ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಂಚಿಕೆದಾರರಾಗಿ, ನಿರ್ಮಾಪಕರಾಗಿ ಖ್ಯಾತರಾಗಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಳ್ಳೆ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದಲೇ ಡಿಸ್ಟ್ರಿಬ್ಯೂಟರ್ ಆಗಿಯೂ, ಒಳ್ಳೆ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಅವರೀಗ ನಟನಾಗಿಯೂ ಅಬ್ಬರಿಸಲು ಅಣಿಯಾಗಿದ್ದಾರೆ!
ಇಂಥಾದ್ದೊಂದು ಸೋಜಿಗದ ಸುದ್ದಿ ಹೊರ ಬಿದ್ದಿರೋದು ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಚಿತ್ರದ ಕಡೆಯಿಂದ. ಹಾಗಾದರೆ ಮಲ್ಲಿಕಾರ್ಜುನಯ್ಯನವರು ಟೆರರಿಸ್ಟ್ ಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ಅವರಿಲ್ಲಿ ಟೆರರಿಸ್ಟುಗಳನ್ನು ಸದೆ ಬಡಿಯುವ ಇಂಟಲಿಜೆನ್ಸ್ ಪಾತ್ರದಲ್ಲಿ ವೀರೋಚಿತವಾಗಿ ಅಭಿನಯಿಸಲಿದ್ದಾರಂತೆ. ನಿರ್ದೇಶಕ ಪಿಸಿ ಶೇಖರ್ ಅವರು ಈ ಮೂಲಕ ನಿರ್ಮಾಪಕ ಮಲ್ಲಿಕಾರ್ಜುನಯ್ಯನವರು ಬಣ್ಣ ಹಚ್ಚುವಂತೆ ಮಾಡಿದ್ದಾರೆ.

ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ ಟೆರರಿಸ್ಟ್ ಚಿತ್ರ ಪೋಸ್ಟರುಗಳೂ ಸೇರಿದಂತೆ ನಾನಾ ಬಗೆಯಲ್ಲಿ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಖಡಕ್ ಆದ ಇಂಟಲಿಜೆನ್ಸ್ ಆಫಿಸರ್ ಪಾತ್ರವೊಂದಿದೆಯಂತೆ. ಇಡೀ ಚಿತ್ರದಲ್ಲಿ ಈ ಪಾತ್ರದ್ದು ನಿರ್ಣಾಯಕ ಛಾಯೆಯಿದೆ. ಆದರೆ ಈ ಪಾತ್ರಕ್ಕೆ ಸೂಕ್ತ ನಟರಿಗಾಗಿ ಬಹಳಷ್ಟು ದಿನಗಳಿಂದ ತಲಾಷು ನಡೆಯುತ್ತಿತ್ತು. ಕಡೆಗೂ ಆ ಪಾತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯನವರೇ ಸೂಕ್ತ ಅಂತ ನಿರ್ದೇಶಕರು ನಿರ್ಧರಿಸಿದ್ದರಂತೆ. ಅದಕ್ಕೆ ಪುಷ್ಕರ್ ಅವರ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ ಎಂಬ ಮಾತುಗಳಿವೆ.

ಇದುವರೆಗೂ ಪ್ರಯೋಗಾತ್ಮಕ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಟೆರರಿಸ್ಟ್ ಚಿತ್ರದ ಮೂಲಕ ತಮ್ಮನ್ನೇ ಹೊಸಾ ಪ್ರಯೋಗವೊಂದಕ್ಕೆ ಒಡ್ಡಿಕೊಂಡಿದ್ದಾರೆ. ಇಂಟಲಿಜೆನ್ಸ್ ಆಫಿಸರ್ ಪಾತ್ರಕ್ಕೆ ಹೇಳಿ ಮಾಡಿಸಿದಂಥಾ ದೇಹ ಪ್ರಕೃತಿ, ಖಡಕ್ ಲುಕ್ಕು ಹೊಂದಿರೋ ಪುಷ್ಕರ್ ಈ ಪಾತ್ರದ ಮೂಲಕ ನಟನಾಗಿ ನೆಲೆ ನಿಂತರೂ ಅಚ್ಚರಿಯೇನಿಲ್ಲ!
#












































