ಇದೇನಿದು ಹರಿಪ್ರಿಯಾಗೆ ಕನ್ನಡ ಗೊತ್ತಿಲ್ಲವಂತೆ!

Picture of Cinibuzz

Cinibuzz

Bureau Report

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ಹರಿಪ್ರಿಯಾ ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲ ಕಾತರರಾಗಿದ್ದರು. ಆದರೀಗ ಸದ್ದೇ ಇಲ್ಲದೆ ಹರಿಪ್ರಿಯಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಸ್ಕ್ರಿಫ್ಟ್ ಪೂಜೆ ಕೂಡಾ ನೆರವೇರಿದೆ!

ಇದುವರೆಗೂ ಭಿನ್ನವಾದ ಪಾತ್ರಗಳಿಗೇ ಹೆಚ್ಚು ಒತ್ತು ನೀಡುತ್ತಾ ಬಂದಿರುವ ಹರಿಪ್ರಿಯಾ ಇದೀಗ ಅಷ್ಟೇ ವಿಶಿಷ್ಟವಾಗಿರೋ ಕಥೆ ಹೊಂದಿರುವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಕನ್ನಡ ಗೊತ್ತಿಲ್ಲ’ ಎಂಬ ಕ್ಯಾಚೀ ಟೈಟಲ್ಲನ್ನೂ ಇಡಲಾಗಿದೆ. ಈ ಶೀರ್ಷಿಕೆಯಂತೆಯೇ ಕುತೂಹಲಕರವಾದ ಕಥೆ ಮತ್ತು ಪಾತ್ರವಿರೋ ಕಾರಣದಿಂದಲೇ ಈ ಚಿತ್ರವನ್ನು ಹರಿಪ್ರಿಯಾ ಒಪ್ಪಿಕೊಂಡಿದ್ದಾರಂತೆ.

ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಮಯೂರ್ ರಾಘವೇಂದ್ರ. ಆರ್‌ಜೆಯಾಗಿದ್ದ ಮಯೂರ್ ಕನ್ನಡ ಗೊತ್ತಿಲ್ಲ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ಬಂದ ಸಾಲು ಸಾಲು ಆಫರ್‌ಗಳನ್ನು ಸರಣಿಯೋಪಾದಿಯಲ್ಲಿ ನಿರಾಕರಿಸಿದ್ದ ಹರಿಪ್ರಿಯಾ ಹೊಸತನದ ಕಾರಣಕ್ಕಾಗಿಯೇ ಈ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ.

ಬೆಂಗಳೂರಿನಂಥಾ ಮಹಾನಗರದಲ್ಲಿ ಕನ್ನಡ ಗೊತ್ತಿಲ್ಲ ಎಂಬುದು ತೀರಾ ಚಿರಪರಿಚಿತವಾದ ಪದ. ಆದರೆ ಈ ಚಿತ್ರದ ಕಥೆ ಇಂಥಾದ್ದೊಂದು ಸೂಕ್ಷ್ಮ ಎಳೆಯೊಂದಿಗೆ ಬೇರೆ ಬೇರೆ ಮಜಲುಗಳನ್ನೂ ತೆರೆದಿಡುತ್ತದೆಯಂತೆ. ಆದ್ದರಿಂದ ಈ ಚಿತ್ರ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಬೇರೇನನ್ನೋ ಹೇಳ ಹೊರಟಿದೆ. ಆ ಕಾರಣದಿಂದಲೇ ಸದಾ ಹೊಸತನ ಬಯಸೋ ಹರಿಪ್ರಿಯಾಗಿದು ನಾಟಿಕೊಂಡಿದೆ.

ಉಳಿದ ತಾರಾಗಣ, ತಾಂತ್ರಿಕ ವರ್ಗದ ವಿವರ ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆ. ಇದುವರೆಗೂ ಬೇರೆ ನಟಿಯರು ಸುಲಭಕ್ಕೆ ನಟಿಸಲು ಒಪ್ಪಿಕೊಳ್ಳದ ಪಾತ್ರಗಳನ್ನೂ ಲೀಲಾಜಾಲವಾಗಿಯೇ ಅಭಿನಯಿಸಿದ್ದ ಹರಿಪ್ರಿಯಾ ಈ ಚಿತ್ರದಲ್ಲಿಯೂ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳೋದಂತೂ ಖಾತರಿ. ಬೆಂಗಳೂರಿನ ವಾತಾವರಣದಲ್ಲಿಯೇ ಚಿತ್ರೀಕರಣ ನಡೆಸಲು ಉದ್ದೇಶಿಸಿರುವ ಈ ಚಿತ್ರದ ಇನ್ನಷ್ಟು ಮಾಹಿತಿಗಳು ಇಷ್ಟರಲ್ಲಿಯೇ ಹೊರ ಬೀಳಲಿವೆ.

#

ಇನ್ನಷ್ಟು ಓದಿರಿ

Scroll to Top