ಆಫ್ರಿಕಾ ನಟ ಹಾಡಿದ ಕನ್ನಡ ಹಾಡು ವೈರಲ್ ಆಯ್ತು!

Picture of Cinibuzz

Cinibuzz

Bureau Report

ಮಲ್ಲಾಡಿ ನರಸಿಂಹಲು ನಿರ್ಮಾಣದ ತಾರಕಾಸುರ ಚಿತ್ರಕ್ಕೆ ಹಾಲಿವುಡ್‌ನ ದೈತ್ಯ ನಟ ಜೊತೆಯಾಗಿದ್ದಾರೆ. ಈ ಟೈಟಲ್ಲಿಗೆ ತಕ್ಕುದಾದ ಭಾರೀ ದೇಹದಿಂದ, ರಕ್ಕಸ ನಟನೆಯಿಂದ ಚಾಲ್ತಿಯಲ್ಲಿರುವ ಡ್ಯಾನಿ ಸಫಾನಿ ಮೊದಲ ಸಲ ಕನ್ನಡ ಚಿತ್ರರಂಗಕ್ಕೆ ಅಡಿಯಿರಿಸಿದ್ದಾರೆ. ಸಿಂಗಂ ಸರಣಿ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೂ ಪರಿಚಯವಾದ ಈ ನಟ ಇದೀಗ ತಾರಕಾಸುರ ಚಿತ್ರದ ಹಾಡೊಂದನ್ನು ಹಾಡೋ ಮೂಲಕ ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ! ನಿನ್ನೆಯಷ್ಟೇ ತಾರಕಾಸುರು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆದರೆ ಆದಿಯೋ ಬಿಡುಗಡೆಗೂ ಮುನ್ನವೇ ಈ ಚಿತ್ರದ ಹಾಡೊಂದು ಸಂಚಲನ ಮೂಡಿಸಿತ್ತು. ಅದರ ವಿವರ ಇಲ್ಲಿದೆ.

ಇತ್ತೀಚೆಗೆ ತಾರಕಾಸುರ ಚಿತ್ರದ ವೀಡಿಯೋ ಒಂದು ಬಿಡುಗಡೆಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಡಿದ್ದ ಕನ್ನಡ ಕಲಿಯೋ ಕನ್ನಡ ಕಲಿಯೋ ಕಲಿಯೋ ಮುಂಡೇದೆ ಎಂಬ ಹಾಡು ಯೂಟ್ಯೂಬ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿರೋ ಡ್ಯಾನಿ ಈ ಹಾಡನ್ನು ಹಾಡಿದ್ದಾರೆ. ದೂರದ ಲಂಡನ್ನಿನಿಂದ ಈ ಹಾಡನ್ನು ಹಾಡಿ ಕಳಿಸಿದ್ದ ಡ್ಯಾನಿಯ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಅದೆಲ್ಲೋ ಆಫ್ರಿಕಾ ಮೂಲದವರು ಡ್ಯಾನಿ. ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಲೇ ಕನ್ನಡ ಹಾಡು ಹಾಡಲು ಪಟ್ಟಿರೋ ಅವರ ಪ್ರಯತ್ನವನ್ನು ಯಾರಾದರೂ ಮೆಚ್ಚುವಂಥಾದ್ದೇ.

ನಿರ್ಮಾಪಕರಾದ ನರಸಿಂಹಲು ಅವರ ಮಗ ವೈಭವ್ ತಾರಕಾಸುರ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿ ಭಯಂಕರ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇದು ಡ್ಯಾನಿ ಎಂಟ್ರಿ ಕೊಟ್ಟ ಮೊದಲ ಕನ್ನಡ ಚಿತ್ರವೂ ಹೌದು. ಆಫ್ರಿಕಾದಲ್ಲಿನ ರಂಗಭೂಮಿ ನಟರಾಗಿದ್ದ ಡ್ಯಾನಿ ಸಫಾನಿ ಇದೀಗ ಹಾಲಿವುಡ್‌ನ ಬಹು ಬೇಡಿಕೆಯ ನಟ. ತಮಿಳಿನ ಸಿಂಗಂ ಚಿತ್ರದಲ್ಲಿಯೂ ಇವರು ಭಯಂಕರವಾದ ಪಾತ್ರವನ್ನೇ ಮಾಡಿದ್ದರು. ಇಂಥಾ ಡ್ಯಾನಿ ಇದೀಗ ತಾರಕಾಸುರ ಚಿತ್ರದಲ್ಲಿ ನಟಿಸಿದ್ದಾರೆಂಬುದೇ ಈ ಚಿತ್ರದ ಪ್ರಧಾನ ಆಕರ್ಷಣೆಯಾಗಿ ಮಾರ್ಪಾಡಾಗಿದೆ.

ದಿ ಕ್ರೌನ್, ದಿ ಲಾಸ್ಟ್ ಜೇಡಿ, ಮಿಸ್ ಫಿಟ್ಸ್ ಮುಂತಾದ ಚಿತ್ರಗಳ ಮೂಲಕ ಖ್ಯಾತಿಯ ಉತ್ತುಂಗವೇರಿದ್ದ ಡ್ಯಾನಿ ಸಫಾನಿ ವಿಲನ್ ಅವತಾರಕ್ಕೆ ಹೇಳಿ ಮಾಡಿಸಿದಂತಿರೋ ದೇಹಲಕ್ಷಣ ಹೊಂದಿರುವವರು. ಆದರೆ ಈತ ಹಾಲಿವುಡ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕೇವಲ ದೇಹದಿಂದಲ್ಲ, ಅಮೋಘವಾದ ನಟನೆಯಿಂದ. ರಂಗಭೂಮಿ ಹಿನ್ನೆಲೆಯ ಈ ನಟ ತಾರಕಾಸುರ ಚಿತ್ರದ ಮೂಲಕ ಕನ್ನಡಕ್ಕಾಗಮಿಸಿರೋದು ನಿಜಕ್ಕೂ ಪ್ರೇಕ್ಷಕರ ಪಾಲಿಗೆ ಖುಷಿಯ ವಿಚಾರ.

https://www.facebook.com/malladi.narasimhalu.1/videos/328387684395831/ #

ಇನ್ನಷ್ಟು ಓದಿರಿ

Scroll to Top