ಕನ್ನಡ ಪ್ರೇಕ್ಷಕರ ಯೋಗ್ಯತೆ ಇಷ್ಟೇನಾ?

Picture of Cinibuzz

Cinibuzz

Bureau Report

“ಕನ್ನಡದ ಪ್ರೇಕ್ಷಕರಿಗೂ ಯೋಗ್ಯತೆ ಬರಬೇಕು. ಉತ್ತಮ ಚಿತ್ರಗಳನ್ನು ಉಳಿಸಿಕೊಳ್ಳುವ ದೊಡ್ಡತನ ಇವರಲ್ಲಿಲ್ಲ…!”

  • ಇದು ಸ್ವಲ್ಪ ದೊಡ್ಡಮಾತು ಅನ್ನಿಸಿದರೂ, ವಾಸ್ತವ…

ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೇ ಸಿನಿಮಾಗಳು ಬರೋದೇ ಇಲ್ಲ ಅಂತಾ ರಾಗ ಎಳೆಯೋ ಜನ, ತುಂಬಾನೇ ಉತ್ತಮ ಸಿನಿಮಾಗಳು ಬಂದಾಗ ರಿಸೀವ್ ಮಾಡಿಕೊಳ್ಳೋದು ಅಷ್ಟರಲ್ಲೇ ಇದೆ! ಇಲ್ಲೇನಿದ್ದರೂ ಸುಮಾರಾದ ಸಿನಿಮಾಗಳಿಗೆ ಅಬ್ಬರದ ಪ್ರಚಾರ ಕೊಡಬೇಕು. ಇಷ್ಟು ಖರ್ಚು ಮಾಡಿ ಅಷ್ಟು ಖರ್ಚಾಗಿದೆ ಅಂತಾ ಓಳು ಬಿಡಬೇಕು. ಸಿನಿಮಾದವರೇ ಟಿಕೇಟು ಬುಕ್ ಮಾಡಿಸಿ ಆನ್ ಲೈನಲ್ಲಿ ಆರೆಂಜ್ ತೋರಿಸಬೇಕು… ನಿಜಕ್ಕೂ ಉತ್ತಮ ಕಂಟೆಂಟ್ ಇರೋ ಸಿನಿಮಾಗಳನ್ನು ಮಾಡಿದವರು ಇಂಥ ಚೀಪ್ ಗಿಮಿಕ್ ಮಾಡಲು ಒಪ್ಪೋದಿಲ್ಲ. ಕೆಲವರ ಬಳಿ ಖರ್ಚು ಮಾಡಿ ಪಬ್ಲಿಸಿಟಿ ಮಾಡಲು ಕಾಸಿರೋದಿಲ್ಲ. ಈ ಕಾರಣದಿಂದ ಸಹಜವಾಗೇ ಒಂದು ವಾರದ ಮಟ್ಟಿಗಾದರೂ ಥೇಟರಲ್ಲಿ ಉಳಿಸಿಕೊಳ್ಳಲಾಗದೆ ಜೀವ ಬಿಡ್ತವೆ.

ಕಳೆದೊಂದು ತಿಂಗಳಲ್ಲಿ ಈ ಥರ ಪ್ರಾಣ ಚೆಲ್ಲಿದ, ಆಯಾಸಗೊಂಡು ತೆವಳುತ್ತಿರುವ ನಾಲ್ಕಾರು ಸಿನಿಮಾಗಳಿವೆ. ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ್ದ ಬ್ರ್ಯಾಟ್ ನಿಂದ ಶುರುವಾಗಿದ್ದು. ಮನರಂಜನೆ ನೀಡುವ ಎಲ್ಲ ಕ್ವಾಲಿಟಿಗಳಿದ್ದರೂ ಜನ ಇದನ್ನು ಕೈ ಬಿಟ್ಟರು. ಮೂರು ವಾರದ ಹಿಂದೆ ‘ಐ ಯಾಮ್ ಗಾಡ್’ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಬಹುಶಃ ತೆಲುಗು, ತಮಿಳಲ್ಲೇನಾದರೂ ಇಂಥದ್ದೊಂದು ಸಿನಿಮಾ ಬಂದಿದ್ದರೆ ಅದ್ಭುತ ಗೆಲುವು ಕಾಣುತ್ತಿತ್ತು. ಸಿನಿಮಾದಲ್ಲಿ ಏನಿದೆ, ಏನಿಲ್ಲ ಅಂತಾ ಹುಡುಕಬೇಕು. ಅಷ್ಟೊಂದು ಸರಕು ತುಂಬಿ ಚೆಂದನೆಯ ನಟನೆ ಮಾಡಿದ್ದ ಅದರ ಹೀರೋ ಕಂ ನಿರ್ದೇಶಕ ರವಿ ಗೌಡ. ಅದಾದ ನಂತರದಲ್ಲಿ ಬಂದ ‘ಲವ್ ಓಟಿಪಿ’ ಸಿನಿಮಾಗೆ ಉತ್ತಮ ಪ್ರಚಾರ ಕೂಡಾ ಮಾಡಲಾಗಿತ್ತು. ಈ ವರೆಗೆ ಯಾರೂ ಹೇಳದ ಎಳೆಯನ್ನು ಮಜವಾಗಿ ತೆರೆದಿಟ್ಟಿದ್ದರು ಅನೀಶ್. ಕನ್ನಡದಲ್ಲಿ ನಟನೆ, ಡ್ಯಾನ್ಸು, ಫೈಟು ಎಲ್ಲವನ್ನೂ ಕಲಿತು ಜೊತೆಗೆ ನಿರ್ದೇಶನವನ್ನೂ ಮಾಡುವ, ನೋಡೋಕೂ ಮುದ್ದಾಗಿರುವ ಕೆಲವೇ ಬೆರಳೆಣಿಕೆಯ ಪ್ರತಿಭಾವಂತ ಹೀರೋಗಳಲ್ಲಿ ಅನೀಶ್ ಪ್ರಮುಖ. ಏನಿದ್ದರೇನು ಬಂತು? ಸುಳ್ಳು ಹೇಳಿ ಜನರನ್ನು ಸೆಳೆಯುವ ಕಲೆ ಇವರಿಗೆ ಸಿದ್ದಿಸಿಲ್ಲವಲ್ಲಾ?. ಇದೇ ರೀತಿ ‘ಜೈ’, ‘ಫುಲ್ ಮೀಲ್ಸ್’, ‘ಕಂಗ್ರಾಜುಲೇಷನ್ ಬ್ರದರ್’ ಸಿನಿಮಾಗಳ ಬಗ್ಗೇನೂ ಒಳ್ಳೇ ಟಾಕ್ ಇದೆ. ನೋಡಿದವರು ಹೊಗಳುತ್ತಿದ್ದಾರೆ. ಸಿನಿಮಾ ತಂಡಗಳು ‘ಈ ಕ್ಷಣಕ್ಕಾದರೂ ಜನಕ್ಕೆ ಗೊತ್ತಾಗುವಂತಾಗಿ ಥೇಟರಿಗೆ ಬರಬಾರದಾ?’ ಅಂತಾ ಕಂಡ ಕಂಡ ದೇವರುಗಳಿಗೆ ಕೈ ಮುಗೀತಿದ್ದಾರೆ… ಆದರೆ ಪ್ರೇಕ್ಷಕ ದೇವರು ಮಾತ್ರ ಇವರ ಕಡೆ ಪೂರ್ಣ ದೃಷ್ಟಿ ಬೀರುತ್ತಿಲ್ಲ. ಯಾಕೆಂದರೆ, ಈ ಎಲ್ಲರಿಗೂ ಸಿನಿಮಾ ಮಾಡೋದು ಮಾತ್ರ ಗೊತ್ತೇ ವಿನಃ ಅನ್ಯ ಮಾರ್ಗಗಳು ತಿಳಿದಿಲ್ಲ….

ಇದೆಲ್ಲದರ ಜೊತೆಗೆ, ನಿಜಕ್ಕೂ ಹೊಸಬರ ಉತ್ತಮ ಸಿನಿಮಾಗಳಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಪ್ರದರ್ಶನಕ್ಕೆ ಸರಿಯಾದ ಥಿಯೇಟರ್‌ಗಳು ಸಿಗದಿರುವುದು ಮತ್ತೊಂದು ದೊಡ್ಡ ದುರಂತ. ಪರಭಾಷಾ ಸಿನಿಮಾಗಳ ಭರಾಟೆ ಒಂದು ಕಡೆಯಾದರೆ, ಇರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುವ ಶೋಗಳು ಕಡಿಮೆ. ಸಿನಿಮಾವೊಂದರ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ, ಜನ ಥಿಯೇಟರ್‌ಗೆ ಹೋಗುವಷ್ಟರಲ್ಲಿ ಪರಭಾಷೆಯ ಸ್ಟಾರ್‌ ಸಿನಿಮಾಗಳಿಗಾಗಿ ಆ ಚಿತ್ರವನ್ನು ಎತ್ತಂಗಡಿ ಮಾಡಿಬಿಡುವ ದುಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ದೊಡ್ಡ ಸ್ಟಾರ್ ನಟರು ಆ ಚಿತ್ರಗಳ ಬೆನ್ನಿಗೆ ನಿಂತು, ಸಿನಿಮಾಗೆ ಬೆಂಬಲ ಕೇಳಿದ ಉದಾಹರಣೆಗಳಿವೆ. ಆದರೆ, ಪ್ರತಿ ಒಳ್ಳೆಯ ಚಿತ್ರಕ್ಕೂ ಸ್ಟಾರ್‌ಗಳ ಬೆಂಬಲ ಸಿಗುತ್ತಲೇ ಇರಬೇಕು ಎಂದರೆ ಹೇಗೆ?

ವಾರಕ್ಕೇ ಅರ್ಧ ಮುಕ್ಕಾಲು ಡಜನ್‌ ಸಿನಿಮಾಗಳು ಬರುತ್ತವೆ; ಹೋಗುತ್ತವೆ… ಎಲ್ಲವನ್ನೂ ನೋಡಬೇಕು ಅಂತೇನೂ ಇಲ್ಲ. ಕಡೇ ಪಕ್ಷ ಗುಣಮಟ್ಟದ ಸಿನಿಮಾ ಬಂದಾಗಲೂ ಪ್ರೇಕ್ಷಕರು ತೆಪ್ಪಗಾಗಿಬಿಟ್ಟರೆ ಹೇಗೆ? ಹೊಸ ವಿಷಯ, ವಿಭಿನ್ನ ಕಥೆ, ಉತ್ತಮ ಕಂಟೆಂಟ್‌ ಇರುವ ಸಿನಿಮಾಗಳು ಬಂದಾಗ ಅದನ್ನು ಎರಡನೇ ದರ್ಜೆಯ ಸಿನಿಮಾ ಎಂಬಂತೆ ನೋಡಲಾಗುತ್ತಿದೆ. ಹೊಸಬರು ಕಷ್ಟಪಟ್ಟು ಸಿನಿಮಾ ಮಾಡಿದರೂ, ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎನ್ನುವುದು ಸಹ ಸತ್ಯ. ಹೊಸಬರಿಗೆ ಸೂಕ್ತ ಮಾರ್ಗದರ್ಶನ ಇಲ್ಲ, ಒಂದು ಉತ್ತಮ ಚಿತ್ರ ಬಂದಾಗ ಅದನ್ನು ಸಾರ್ವಜನಿಕರಿಗೆ ತಲುಪಿಸುವ ಒಂದು ವ್ಯವಸ್ಥೆ ಇಲ್ಲ. ಸುಳ್ಳು ಹೇಳಿ ಜನರನ್ನು ಸೆಳೆಯುವ ಕಲೆ ಇವರಿಗೆ ಸಿದ್ದಿಸಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಸಣ್ಣ ಬಜೆಟ್‌ನ, ಉತ್ತಮ ಕಂಟೆಂಟ್ ಇರುವ ಚಿತ್ರಗಳು ಬರೀ ಉತ್ತಮ ಟಾಕ್‌ಗೆ ಮಾತ್ರ ಸೀಮಿತವಾಗದೆ, ನಾಲ್ಕು ಜನ ನೋಡುವಂತೆ ಪ್ರಚಾರ ಪಡೆದು ಬದುಕಿ ಉಳಿಯಬೇಕಿದೆ. ಸಿನಿಮಾಗಳು ಬರೀ ತಯಾರಾದರೆ ಸಾಲದು, ಅದು ಪ್ರೇಕ್ಷಕರನ್ನು ತಲುಪಬೇಕು. ಆದರೆ, ಉತ್ತಮ ಸಿನಿಮಾಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಚಿತ್ರರಂಗ ಮತ್ತು ಪ್ರೇಕ್ಷಕ ಇಬ್ಬರೂ ಇನ್ನಷ್ಟು ಮುತುವರ್ಜಿ ವಹಿಸಬೇಕಿದೆ.

ಇನ್ನಷ್ಟು ಓದಿರಿ

Scroll to Top