ಮದುವೆಗೆ ಎಲ್ಲ ತಯಾರಿಯೂ ನಡೆದಿದೆ. ಅದಕ್ಕೆಂದೇ ಪರೀ ವೆಡ್ಡಿಂಗ್ ಶೂಟ್ ಕೂಡಾ ನಡೆಯುತ್ತಿದೆ. ಅಲ್ಲಿ ಹುಡುಗಿಯ ಕಣ್ಣೆಲ್ಲಾ ಹುಡುಗನ ಮೇಲಿರಬೇಕು. ಆದರೆ, ಫೋಟೋ ಶೂಟ್ ಮಾಡಲು ಬಂದ ಫೋಟೋಗ್ರಾಫರ್ ಮೇಲೆ ಹುಡುಗಿಗೆ ಲವ್ವಾಗಿಬಿಟ್ಟರೆ ಏನು ಗತಿ? ಇದೇ ಎಳೆಯನ್ನಿಟ್ಟುಕೊಂಡು ಕ್ಷಣ ಕ್ಷಣವೂ ಮಜಾ ಕೊಡುವ ಚಿತ್ರ ಫುಲ್ ಮೀಲ್ಸ್. ನೋಡುಗರ ಪಾಲಿಗೆ ಭರ್ಜರಿ ಭೋಜನವನ್ನೇ ಹಾಕಿಸಿದ್ದಾರೆ ನಿರ್ದೇಶಕ ವಿನಾಯಕ್.

ಮೇಲ್ನೋಟಕ್ಕೆ ತಮಾಷೆ, ಅಭಾಸಗಳಂತೆ ಕಂಡರೂ ಒಳಮನಸ್ಸಿನ ತುಮುಲಗಳನ್ನು, ಸಮಾಜವನ್ನು ದಿಕ್ಕರಿಸಿ ಭಾವನೆಗಳಿಗೆ ಬೆಲೆ ಕೊಡುವ ಸಂಬಂಧಗಳ ಕುರಿತಾತ ವಿಚಾರಗಳನ್ನು ಸೂಕ್ಷ್ಮವಾಗಿ ಬಿಚ್ಚಿಡಲಾಗಿದೆ.
ಕಥೆಯ ನಾಯಕ ಲಕ್ಕಿ (ಲಿಖಿತ್ ಶೆಟ್ಟಿ) ಬಾಡಿಗೆ ಕಟ್ಟಲೂ ಪರದಾಡುವ, ಸಣ್ಣದೊಂದು ಸ್ಟುಡಿಯೋ ನಡೆಸುವ ಮಹತ್ವಾಕಾಂಕ್ಷಿ ಯುವಕ. ಇವನ ಬದುಕಿಗೆ ಮೆಣಸಿನ ಘಾಟಿನಂತೆ ಕಾಡುತ್ತಾ, ಸ್ಟುಡಿಯೋ ಖಾಲಿ ಮಾಡಿಸಲು ಹವಣಿಸುವ ಮಾವ ಪುಲಿಕೇಶಿ (ರಂಗಾಯಣ ರಘು). ಈ ಎಲ್ಲಾ ಜಂಜಾಟಗಳ ನಡುವೆ ಲಕ್ಕಿಯ ಬಾಳಿಗೆ ತಂಪಾದ ಸಿಹಿ ತಿನಿಸಿನಂತೆ ಎಂಟ್ರಿ ಕೊಡುವವಳು ಮೇಕಪ್ ಆರ್ಟಿಸ್ಟ್ ಪ್ರೀತಿ (ತೇಜಸ್ವಿನಿ ಶರ್ಮಾ). ಇವಳು ಲಕ್ಕಿಯ ಕಷ್ಟಗಳಲ್ಲಿ ಭಾಗಿಯಾಗುತ್ತಾ, ನಗು ಹಂಚುತ್ತಾಳೆ. ಆದರೆ ಕಥೆಗೆ ನಿಜವಾದ ‘ಟ್ವಿಸ್ಟ್’ ಸಿಗುವುದೇ ಲಕ್ಕಿಗೆ ರಾಜೇಶ್ ನಟರಂಗ ಅವರ ತಂಗಿ ಪೂಜಾಳ (ಖುಷಿ ರವಿ) ಮದುವೆಯ ಫೋಟೋಗ್ರಫಿ ಕಾಂಟ್ರಾಕ್ಟ್ ಸಿಕ್ಕಾಗ!
ಆರಂಭದಲ್ಲಿ ಮೌನಿಯಾಗಿರುವ ಪೂಜಾ, ನಿಧಾನವಾಗಿ ಲಕ್ಕಿಯ ಕ್ಯಾಮೆರಾ ಕಣ್ಣಿಗೆ ಮತ್ತು ಅವನ ವ್ಯಕ್ತಿತ್ವಕ್ಕೆ ತೆರೆದುಕೊಳ್ಳುವ ಪರಿ ಸೊಗಸಾಗಿದೆ. ಮೌನವಾಗಿಯೇ ಕಣ್ಣುಗಳ ಮೂಲಕ ನಡೆಯುವ
ಸಂಭಾಷಣೆ, ನಾಚಿಕೆಯ ಪರದೆಯ ಹಿಂದಿನ ಆ ಮುಗುಳ್ನಗು ಹಾಗೂ ಮದುವೆಯ ಗದ್ದಲದ ನಡುವೆ ಹುಟ್ಟಿಕೊಳ್ಳುವ ಆ ಕೋಮಲ ಪ್ರೇಮಕಥೆ ಪ್ರೇಕ್ಷಕರ ಮನಸನ್ನು ಆವರಿಸುತ್ತದೆ. ಇಲ್ಲಿ ಪ್ರೀತಿಯ ತುಂಟಾಟಗಳು ಒಂದು ತ್ರಿಕೋನ ಪ್ರೇಮಕಥೆಯ ಛಾಯೆ ಇದೆ. ಅದು ನಗುವನ್ನೂ ಹುಟ್ಟಿಸುತ್ತದೆ.
ನಿರ್ದೇಶಕ ವಿನಾಯಕ್ ಇಲ್ಲಿ ಅಚ್ಚುಕಟ್ಟಾದ ಮೆನು ಕಾರ್ಡನ್ನೇ ಸಿದ್ದಪಡಿಸಿಟ್ಟಿದ್ದಾರೆ ಅನ್ನೋದು ಪಕ್ಕಾ. ಚಿತ್ರದ ಪ್ರಥಮಾರ್ಧವು ಲಘುವಾದ ಸಂಭಾಷಣೆ, ಕಚಗುಳಿ ಇಡುವ ಹಾಸ್ಯ ಮತ್ತು ರಂಜನೀಯ ದೃಶ್ಯಗಳಿಂದ ಕೂಡಿದ್ದರೆ, ದ್ವಿತೀಯಾರ್ಧವು ಊಟದ ನಂತರದ ವೀಳ್ಯದೆಲೆಯಂತೆ ಕಥೆಗೆ ಗಟ್ಟಿತನ ನೀಡುತ್ತದೆ. ಲಕ್ಕಿಯ ಕಳೆದುಹೋದ ಬಾಲ್ಯದ ನೆನಪುಗಳು, ತಂದೆಯಿಲ್ಲದ ಕೊರತೆ ಮತ್ತು ಕೇವಲ ಫೋಟೋಗ್ರಾಫರ್ ಆಗಲ್ಲದೆ, ಅದರಾಚೆಗೆ ಗುರುತಿಸಿಕೊಳ್ಳುವ ಅವನ ಹಂಬಲಗಳು ಚಿತ್ರಕ್ಕೆ ಭಾವನಾತ್ಮಕ ತೂಕವನ್ನು ತಂದುಕೊಟ್ಟಿವೆ. ಸಾಮಾನ್ಯವಾಗಿ ಲವ್ ಸ್ಟೋರಿಗಳಲ್ಲಿ ಬರೋ ಹಳೇ ದೃಶ್ಯಗಳು ಇಲ್ಲೂ ಇವೆ ಅನಿಸಿದ್ರೂ, ನಿರ್ದೇಶಕ ಅದನ್ನ ತೋರಿಸಿರೋ ರೀತಿ ಸೂಪರ್. ನಗು-ಅಳು ಎರಡನ್ನೂ ಹದವಾಗಿ ಮಿಕ್ಸ್ ಮಾಡಿ, ಎಲ್ಲೂ ಬೋರ್ ಆಗದ ಹಾಗೆ ಮ್ಯಾಜಿಕ್ ಮಾಡಿದ್ದಾರೆ. ಕಾಮಿಡಿ ಮತ್ತೆ ಎಮೋಷನ್ ಎರಡೂ ಸಹಜವಾಗಿ ಒಂದರಲ್ಲೊಂದು ಬೆರೆತುಹೋಗಿವೆ.
ನಟನೆಯ ವಿಚಾರಕ್ಕೆ ಬಂದರೆ, ಲಿಖಿತ್ ಶೆಟ್ಟಿ ತಮ್ಮ ಮೌನ ಮತ್ತು ಹಾವಭಾವಗಳಲ್ಲೇ ಮ್ಯಾಜಿಕ್ ಮಾಡಿದ್ದಾರೆ. ಅವರ ಅಸಹಾಯಕತೆ ಮತ್ತು ಆಸೆಗಳು ನೈಜವಾಗಿ ಮೂಡಿಬಂದಿವೆ. ಇತ್ತ ಖುಷಿ ರವಿ, ಸೌಮ್ಯತೆ ಮತ್ತು ಶಾಂತತೆಯ ಮೂಲಕವೇ ಪೂಜಾ ಪಾತ್ರಕ್ಕೆ ಜೀವ ತುಂಬಿದರೆ, ತೇಜಸ್ವಿನಿ ಶರ್ಮಾ ತಮ್ಮ ಬಬ್ಲಿ ನೇಚರ್ ಮೂಲಕ ಇಡೀ ಸಿನಿಮಾವನ್ನು ಲವಲವಿಕೆಯಿಂದ ಇರಿಸಿದ್ದಾರೆ. ಪೋಷಕ ಕಲಾವಿದರು ರುಚಿಕರವಾದ ಸಾಂಬಾರಿನಂತೆ ಕಥೆಗೆ ಸ್ವಾದ ನೀಡಿದ್ದಾರೆ. ರಂಗಾಯಣ ರಘು ಅವರ ವಿಶಿಷ್ಟ ಮ್ಯಾನರಿಸಂ, ರಾಜೇಶ್ ನಟರಂಗ ಅವರ ಪ್ರಬುದ್ಧ ನಟನೆ ಮತ್ತು ‘ಮಿರಿಂಡಾ’ ಆಗಿ ವಿಜಯ್ ಚೆಂಡೂರ್ ಅವರ ಚೇಷ್ಟೆಗಳು ಪ್ರೇಕ್ಷಕರನ್ನು ನಗಿಸುತ್ತಲೇ ಮದುವೆಯ ಗೊಂದಲವನ್ನು ಹೆಚ್ಚಿಸುತ್ತವೆ.
ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದೆ. ಮನೋಹರ್ ಜೋಶಿ ಅವರ ಕ್ಯಾಮೆರಾ ಕಣ್ಣು ಮದುವೆಯ ಸಂಭ್ರಮದ ಜೊತೆಗೆ ಸಿಟಿ ಲೈಫನ್ನು ಅತ್ಯಂತ ಆಪ್ತವಾಗಿ ತೆರೆದಿಟ್ಟಿದೆ. ಗುರುಕಿರಣ್ ಅವರ ಸಂಗೀತ ಊಟಕ್ಕೆ ಉಪ್ಪಿನಕಾಯಿಯಂತೆ ಅಚ್ಚುಕಟ್ಟಾಗಿ ಸಾಥ್ ನೀಡಿದೆ, ಎಲ್ಲಿಯೂ ಅಬ್ಬರವೆನಿಸುವುದಿಲ್ಲ. ದೀಪು ಎಸ್. ಕುಮಾರ್ ಅವರ ಸಂಕಲನ ಸಿನಿಮಾದ ವೇಗವನ್ನು ಕಾಯ್ದುಕೊಂಡಿದ್ದರೂ, ಮಧ್ಯದ ಕೆಲ ದೃಶ್ಯಗಳು ಕೊಂಚ ನಿಧಾನ ಎನಿಸುವುದು ಸುಳ್ಳಲ್ಲ.
ಇವೆಲ್ಲಾ ಏನೇ ಆಗಲಿ, ತಮಾಷೆಯ ಕಥಾವಸ್ತುವನ್ನು ತೆರೆಮೇಲೆ ತರೋದು ಸಲೀಸಲ್ಲ. ಇವತ್ತಿನ ಮಟ್ಟಿಗೆ ಟೀವಿಯಲ್ಲಿ ಬರೋ ಸ್ಟೇಜ್ ಶೋಗಳು, ಸೋಷಿಯಲ್ ಮೀಡಿಯಾದ ರೀಲ್ಸುಗಳ ನಡುವೆ, ನಗಿಸುವ ವಿಚಾರದಲ್ಲಿ ಫುಲ್ ಮೀಲ್ಸ್ ಗೆದ್ದಿದೆ. ಅದಕ್ಕೆ ಕಾರಣರಾದ ನಿರ್ದೇಶಕ ವಿನಾಯಕ್ ಅವರಿಗೊಂದು ಅಭಿನಂದನೆ…
ಒಟ್ಟಾರೆಯಾಗಿ ಹೇಳುವುದಾದರೆ, ‘ಫುಲ್ ಮೀಲ್ಸ್’ ಹೆಸರಿಗೆ ತಕ್ಕಂತೆ ಒಂದು ಪರಿಪೂರ್ಣ ರಸದೂಟ. ಇದರಲ್ಲಿ ಸಿಹಿ, ಹುಳಿ, ಖಾರ ಎಲ್ಲವೂ ಹದವಾಗಿ ಬೆರೆತಿದೆ. ಈ ಪ್ರಾಕಾರದ ಸಿನಿಮಾಗಳಲ್ಲಿ ಇದೊಂದು ವಿಶೇಷ ಸಿನೆಮಾ ಅನ್ನಿಸದೇ ಇರಬಹುದು, ಆದರೆ ಖಂಡಿತವಾಗಿಯೂ ಮನಕ್ಕೆ ತೃಪ್ತಿ ನೀಡುವ, ಕುಟುಂಬಸಮೇತ ಕೂತು ಒಮ್ಮೆ ಸವಿಯಲೇಬೇಕಾದ ಮನರಂಜನೆಯ ಔತಣಕೂಟವಂತೂ ಹೌದು.











































