ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ:ತಾಂತ್ರಿಕ ಶ್ರೀಮಂತಿಕೆ ಮತ್ತು ಚಿತ್ರಕಥೆಯ ಏರಿಳಿತಗಳ ನಡುವಿನ ಜೂಜಾಟ

Picture of Cinibuzz

Cinibuzz

Bureau Report

  • ಶಿವು ಅರಿಸಿನಗೆರೆ
    ಈ ವಾರ ತೆರೆ ಕಂಡ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ಬಗ್ಗೆ ತುಂಬಾನೇ ನಿರೀಕ್ಷೆಗಳಿದ್ದವು. ಹೈಸ್ಟ್ ಡ್ರಾಮಾ ಅಥವಾ ದರೋಡೆಯ ಕಥೆ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ರೋಚಕ ತಿರುವುಗಳು ಮತ್ತು ಉಸಿರು ಬಿಗಿಹಿಡಿಯುವ ಸನ್ನಿವೇಶಗಳು. ಈ ಚಿತ್ರದ ಮೂಲಕ ನಿರ್ದೇಶಕ ಅಭಿಷೇಕ್ ಮಂಜುನಾಥ್ ಅಂತಹದ್ದೇ ಪ್ರಯತ್ನ ಮಾಡಿದ್ದಾರೆ. ಇದು ಪಕ್ಕಾ ಆಕ್ಷನ್ ಸಿನಿಮಾವಲ್ಲ, ಬದಲಾಗಿ ಇದೊಂದು ಹೈಸ್ಟ್ ಕಾಮಿಡಿ ಮತ್ತು ಡ್ರಾಮಾ ಮಿಶ್ರಿತ ಪ್ರಯೋಗ. ಚಿತ್ರದ ಅತಿದೊಡ್ಡ ಶಕ್ತಿ ಎಂದರೆ ನಾಯಕ ದೀಕ್ಷಿತ್ ಶೆಟ್ಟಿ. ಗಂಭೀರ ದೃಶ್ಯಗಳು ಮತ್ತು ಸಂದರ್ಭಾನುಸಾರ ಬರುವ ಹಾಸ್ಯವನ್ನು ಅವರು ನಿಭಾಯಿಸಿರುವ ರೀತಿ ಹಾಗೂ ಅವರ ಸ್ಕ್ರೀನ್ ಪ್ರೆಸೆನ್ಸ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗುತ್ತದೆ.

  • ಚಿತ್ರದ ತಾಂತ್ರಿಕ ವರ್ಗದ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಇಡೀ ಸಿನಿಮಾ ಬಹುತೇಕ ಒಂದು ಬ್ಯಾಂಕ್ ಕಟ್ಟಡದೊಳಗೆ ನಡೆಯುವುದರಿಂದ ದೃಶ್ಯಗಳು ಏಕತಾನತೆಯಿಂದ ಕೂಡಿ ಪ್ರೇಕ್ಷಕರಿಗೆ ಕಣ್ಣಿಗೆ ಆಯಾಸವಾಗುವ ಸಾಧ್ಯತೆ ಹೆಚ್ಚಿತ್ತು. ಆದರೆ, ಛಾಯಾಗ್ರಹಕ ಅಭಿಷೇಕ್ ಕಾಸರಗೋಡು ಅವರು ತಮ್ಮ ಕ್ಯಾಮೆರಾ ಕೈಚಳಕದಿಂದ ಆ ಸೀಮಿತ ಜಾಗವನ್ನೂ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಲೈಟಿಂಗ್ ಮತ್ತು ಫ್ರೇಮಿಂಗ್ ಮೂಲಕ ದೃಶ್ಯಗಳಿಗೆ ಜೀವ ತುಂಬಿದ್ದಾರೆ. ಇದಕ್ಕೆ ಪೂರಕವಾಗಿ ರಾಘು ಮೈಸೂರು ಕಲಾನಿರ್ದೇಶನ, ಜುಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಕೆಲಸ ಮಾಡಿದೆ. ಸನ್ನಿವೇಶದ ಗಂಭೀರತೆಯನ್ನು ಹೆಚ್ಚಿಸುವಲ್ಲಿ ಮತ್ತು ಥ್ರಿಲ್ಲರ್ ಮೂಡ್ ಸೃಷ್ಟಿಸುವಲ್ಲಿ ಅವರ ಬಿಜಿಎಂ ಪ್ರಮುಖ ಪಾತ್ರ ವಹಿಸಿದೆ.

  • ಆದರೆ, ಈ ತಾಂತ್ರಿಕ ಅದ್ದೂರಿತನಕ್ಕೆ ಸರಿಸಮನಾಗಿ ಚಿತ್ರಕಥೆ ಸಾಥ್ ನೀಡಿಲ್ಲ. ಪ್ರಥಮಾರ್ಧದಲ್ಲಿ ನಿರ್ದೇಶಕರು ಕಾಯ್ದುಕೊಂಡ ಹಿಡಿತ ದ್ವಿತೀಯಾರ್ಧದಲ್ಲಿ ಸಡಿಲವಾಗುತ್ತದೆ. ಕಥೆಯ ವೇಗ ಅಲ್ಲಲ್ಲಿ ಕುಂಟುತ್ತದೆ ಮತ್ತು ಕೆಲವು ದೃಶ್ಯಗಳು ರಿಪೀಟ್ ಆದ ಅನುಭವ ನೀಡುತ್ತವೆ. ಹಾಸ್ಯ ಮತ್ತು ಗಂಭೀರ ಸಂದೇಶಗಳೆರಡನ್ನೂ ಒಟ್ಟಿಗೆ ಸೇರಿಸಲು ಹೋಗಿ, ಕೆಲವು ಕಡೆಗಳಲ್ಲಿ ಗೊಂದಲ ಮೂಡಿಸಿದ್ದಾರೆ. ಲಾಜಿಕ್ಗಳನ್ನು ಬದಿಗಿಟ್ಟು ನೋಡಿದರೂ, ಕ್ಲೈಮ್ಯಾಕ್ಸ್ ತಲುಪುವ ಹಾದಿ ಇನ್ನಷ್ಟು ಬಿಗಿಯಾಗಿರಬೇಕಿತ್ತು ಮತ್ತು ಪಾತ್ರಗಳ ಬರವಣಿಗೆಯಲ್ಲಿ ಇನ್ನೂ ಹೆಚ್ಚಿನ ಆಳದ ಅಗತ್ಯವಿತ್ತು ಎಂಬ ಭಾವನೆ ಮೂಡುವುದು ಸುಳ್ಳಲ್ಲ. ಕೆಲವು ಪಾತ್ರಗಳು ಕಥೆಗೆ ಪೂರಕವಾಗಿರುವುದಕ್ಕಿಂತ ಹೆಚ್ಚಾಗಿ, ಕೇವಲ ರನ್-ಟೈಮ್ ತುಂಬಲು ಬಳಕೆಯಾದಂತಿವೆ.

  • ಒಟ್ಟಾರೆಯಾಗಿ ಹೇಳುವುದಾದರೆ, ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ಯಲ್ಲಿ ಜಮಾ ಮತ್ತು ಖರ್ಚು ಎರಡೂ ಸಮನಾಗಿದೆ. ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಮತ್ತು ದೀಕ್ಷಿತ್ ಶೆಟ್ಟಿ ಅವರ ನಟನೆ ಚಿತ್ರದ ಪ್ಲಸ್ ಪಾಯಿಂಟ್. ಇನ್ನಷ್ಟು ಎಫರ್ಟ್ ಹಾಕಿದ್ದಿದ್ದರೆ ಕ್ಲಾಸಿಕ್ ಲೆವೆಲ್ಲಿಗೆ ತೆಗೆದುಕೊಂಡು ಹೋಗಬಹುದಾದ ಎಲ್ಲ ಸಾಧ್ಯತೆಯೂ ಭಾಗ್ಯಲಕ್ಷ್ಮಿಗಿತ್ತು!

ಇನ್ನಷ್ಟು ಓದಿರಿ

Scroll to Top