‘ರಥಾವರ’ದಂತಹ ರಗಡ್ ಹಿಟ್ ಕೊಟ್ಟು ಗಾಂಧಿನಗರದ ನಿದ್ದೆ ಗೆಡಿಸಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಮತ್ತೊಂದು ಮಾಸ್ ಕಂಟೆಂಟ್ ಜೊತೆ ಮರಳಿದ್ದಾರೆ. ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬೆಂಬಲದೊಂದಿಗೆ, ಬಹುನಿರೀಕ್ಷಿತ ‘ಚೌಕಿದಾರ್’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಬರುವ 2026ರ ಜನವರಿ 30ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲು ‘ಚೌಕಿದಾರ್’ ಸಜ್ಜಾಗಿದ್ದು, ಚಿತ್ರತಂಡದ ಉತ್ಸಾಹ ಮತ್ತಷ್ಟು ಗರಿಗೆದರಿದೆ.

ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿರುವುದು ಚಿತ್ರತಂಡಕ್ಕೆ ಆನೆಬಲ ತಂದಂತಾಗಿದೆ. ಬಿಡುಗಡೆಯಾಗಿರುವ ಪೋಸ್ಟರ್ ಸಿನಿಪ್ರಿಯರ ಹುಬ್ಬೇರಿಸುವಂತಿದೆ. ಒಂದೆಡೆ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ರಗಡ್ ಲುಕ್ನಲ್ಲಿ ಕಣ್ಣಲ್ಲಿ ಕಿಡಿ ಹಾರಿಸುತ್ತಿದ್ದರೆ, ಮತ್ತೊಂದೆಡೆ ಖಾಕಿ ತೊಡುತ್ತಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಬಾರಿ ನೀಲಿ ಯೂನಿಫಾರ್ಮ್ ಧರಿಸಿ ಗಂಭೀರವಾಗಿ ನಿಂತಿದ್ದಾರೆ.
ಇಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ನಾಯಕ ಪೃಥ್ವಿ ಅಂಬಾರ್ ಅವರ ರೂಪಾಂತರ. ಲವರ್ ಬಾಯ್ ಆಗಿ, ಕ್ಲಾಸ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ಪೃಥ್ವಿ, ಬಂಡಿಯಪ್ಪನವರ ಗರಡಿಯಲ್ಲಿ ಪಕ್ಕಾ ಮಾಸ್ ಹಿರೋ ಆಗಿ ಬದಲಾಗಿದ್ದಾರೆ. ಕೈಯಲ್ಲಿ ರೋಸ್ ಹಿಡಿಯುತ್ತಿದ್ದ ಹುಡುಗನ ಕೈಗೀಗ ಹತಾರ ಬಂದಿದೆ. ರಗಡ್ ಗಡ್ಡ, ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅವರನ್ನು ನೋಡಿದವರು ‘ಇವರೇನಾ ಆ ದಿಯಾ ಹಿರೋ?’ ಎಂದು ಹುಬ್ಬೇರಿಸುವಂತಿದೆ. ಇನ್ನು ದೊಡ್ಮನೆಯ ಕುಡಿ ಧನ್ಯಾ ರಾಮ್ಕುಮಾರ್ ಇಲ್ಲಿ ಗ್ಲಾಮರ್ ಗೊಂಬೆಯಾಗಿಲ್ಲ, ಬದಲಾಗಿ ಹಿಪ್ಪುನೇರಳೆ ಸೊಪ್ಪು ಕೊಯ್ಯುವ ಹಳ್ಳಿ ಸೊಗಡಿನ ಡಿ-ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಚಿತ್ರದಲ್ಲಿ ತಾರಾಬಳಗವೂ ದೊಡ್ಡದಿದೆ. ಖಾಕಿ ತೊಟ್ಟ ಖಡಕ್ ಪೊಲೀಸ್ ಅಧಿಕಾರಿಯಾಗಿ ಹಿರಿಯ ನಟಿ ಸುಧಾರಾಣಿ ಮಿಂಚಿದ್ದರೆ, ನಟಿ ಶ್ವೇತಾ ದೀರ್ಘ ಕಾಲದ ನಂತರ ಬಣ್ಣ ಹಚ್ಚಿದ್ದಾರೆ. ಸಚಿನ್ ಬಸ್ರೂರು ಅವರ ಸಂಗೀತದ ಅಬ್ಬರ, ಸಿದ್ದು ಅವರ ಕ್ಯಾಮೆರಾ ಕಣ್ಣಿನ ಚಮತ್ಕಾರ ಟೀಸರ್ ನಲ್ಲೇ ಎದ್ದು ಕಾಣುತ್ತಿದೆ. ಒಟ್ಟಿನಲ್ಲಿ ಆಕ್ಷನ್, ಎಮೋಷನ್ ಮತ್ತು ರಕ್ತಸಿಕ್ತ ಅಧ್ಯಾಯಗಳನ್ನೊಳಗೊಂಡ ‘ಚೌಕಿದಾರ್’, ಜನವರಿ 30ರಂದು ಪ್ರೇಕ್ಷಕರ ಎದೆಯಬಡಿತ ಹೆಚ್ಚಿಸುವುದು ಗ್ಯಾರಂಟಿ.












































