ರೆಬೆಲ್ ಸ್ಟಾರ್ ಅಂಬರೀಶ್ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ವ್ಯಾಪಕ ನಿರೀಕ್ಷೆ ಹುಟ್ಟಿರೋದರ ಹಿಂದಿರೋ ಸೂತ್ರಧಾರ ಗುರುದತ್ ಗಾಣಿಗ. ಇದು ಈತ ನಿರ್ದೇಶನ ಮಾಡಿರೋ ಮೊದಲ ಚಿತ್ರ. ಇಪ್ಪತ್ತಾರನೇ ವಯಸ್ಸಿಗೇ ಕಿಚ್ಚ ಸುದೀಪ್ ಬ್ಯಾನರಿನ, ಜಾಕ್ ಮಂಜು ಮಂಜು ನಿರ್ಮಾಣದ, ರೆಬೆಲ್ ಸ್ಟಾರ್ ಅಂಬರೀಶ್ ನಾಯಕನಾಗಿರೋ ಚಿತ್ರವೊಂದನ್ನು ನಿರ್ದೇಶನ ಮಾಡೋ ಅವಕಾಶ ಸಿಕ್ಕಿದ್ದು ಈ ಹುಡುಗನ ಅದೃಷ್ಟ ಎಂದೇ ಅನೇಕರು ಅಂದುಕೊಂಡಿರ ಬಹುದು. ಆದರೆ ಈ ಅವಕಾಶ ಒಲಿದು ಬಂದಿದ್ದರ ಹಿಂದೆ ಹುಡುಗು ಮನಸಿನ ಹುಂಬತನದ ಕಥೆಯಿದೆ. ಅಖಂಡ ಒಂದು ದಶಕಗಳ ಕಾಲ ಪಟ್ಟ ಪಡಿಪಾಟಲಿನ ಪಾಲೂ ಇದೆ!

ಗುರುದತ್ ಗಾಣಿಗ ಕುಂದಾಪುರದ ಹುಡುಗ. ಇಲ್ಲಿನ ನಾಗೂರು ಎಂಬ ಪುಟ್ಟ ಊರಿನವರಾದ ಗುರುಗೆ ಹೈಸ್ಕೂಲು ಓದೋ ಕಾಲದಲ್ಲಿಯೇ ನಿರ್ದೇಶಕನಾಗೋ ಕನಸು ಬಿದ್ದಿತ್ತು. ಓದೆಂದರೆ ಒಂಥರಾ ಅಲರ್ಜಿ ಹೊಂದಿದ್ದ ಗುರುದತ್‌ಗೆ ಬಣ್ಣದ ಲೋಕದ ಮರ್ಜಿಗೆ ಬಿದ್ದ ಮೇಲಂತೂ ಓದು ಅಪಥ್ಯವಾಗಲಾರಂಭಿಸಿತ್ತು. ಆದರೂ ಪೋಷಕರ ಒತ್ತಾಸೆಗೆ ಮಣಿದು ತ್ರಾಸದಿಂದಲೇ ಪಿಯುಸಿ ಮಾಡಿಕೊಂಡವರೆ ಅದರ ರಿಸಲ್ಟು ಬರೋ ಮುನ್ನವೇ ಬೆಂಗಳೂರಿನತ್ತ ಹೊರಟು ನಿಂತಿದ್ದರು. ಮನೆಯಲ್ಲಿ ವಿರೋಧ ಬಂದರೂ ಲೆಕ್ಕಿಸದ ಗುರುದತ್ ಮನಸಲ್ಲಿದ್ದದ್ದು ನಿರ್ದೇಶಕನಾಗಿಯೇ ತೀರುವ ಛಲ. ಹಾಗೆ ಏಕಾಏಕಿ ಊರು ಬಿಟ್ಟು ಬಂದು ಬೆಂಗಳೂರಿಗೆ ಬಂದಿಳಿಯೋ ಹೊತ್ತಿಗೆಲ್ಲ ಅವರಿಗೆ ಕೇವಲ ಹದಿನಾರು ವರ್ಷವಾಗಿತ್ತಷ್ಟೆ!

ಆ ಕಾಲಕ್ಕೆ ಗುರುದತ್ ಪರಿಚಿತರಾಗಲಿ, ಸಂಬಂಧಿಕರಾಗಲಿ ಬೆಂಗಳೂರಿನಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಒಂದಷ್ಟು ಕಾಲ ಹೊಟ್ಟೆ ಹೊರೆಯಲು ಕೆಲಸ ಮಾಡಿ ಹೇಗಾದರೂ ಚಿತ್ರರಂಗ ಪ್ರವೇಶ ಮಾಡಬೇಕಂದುಕೊಂಡಿದ್ದವರಿಗೆ ಗಾಂಧಿ ನಗರದ ದಿಕ್ಕ್ಯಾವುದೆಂಬುದೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಕಡೆಗೂ ಹೇಗೋ ಹರಸಾಹಸ ಪಟ್ಟು ಮೇಕಪ್ ಅಸಿಸ್ಟೆಂಟ್ ಅಂತೆಲ್ಲ ಕೆಲಸ ಮಾಡಲಾರಂಭಿಸಿದ ಗುರುದತ್ ನಿರ್ದೇಶನ ವಿಭಾಗಕ್ಕೂ ತೂರಿಕೊಂಡಿದ್ದರು. ಆದರೂ ಇದು ತನ್ನ ಹಾದಿಗೆ ಸಂಪೂರ್ಣವಾಗಿ ದಿಕ್ಕಾಗುತ್ತಿಲ್ಲ ಎಂಬಂಥಾ ಅತೃಪ್ತಿ ಇದ್ದೇ ಇತ್ತು. ಕಡೆಗೂ ಅದೊಂದು ದಿವ್ಯ ಘಳಿಗೆಯಲ್ಲಿ ಸುದೀಪ್ ಸಾನಿಧ್ಯ ಸಿಕ್ಕಿತ್ತು. ಅವರ ಜೊತೆಗೇ ಕೆಲಸ ಮಾಡೋ ಅವಕಾಶವೂ ಒಲಿದು ಬಂದಿತ್ತು.

ಸುದೀಪ್ ಜೊತೆ ಕೆಲಸ ಮಾಡುತ್ತಾ ಅವರ ಶಿಸ್ತು, ಪ್ರತಿಯೊಂದು ವಿಚಾರದಲ್ಲಿಯೂ ಪರ್ಫೆಕ್ಟ್ ಆಗಿರಬೇಕೆಂಬ ತಹತಹಗಳನ್ನೆಲ್ಲ ಅನುಸರಿಸಿಕೊಂಡು ಸಾಗಲಾರಂಭಿಸಿದ್ದ ಗುರುದತ್‌ಗೆ ಒಂದೊಂದೇ ಜವಾಬ್ದಾರಿಗಳು ಸಿಗಲಾರಂಭಿಸಿದ್ದವು. ಸುದೀಪ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿಯೂ ಪಳಗಲಾರಂಭಿಸಿದ್ದರು. ಈ ನಡುವೆ ತಾನು ಸ್ವತಂತ್ರ ನಿರ್ದೇಶಕನಾಗಬೇಕೆಂಬ ಆಸೆಯನ್ನು ಹೇಳಿಕೊಂಡಾಗ ಸುದೀಪ್ ಅವರ ಕಡೆಯಿಂದ ಉತ್ತೇಜನವೇ ಸಿಕ್ಕಿತ್ತು. ನಂತರ ಕಥೆಯೊಂದನ್ನು ರೆಡಿ ಮಾಡಿಕೊಳ್ಳಲಾರಂಭಿಸಿದ್ದ ಗುರುದತ್ ಸುದೀಪ್ ಅವರ ಬಳಿ ಅಡಿಗಡಿಗೆ ಚರ್ಚೆ ನಡೆಸಲಾರಂಭಿಸಿದ್ದರು.

ಈ ನಡುವೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ತಮ್ಮದೇ ಬ್ಯಾನರಿನಿಂದ ನಿರ್ಮಾಣ ಮಾಡುವ ನಿರ್ಧಾರವನ್ನು ಸುದೀಪ್ ತೆಗೆದುಕೊಂಡಿದ್ದರು. ಆರಂಭದಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಲು ಬೇರೆ ನಿರ್ದೇಶಕರಿಗಾಗಿಯೇ ಸುದೀಪ್ ಹುಡುಕಲಾರಂಭಿಸಿದ್ದರು. ಗುರುದತ್ ಕೂಡಾ ಈ ಪ್ರಾಜೆಕ್ಟಿನ ಭಾಗವಾಗಿ ಕೆಲಸ ಮಾಡಲಾರಂಭಿಸಿದ್ದರಾದರೂ ಈ ಚಿತ್ರ ನಿರ್ದೇಶನ ಮಾಡೋ ಅವಕಾಶ ತನಗೇ ಸಿಗುತ್ತದೆ ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ಆದರೆ ಅದೊಂದು ದಿನ ಗುರುದತ್‌ರನ್ನು ಕರೆದ ಸುದೀಪ್ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ನೀನೇ ನಿರ್ದೇಶನ ಮಾಡು ಅಂದಿದ್ದರು. ತಾವೇ ಗುರುವನ್ನು ಅಂಬರೀಶ್ ಅವರಿಗೆ ಪರಿಚಯ ಮಾಡಿಕೊಟ್ಟು `ಇವನು ನಮ್ಮ ಹುಡುಗ. ವಯಸು ಚಿಕ್ಕದಾದರೂ ಕೆಲಸಗಾರ. ಈ ಪ್ರಾಜೆಕ್ಟನ್ನು ಇವನೇ ಪೂರ್ತಿಗೊಳಿಸುತ್ತಾನೆ’ ಅಂತ ಭರವಸೆಯ ಮಾತುಗಳನ್ನಾಡಿದ್ದರು. ಆ ಬಳಿಕ ಅಂಬಿ ಕೂಡಾ ವಯಸ್ಸಿನ ಹಂಗಿಲ್ಲದೆ ಗುರುದತ್‌ಗೆ ಸಾಥ್ ನೀಡಿದ್ದರು.

ಇದು ಗುರುದತ್ ಪಾಲಿನ ಅಸಲೀ ಟರ್ನಿಂಗ್ ಪಾಯಿಂಟ್. ಅದು ಸಾಧ್ಯವಾದದ್ದು ಸುದೀಪ್ ಅವರಿಂದಲೇ ಎಂಬುದು ಅವರ ನಂಬಿಕೆ. ಅಖಂಡ ಹತ್ತು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದುಕೊಂಡು ಅದೇನೇ ಮಾಡಿದರೂ ಗುರುದತ್ ಪೋಶಕರಿಗೆ ಮಗ ಬರಖತ್ತಾಗೋ ಯಾವ ಭರವಸೆಯೂ ಹುಟ್ಟದಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಗುರು ಸುದೀಪ್ ಅವರ ಬಳಿ ಸೇರಿಕೊಂಡ ನಂತರ ಆ ಅಭಿಪ್ರಾಯ ಬದಲಾಗಿತ್ತಂತೆ. ಈಗ್ಗೆ ನಾಲಕ್ಕೂವರೆ ವರ್ಷದ ಹಿಂದೆ ಗುರುದತ್ ಊರಿಗೆ ಹೋಗಿ ವಾಪಾಸಾಗುವಾಗ ಏನಾದರೊಂದು ಸಾಧಿಸದೇ ಮತ್ತೆ ಊರಿಗೆ ಬರೋದಿಲ್ಲ ಎಂಬ ಪ್ರತಿಜ್ಞೆ ಮಾಡಿಕೊಂಡೇ ಬೆಂಗಳೂರಿಗೆ ಮರಳಿದ್ದರಂತೆ. ಈ ಚಿತ್ರ ಆರಂಭವಾದಾಗ ಊರಿಗೆ ಹೋಗಬೇಕನ್ನಿಸಿದರೂ ಸಮಯ ಸಿಕ್ಕದೆ ಇದೀಗ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಭರ್ಜರಿ ಯಶಸ್ಸಿನ ಖುಷಿ ಹೊತ್ತು ಹೆತ್ತರವನ್ನು ಕಾಣುವ ಉತ್ಸಾಹದಿಂದಿದ್ದಾರೆ.

#












































