ಲಹರಿ ಆಡಿಯೋ ಸಂಸ್ಥೆಯ ಮೂಲಕ ಹತ್ತಾರು ಪ್ರಾಕಾರಗಳ ಸಾವಿರಾರು ಹಾಡುಗಳನ್ನು ಕನ್ನಡಿಗರಿಗೆ ಕೇಳಿಸಿದವರು ಲಹರಿ ವೇಲು. ಹಾಡುಗಳ ಜೊತೆಗೇ ಬದುಕುವಂಥಾ ವ್ಯಕ್ತಿತ್ವದ ವೇಲು ಅವರಿಂದಲೇ ಹಾಡುಗಳನ್ನು ಹಾಡಿಸಬೇಕೆಂಬ ಆಲೋಚನೆ ಈ ಹಿಂದೆಯೇ ದಿಗ್ಗಜ ಸಂಗೀತ ನಿರ್ದೇಶಕರುಗಳಿಗೆ ಬಂದಿದ್ದಿದೆ. ಆದರೆ ರಾಜ್ಯ ಪ್ರಶಸ್ತಿ ವಿಜೇತ ಯುವ ಸಂಗೀತ ನಿರ್ದೇಶಕ ಅಭಿಮನ್ ರಾಯ್ ವೇಲು ಅವರಿಂದ ಹಾಡಿಸುವಲ್ಲಿ ಕಡಗೂ ಗೆದ್ದಿದ್ದಾರೆ.

ಅಭಿಮನ್ ರಾಯ್ ವೇಲು ಅವರಿಂದ ಹಾಡಿಸುವಲ್ಲಿ ಮಾತ್ರ ಗೆದ್ದಿಲ್ಲ, ವೇಲು ಹಾಡಿದ ಮೊದಲ ಹಾಡೂ ಕೂಡಾ ಜನಮನ ಗೆದ್ದಿದೆ. ಇದು ದಕ್ಷಿಣ ಭಾರತದ ಆಡಿಯೋ ಕಂಪೆನಿ ಮಾಲೀಕರೊಬ್ಬರು ಹಾಡಿದ ಮೊದಲ ಹಾಡು ಅನ್ನೋ ಹೆಗ್ಗಳಿಕೆ ಕೂಡಾ ಹೌದು!
ಅಭಿಮನ್ ರಾಯ್ ಸಂಗೀತ ಸಂಯೋಜನೆ ಮಾಡಿ, ಒಳಿತುಮಾಡು ಮನುಸ ಖ್ಯಾತಿಯ ಋಷಿ ಬರೆದಿರುವ `ಇರುವುದೊಂದೆ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಹಾಡನ್ನು ಲಹರಿ ವೇಲು ಹಾಡಿದ್ದಾರೆ. ಇಷ್ಟೊಂದು ಸುದೀರ್ಘ ಕಾಲ ಹಾಡಿನ ಸಾಂಗತ್ಯದಲ್ಲೆ ಕಳೆದಿದ್ದರಿಂದಲೋ ಏನೋ… ವೇಲು ಅವರು ಅದ್ಭುತವಾಗಿ ಹಾಡಿದ್ದಾರೆ. ಭಾವಗೀತೆಗಳಿಗೆ ಹೊಸಾ ಸ್ವರದ ಗುಂಗು ಹತ್ತಿಸಿದ್ದ ಸಿ ಅಶ್ವತ್ಥ್ ಅವರಂಥಾದ್ದೇ ವಿಶಿಷ್ಟವಾದ ಕಂಠ ಸಿರಿಯ ಮೂಲಕ ಲಹರಿ ವೇಲು ಮೊದಲ ಹಾಡಿನಲ್ಲಿಯೇ ಎಲ್ಲರಿಗೂ ಇಷ್ಟವಾಗಿದ್ದಾರೆ.

ಗಣೇಶನ ಹಬ್ಬದಂದು ಬಿಡುಗಡೆಯಾಗಿರೋ ಈ ಹಾಡಿನ ಬಗ್ಗೆ, ವೇಲು ಅವರ ಹಾಡುಗಾರಿಕೆಯ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಹರಿದು ಬರುತ್ತಿದೆ. ಕನ್ನಡಕ್ಕೊಂದು ವಿಭಿನ್ನವಾದ ಕಂಠವನ್ನು ಪರಿಚಯಿಸಿದ್ದಕ್ಕಾಗಿ ಜನ ಅಭಿಮನ್ ರಾಯ್ ಅವರನ್ನೂ ಅಭಿನಂದಿಸುತ್ತಿದ್ದಾರೆ.
ಅಭಿಮನ್ ರಾಯ್ ಅವರ ಮೊದಲ ಆಲ್ಬಂ ಅನ್ನು ಲಾಂಚ್ ಮಾಡಿದ್ದವರು ಲಹರಿ ವೇಲು. ಈ ಆಲ್ಬಂ ಅನ್ನು ಹೊರತರಲು ಬೇರೆ ಸಂಸ್ಥೆಗಳು ಮೀನಾ ಮೇಷ ಎಣಿಸುತ್ತಿದ್ದಾಗ ನೆರವಿಗೆ ಬಂದಿದ್ದ ವೇಲು ಅವರೊಳಗಿನ ಸಹಾಯ ಮಾಡೋ ಮನಸ್ಥಿತಿ ಅಭಿಮಾನ್ ರಾಯ್ ಅವರನ್ನು ತಾಕಿತ್ತಂತೆ. ಯಾರೇನೇ ಸಹಾಯ ಕೇಳಿ ಬಂದರೂ ನೆರವಿಗೆ ನಿಲ್ಲೋ ವ್ಯಕ್ತಿತ್ವದ ಲಹರಿ ವೇಲು ಅವರಿಂದ ಹಾಡಿಸಬೇಕೆಂಬ ಉದ್ದೇಶದಿಂದಲೇ ಅಭಿಮಾನ್ ಋಷಿ ಅವರ ಕೈಲಿ ಈ ಹಾಡನ್ನು ಬರೆಸಿ ವೇಲು ಅವರನ್ನು ಅಪ್ರೋಚ್ ಮಾಡಿದ್ದರಂತೆ.
ವೇಲು ಈ ಹಾಡಿನ ಸಾಹಿತ್ಯ ಮತ್ತು ಸಂಗೀತವನ್ನು ಮೆಚ್ಚಿಕೊಂಡರಾದರೂ ತಾವೇ ಹಾಡಲು ಹಿಂದೇಟು ಹಾಕಿ, ಒಳ್ಳೆ ಗಾಯಕರಿಂದ ಹಾಡಿಸಲು ಸಲಹೆ ನೀಡಿದ್ದರಂತೆ. ಕಡೆಗೂ ಪಟ್ಟು ಬಿಡದ ಅಭಿಮಾನ್ ಅವರಿಂದ ಟ್ರ್ಯಾಕ್ ಹಾಡಿಸಿದ್ದರು. ಇದರಿಂದ ಧೈರ್ಯ ತಂದುಕೊಂಡ ವೇಲು ಕಡೆಗೂ ಹಾಡನ್ನು ಹಾಡಿದ್ದರು. ಈ ಹಿಂದೆ ನಾದಬ್ರಹ್ಮ ಹಂಸಲೇಖಾ ಅವರೇ ವೇಲು ಅವರನ್ನು ಹಾಡುವಂತೆ ಹೇಳಿದ್ದರಂತೆ. ನಂತರ ಗುರುಕಿರಣ್ ಕೂಡಾ ವೇಲು ಅವರಿಂದ ಹಾಡಿಸೋ ಪ್ರಯತ್ನ ಮಾಡಿದ್ದರು.

ಆದರೆ ಅದನ್ನು ತಮ್ಮೊಳಗಿನ ಆತಂಕದ ಕಾರಣದಿಂದ ನಯವಾಗಿಯೇ ತಪ್ಪಿಸಿಕೊಂಡಿದ್ದ ವೇಲು ಈ ಹಾಡನ್ನು ಹಾಡಿದ್ದಾರೆ. ವೃತ್ತಿಪರ ಹಾಡುಗಾರರಂತೆಯೇ ಈ ಹಾಡಿಗೆ ಧ್ವನಿಯಾಗಿರೋ ವೇಲು ಮುಂದಿನ ದಿನಗಳಲ್ಲಿ ಗಾಯಕರಾಗಿ ಬ್ಯುಸಿಯಾದರೂ ಅಚ್ಚರಿ ಪಡುವಂತಿಲ್ಲ!
ಪ್ರೇಮಲೋಕದಿಂದ ಹಿಡಿದು ಬಾಹುಬಲಿ, ರಂಗಸ್ಥಲಂತನಕ ಭಾರತೀಯ ಚಿತ್ರರಂಗದ ಮೆಘಾ ಹಿಟ್ ಸಿನಿಮಾಗಳ ಆಡಿಯೋ ಹಕ್ಕನ್ನು ಪಡೆದಿರೋ ಲಹರಿ ಸಂಸ್ಥೆಯ ವೇಲು ಈಗ ತಾವೇ ಒಂದು ಹಾಡಿಗೆ ದನಿಯಾಗಿ ಅದು ಜನಮನ ಸೂರೆಗೊಂಡಿರುವುದು ಅಭಿನಂದಿಸಬೇಕಾದ ವಿಚಾರ.
#












































