ರಮ್ಯಾ ಮೇಲೆ ದೇಶದ್ರೋಹದ ಕೇಸ್!

Picture of Cinibuzz

Cinibuzz

Bureau Report

ನಟಿ ರಮ್ಯಾ ರಾಜಕಾರಣಿಯಾದ ಮೇಲೆ ವಿವಾದಗಳಿಗೇನೂ ಕೊರತೆಯಿಲ್ಲ. ಅದರಲ್ಲಿಯೂ ಆಕೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಮೇಲಂತೂ ವಿವಾದಗಳ ಸುಗ್ಗಿ. ಇದರ ಬಗ್ಗೆ ಸಾಮಾಜಿಕ ಜಾಲತಾಣದ ತುಂಬಾ ರಾಣಾ ರಂಪವಾಗಿದ್ದೂ ಇದೆ. ಇದೀಗ ಮೋದಿಯನ್ನು ಮೂದಲಿಸಿದಳೆಂಬ ಕಾರಣಕ್ಕೆ ರಮ್ಯಾ ಮೇಲೆ ದೇಶದ್ರೋಹದ ಕೇಸೊಂದು ದಾಖಲಾಗಿದೆ!

ಕೆಲ ದಿನಗಳ ಹಿಂದೆ ರಮ್ಯಾ ಟ್ವಿಟರ್‌ನಲ್ಲಿ ಮೋದಿಯನ್ನು ಅಣಕಿಸುವಂಥಾದ್ದೊಂದು ಫೋಟೋ ಶೇರ್ ಮಾಡಿದ್ದರು. ಅದು ಖುದ್ದು ಮೋದಿಯೇ ತನ್ನ ಮೇಣದ ಪ್ರತಿಮೆಯ ಹಣೆಯ ಮೇಲೆ ಚೋರ್ ಅಂತ ಬರೆಯುತ್ತಿರೋ ವಿಡಂಬನಾತ್ಮಕ ಫೋಟೋಶಾಪ್ ಮಾಡಿದ ಫೋಟೋ ಒಂದನ್ನು ಶೇರ್ ಮಾಡಿದ್ದ ರಮ್ಯಾ ‘ಚೋರ್ ಪಿಎಂ ಚುಪ್ ಹೈ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಳು. ಇದೇ ಆಕೆಯ ಮೇಲೊಂದು ದೇಶದ್ರೋಹದ ಕೇಸು ಜಡಿದುಕೊಳ್ಳಲು ಕಾರಣವಾಗಿದೆ.

ಇದರ ವಿರುದ್ಧ ಲಖನೌ ವಕೀಲ ಸೈಯದ್ ರಿಜ್ವಾನ್ ಅಹ್ಮದ್ ದೇಶದ್ರೋಹದ ಕೇಸು ದಾಖಲಿಸಿದ್ದಾರೆ. ಇದರನ್ವರ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ರಮ್ಯಾ ವಿರುದ್ಧ ಎಫ್‌ಐಆರ್ ಆಗಿದೆ. ಈ ಪ್ರಿಯನ್ನು ಸೈಯದ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಸಾಕಷ್ಟ ಸಲ ಈ ಪೋಸ್ಟ್ ಡಿಲೀಟ್ ಮಾಡುವಂತೆ ಹೇಳಿದರೂ ರಮ್ಯಾ ನಿರಾಕರಿಸಿದ್ದರಿಂದಲೇ ಈ ದೂರು ದಾಖಲಿಸಲಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ರಮ್ಯಾ ಮಾಡಿರೋ ಈ ಪೋಸ್ಟ್ ಭಾರತದ ಗಣತಂತ್ರ ಮತ್ತು ಪ್ರಧಾನಿ ಮೇಲೆ ಮಾಡಿರೋ ದಾಳಿ ಎಂದೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಇದರ ಬೆನ್ನಲ್ಲಿಯೇ ದೆಹಲಿಯ ವಕೀಲ ವಿಭೂರ್ ಆನಂದ್ ಕೂಡಾ ರಮ್ಯಾ ಮೇಲೆ ಹತ್ತು ಸಾವಿರ ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನು ಟೀಕಿಸೋದು ದೇಶದ್ರೋಹ ಹೇಗಾಗುತ್ತದೆ ಎಂಬುದರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಇಂಥಾದ್ದರ ಮೂಲಕ ಪ್ರಧಾನಿ ಪ್ರಶ್ನಾತೀತ ಎಂಬ ಸರ್ವಾಧಿಕಾರ ಹೇರಲಾಗುತ್ತಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಆದರೆ ಇದೆಲ್ಲ ಬೆಳವಣಿಗೆಗಳ ಬಗ್ಗೆ ರಮ್ಯಾ ವಾಹ್ ಚೆನ್ನಾಗಿದೆ ಅಂತಷ್ಟೇ ಪ್ರತಿಕ್ರಿಯೆ ನೀಡಿದ್ದಾಳೆ!

#

ಇನ್ನಷ್ಟು ಓದಿರಿ

Scroll to Top