ಈ ಹಿಂದೆ ಪಾರು ಐ ಲವ್ ಯೂ ಸೇರಿದಂತೆ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಉದಯೋನ್ಮುಖ ಕಲಾವಿದ ರಂಜನ್ ಹಾಸನ್. ನಟನಾಗಿ ಮಾತ್ರವಲ್ಲದೆ, ನಿರ್ಮಾಣ ಸೇರಿದಂತೆ ಇತರೆ ವಲಯಗಳಲ್ಲೂ ಕಾರ್ಯ ನಿರ್ವಹಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಂಜನ್ ನಟನೆಯ ಸಿನಿಮಾವೊಂದು ಈ ವಾರ ತೆರೆಗೆ ಬರುತ್ತಿದೆ. ಅದು ಚೆಕೆ ಮೇಟ್!

ಜಗಜ್ಯೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಂಜನ್ ಹಾಸನ್ ಅವರ ನಿರ್ಮಾಣದ ದಿ ಚೆಕ್‌ಮೇಟ್ ಚಿತ್ರ ಈ ಶುಕ್ರವಾರ (ಅ.7) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸ್ನೇಹ, ಪ್ರೀತಿ, ಬದುಕು ಈ ಮೂರರಲ್ಲಿ ಯಾವುದು ಮುಖ್ಯ, ಬದುಕು ಅಂತ ಬಂದಾಗ ಸ್ನೇಹ, ಪ್ರೀತಿ ಎರಡೂ ಮರೆತುಹೋಗುತ್ತದೆ ಎಂಬ ಕಾನ್ಸೆಪ್ಟ್ ಮೇಲೆ ತಯಾರಾಗಿರುವ ಈ ಚಿತ್ರದಲ್ಲಿ ನಾಲ್ವರು ಸ್ನೇಹಿತರ ನಡುವೆ ನಡೆಯೋ ಕಥೆಯಿದೆ. ಇವರು ತಮ್ಮ ಪ್ರೀತಿಯಲ್ಲಿ ವಿಫಲರಾಗಿ ಬ್ರೇಕಪ್ ಪಾರ್ಟಿ ಮಾಡಲೆಂದು ಒಂದೆಡೆ ಸೇರಿದಾಗ ಅಲ್ಲಿ ಅವರಿಗೆ ಆಗೋ ಅನುಭವಗಳೇನು, ಅವರ ವರ್ತನೆ ಹೇಗಿರುತ್ತೆ ಅಂತ ಚೆಕ್‌ಮೇಟ್ ಚಿತ್ರದ ಮೂಲಕ ಹೇಳಲಾಗಿದೆ. ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಎಂಬ ಇಬ್ಬರು ಯುವನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ.

ರಂಜನ್ ಹಾಸನ್ ಅವರೇ ನಾಯಕನಾಗಿದ್ದು, ಪ್ರೀತು ಪೂಜಾ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. . ವಿಜಯ್ ಚೆಂಡೂರ್, ಪ್ರದೀಪ್ ಪೂಜಾರಿ ಹಾಗೂ ವಿಶ್ವವಿಜೇತ್ ನಾಯಕನ ಸ್ನೇಹಿತರಾಗಿ ನಟಿಸಿದ್ದು. ಸರ್ದಾರ್ ಸತ್ಯ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಅಲ್ಲದೆ ಒಂದು ಮನೆಯಲ್ಲಿ ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ ಶಷಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಈ.ಎಸ್. ಈಶ್ವರ್ ಅವರ ಸಂಕಲನ, ವಯಲೆಂಟ್ ವೇಲು ಅವರ ಸಾಹಸ, ಪ್ರಮೋದ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ರಾಜಶೇಖರ್(ಮಜಾಟಾಕೀಸ್), ನೀನಾಸಂ ಅಶ್ವಥ್, ಕಾಕ್ರೋಚ್ ಸುಧಿ, ಮಜಾಟಾಕೀಸ್ ಹರಿ ಕಾರ್ತಿಕ್, ಕಿಲ್ಲರ್ ಮಂಜು ಚೆಕ್‌ಮೇಟ್ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.