ವಿಷ್ಣು ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯ ಕೊಡುಗೆ!

Picture of Cinibuzz

Cinibuzz

Bureau Report

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಚಿತ್ರೀಕರಣದ ಹಂತದಲ್ಲಿಯೇ ಹಂತ ಹಂತವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಈ ಚಿತ್ರದೊಳಗೆ ಸಾಹಸಸಿಂಹ ವಿಷ್ಣುವರ್ಧನ್ ಅವರೆಡೆಗಿನ ಅಭಿಮಾನವೇ ಮೇಳೈಸಿದೆ. ಹಾಗಿರುವಾಗ ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯ ಕಡೆಯಿಂದೊಂದು ಕೊಡುಗೆ ನಿರೀಕ್ಷಿತವೇ. ಅದಕ್ಕಾಗಿ ನಿರ್ದೇಶಕ ಗುರುದೇಶಪಾಂಡೆ ತಯಾರಾಗಿದ್ದಾರೆ!

ಸಾಹಸಸಿಂಹನಿಗೆ ಅರ್ಪಿಸಲೆಂದೇ ವಿಶೇಷವಾದೊಂದು ರ‍್ಯಾಪ್ ಸಾಂಗನ್ನು ಚಿತ್ರತಂಡ ರೂಪಿಸಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಚೆಂದದ್ದೊಂದು ಟ್ಯೂನು ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣವೂ ಈಗಾಗಲೇ ಮುಗಿದಿದೆ. ಇದನ್ನು ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ವಿಷ್ಣು ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಗೊಳಿಸಲು ಗುರುದೇಶಪಾಂಡೆ ನಿರ್ಧರಿಸಿದ್ದಾರೆ.

ಕೆ ಮಂಜು ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಆತ್ಮೀಯವಾದ ಸಖ್ಯ ಹೊಂದಿದ್ದವರು. ಪಡ್ಡೆಹುಲಿ ಚಿತ್ರದ ನಾಯಕ, ಮಂಜು ಪುತ್ರ ಶ್ರೇಯಸ್ ಕೂಡಾ ವಿಷ್ಣು ಅಭಿಮಾನಿ. ಈ ಚಿತ್ರದಲ್ಲಿಯೂ ಅವರು ವಿಷ್ಣುವರ್ಧನ್ ಅಭಿಮಾನಿಯಾಗಿಯೇ ನಟಿಸಿದ್ದಾರೆ. ತನ್ನ ಚಿತ್ರದ ಹಾಡೊಂದನ್ನು ಸಾಹಸಸಿಂಹನಿಗಾಗಿಯೇ ರೂಪಿಸೋ ಐಡಿಯಾ ಕೇಳಿ ಖುಷಿಗೊಂಡ ಶ್ರೇಯಸ್ ಉತ್ಸಾಹದಿಂದಲೇ ಅದರಲ್ಲಿ ಭಾಗಿಯಾಗಿದ್ದಾರಂತೆ. ಈ ಕಾರಣದಿಂದಲೇ ಎನರ್ಜಿಟಿಕ್ ಆಗಿ ಮೂಡಿ ಬಂದಿರೋ ಈ ಹಾಡು ಸಾಹಸಸಿಂಹನ ಹುಟ್ಟುಹಬ್ಬದಂದು ಅನಾವರಣಗೊಳ್ಳಲಿದೆ.

ಡಾ ವಿಷ್ಣುವರ್ಧನ್ ಅವರೇ ಹೇಳಿದ್ದ ಕಥಾ ಎಳೆಯೊಂದನ್ನು ವಿಸ್ತರಿಸಲ್ಪಟ್ಟಿರೋ ಕಥಾನಕ ಹೊಂದಿರೋದು ಪಡ್ಡೆ ಹುಲಿಯ ಅಸಲೀ ವಿಶೇಷ. ಇಡೀ ಚಿತ್ರದಲ್ಲಿಯೂ ವಿಷ್ಣು ಅಭಿಮಾನ ಮಿಳಿತವಾಗಿದೆ. ಅವರ ಹುಟ್ಟುಹಬ್ಬಕ್ಕೆ ಹಾಡೊಂದನ್ನು ರೂಪಿಸೋ ಮೂಲಕ ಅದನ್ನು ಸಾರ್ಥಕಗೊಳಿಸುವ ಕೆಲಸಕ್ಕೆ ಚಿತ್ರತಂಡ ಮುಂದಾಗಿದೆ.

#

ಇನ್ನಷ್ಟು ಓದಿರಿ

Scroll to Top