದಾರಂತೆ.
ಆದರೆ, ನಾನು ನಿರ್ದೇಶನ ಮಾಡೋದಕ್ಕಾಗಿ ಕಥೆ ಹುಡುಕೋದಿಲ್ಲ, ಕಥೆಯನ್ನು ನಿರ್ದೇಶನ ಮಾಡುತ್ತೇನೆ. ಆ ಕಥೆ ಏನು ಬೇಡುತ್ತದೋ ಅದಕ್ಕೆ ತಕ್ಕುದಾದ ಅದ್ದೂರಿತನದೊಂದಿಗೆ ದೃಶ್ಯ ಕಟ್ಟುತ್ತೇನೆ. ಕನಕ ಚಿತ್ರದ ರಿಯಲಿಸ್ಟಿಕ್ ಕಥೆ ಏನು ಬೇಡಿತ್ತೋ ಅದಕ್ಕೆ ತಕ್ಕುದಾಗಿಯೇ ನಿರ್ದೇಶನ ಮಾಡಿದ್ದೇನೆ. ಆದ್ದರಿಂದಲೇ ಚಿತ್ರ ಚೆಂದಗೆ ಮೂಡಿ ಬಂದಿದೆ ಎಂಬುದು ಚಂದ್ರು ಅವರ ಅಭಿಪ್ರಾಯ.


ಅಂದಹಾಗೆ, ಈ ಚಿತ್ರವನ್ನು ಆರಂಭಿಸುವ ಮುನ್ನವೇ ಚಂದ್ರು ಅವರು ಸಾಕಷ್ಟು ಫೀಲ್ಡ್ ವರ್ಕ್ ಮಾಡಿದ್ದರು. ಪ್ರೇಕ್ಷಕರು ತಮ್ಮಿಂದ ಯಾವ ರೀತಿಯ ಚಿತ್ರವನ್ನು ಬಯಸುತ್ತಾರೆಂಬುದನ್ನು ಸ್ವತಃ ತಾವೇ ಕಂಡುಕೊಳ್ಳುವಂಥಾ ಭಿನ್ನವಾದ ದಾರಿಯನ್ನೂ ಕಂಡುಕೊಂಡಿದ್ದರು. ಆ ನಂತರ ಕನಕ ಎಂಬ ರಿಯಲ್ ಕಥೆಯನ್ನು ಆರಿಸಿಕೊಂಡ ಚಂದ್ರು ಒಂದು ಒಳ್ಳೆ ಚಿತ್ರ ಮಾಡಿದ ಖುಷಿಯಲ್ಲಿದ್ದಾರೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image