ಕನ್ನಡ ಚಿತ್ರರಂಗದ ಮಟ್ಟಿಗೆ ತ್ರಿಕೋನ ಪ್ರೇಮಕಥೆಗಳಿಗೇನೂ ಬರವಿಲ್ಲ. ಇಬ್ಬರು ಗೆಳೆಯರು ಒಬ್ಬಳನ್ನೇ ಪ್ರೀತಿಸುವುದು ಅಥವಾ ಇಬ್ಬರು ಹುಡುಗೀರು ಒಬ್ಬನಿಗಾಗಿ ಬಡಿದಾಡಿಕೊಳ್ಳುವ ‘ಫಾರ್ಮುಲಾ’ ಸಿನಿಮಾಗಳು ಲಾಟು ಲಾಟು ಬಂದಿವೆ. ಆದರೆ, ಈ ಹಳೇ ಜಾಡನ್ನು ಅಳಿಸಿ, ‘ನಮ್ ಲೈಫು, ನಮ್ ರೂಲ್ಸ್’ ಎನ್ನುವ ಜೆನ್-ಝೀ ಜಮಾನದ ಹೊಸದೊಂದು ಅಚ್ಚರಿಯನ್ನು ಹೊತ್ತು ತಂದಿದೆ ನಿರ್ದೇಶಕ ಪ್ರತಾಪ್ ಗಂಧರ್ವ ಅವರ ‘ಕಂಗ್ರಾಜುಲೇಷನ್ ಬ್ರದರ್’. ಇದು ಬರಿಯ ತ್ರಿಕೋನ ಪ್ರೇಮಕಥೆಯಲ್ಲ; ಬದಲಿಗೆ ಬೈ ಒನ್ ಗೆಟ್ ಒನ್ ಥರದ ವಿಚಾರ. ಒಬ್ಬಳನ್ನು ಪ್ರೀತಿಸಿದರೆ ಇನ್ನೊಬ್ಬಳನ್ನು ಅನಿವಾರ್ಯವಾಗಿ ಮದುವೆಯಾಗಬೇಕಾದ ವಿಚಿತ್ರ. ಆದರೆ, ಅಷ್ಟೇ ಕುತೂಹಲಕಾರಿ ಸನ್ನಿವೇಶದ ಕಥೆ!

ಮೊದಲ ನೋಟಕ್ಕೆ ಇದೊಂದು ಅಪ್ಪಟ ಬ್ಯಾಚುಲರ್ ಹುಡುಗನ ಫ್ಯಾಂಟಸಿ ಲೋಕದಂತೆ ಕಾಣುತ್ತದೆ. ನಾಯಕ ರಕ್ಷಿತ್ (ರಕ್ಷಿತ್ ನಾಗ್) ಲೈಫು ಪೂರ್ತಿ ಕಲರ್ಫುಲ್. ಪ್ರಾಣ ಕೊಡುವ ದೋಸ್ತ್ಗಳು, ಕಿಕ್ ಏರಿಸುವ ‘ಓಲ್ಡ್ ಮಾಂಕ್’ ಪಾರ್ಟಿಗಳು, ಮತ್ತು ಆಫೀಸಿನಲ್ಲೊಂದು ಕ್ಯೂಟ್ ಲವ್ ಸ್ಟೋರಿ. ಆದರೆ ಈ ಸುಂದರ ಬದುಕಿಗೆ ಅಸಲಿ ಟ್ವಿಸ್ಟ್ ಸಿಗುವುದೇ ನಾಯಕಿ ಸಿರಿ (ಅನುಷಾ) ತನ್ನ ಪ್ರೇಮ ನಿವೇದನೆಯ ಜೊತೆಗೆ ಒಂದು ಬಾಂಬ್ ಸಿಡಿಸಿದಾಗ! “ನನ್ನನ್ನು ಮದುವೆಯಾಗಬೇಕೆಂದರೆ, ನನ್ನ ಪ್ರಾಣಸ್ನೇಹಿತೆ ತನುವನ್ನೂ ನೀನು ಮದುವೆಯಾಗಬೇಕು” ಎಂಬ ಆಕೆಯ ಷರತ್ತು ಕೇಳಿ ನಾಯಕನಿಗೆ ಹಗಲಲ್ಲೇ ನಕ್ಷತ್ರ ಕಾಣಿಸಿದಂತಾಗುತ್ತದೆ. ಬಾಲ್ಯದಿಂದಲೂ ಒಂದಾಗಿ ಬೆಳೆದ ಈ ಇಬ್ಬರು ಗೆಳತಿಯರಿಗೆ ಮದುವೆಯ ನಂತರ ಎಲ್ಲಿ ದೂರವಾಗುತ್ತೇವೆಯೋ ಎಂಬ ಭಯ. ಅದಕ್ಕೆ ಪರಿಹಾರವಾಗಿ ಇಬ್ಬರೂ ಒಬ್ಬನನ್ನೇ ವರಿಸುವ ನಿರ್ಧಾರ! ಮೇಲ್ನೋಟಕ್ಕೆ ಇದೊಂದು ಪುರುಷರ ಗುಪ್ತ ಆಸೆಯಂತೆ ಅಥವಾ ಅತಿರೇಕದ ಕಲ್ಪನೆಯಂತೆ ಕಂಡರೂ, ನಿರ್ದೇಶಕರು ಈ ಸಂಕೀರ್ಣ ಎಳೆಯನ್ನು ನಿಭಾಯಿಸಿರುವ ರೀತಿ ಪ್ರೇಕ್ಷಕರನ್ನು ಸೆಳೆಯುತ್ತದೆ.
ಚಿತ್ರದ ಮೊದಲಾರ್ಧ ನಗು, ತಮಾಷೆ, ಚೇತನ್ ದುರ್ಗ ಅವರ ಕಾಮಿಡಿ ಪಂಚ್ಗಳಲ್ಲಿ ಸರಾಗವಾಗಿ ಸಾಗುತ್ತದೆ. ಅನುಷಾ ‘ರೌಡಿ ಬೇಬಿ’ಯಾಗಿ ಪಡ್ಡೆಗಳ ನಿದ್ದೆ ಕೆಡಿಸಿದರೆ, ಸಂಜನಾ ದಾಸ್ ಮುದ್ದು ಮುಖದ ಮೂಲಕ ಮನಸೆಳೆಯುತ್ತಾರೆ. ಆದರೆ ಚಿತ್ರದ ನಿಜವಾದ ‘ಜೀವಾಳ’ ಅಡಗಿರುವುದೇ ದ್ವಿತೀಯಾರ್ಧದ ಭಾವನಾತ್ಮಕ ತಿರುವುಗಳಲ್ಲಿ. ಆರಂಭದಲ್ಲಿ ಈ ಇಬ್ಬರ ಸ್ನೇಹವನ್ನು ಮುರಿದು, ಸಿರಿಯನ್ನು ಮಾತ್ರ ದಕ್ಕಿಸಿಕೊಳ್ಳಲು ಹವಣಿಸುವ ನಾಯಕ, ನಿಧಾನವಾಗಿ ಆ ಹುಡುಗಿಯರ ನಡುವಿನ ಪರಿಶುದ್ಧವಾದ ಒಡನಾಟವನ್ನು ಅರ್ಥಮಾಡಿಕೊಳ್ಳುತ್ತಾನೆ. ಅಲ್ಲಿ ಕಾಮವಿಲ್ಲ, ಕೇವಲ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ನೇಹದ ತವಕವಿದೆ ಎಂಬುದು ಅರ್ಥವಾದಾಗ ಪ್ರೇಕ್ಷಕರಿಗೂ ಗಂಟಲು ಭಾರವಾಗುತ್ತದೆ. ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುವಷ್ಟರಲ್ಲಿ ಇದೊಂದು ಮೋಜಿನ ಸಿನಿಮಾ ಎನ್ನುವುದಕ್ಕಿಂತ, ತ್ಯಾಗ ಮತ್ತು ಪ್ರೀತಿಯ ಮೃದುವಾದ ಕಥೆಯಾಗಿ ರೂಪಾಂತರಗೊಳ್ಳುವುದೇ ಚಿತ್ರದ ಅಸಲೀ ಗೆಲುವು.
ವಿಶೇಷವಾಗಿ ಇಲ್ಲಿ ಪೋಷಕರ ಪಾತ್ರಗಳ ಬಗ್ಗೆ ಹೇಳಲೇಬೇಕು. ಸಾಮಾನ್ಯವಾಗಿ ಇಂತಹ ‘ಬೋಲ್ಡ್’ ವಿಷಯಗಳನ್ನು ಕೇಳಿದಾಗ ಸಿನಿಮಾಗಳಲ್ಲಿ ಅಪ್ಪಂದಿರು ಕತ್ತಿ ಹಿಡಿಯುತ್ತಾರೆ ಅಥವಾ ಅಮ್ಮಂದಿರು ಕಣ್ಣೀರು ಸುರಿಸುತ್ತಾರೆ. ಆದರೆ ಇಲ್ಲಿ ಶಶಿಕುಮಾರ್, ರವಿ ಭಟ್ ಮತ್ತು ಸ್ವಾತಿ ಅವರ ಪಾತ್ರಗಳು ನಡೆದುಕೊಳ್ಳುವ ರೀತಿ ಚಿತ್ರಕ್ಕೆ ಗಂಭೀರತೆಯನ್ನು ತಂದುಕೊಟ್ಟಿದೆ. ಮಗನಿಗೆ ತಿಳಿಹೇಳುವ ಶಶಿಕುಮಾರ್ ಆಗಲಿ, ಮಗಳ ನಿರ್ಧಾರದ ಪರಿಣಾಮಗಳನ್ನು ಕೋಪವಿಲ್ಲದೆ ವಿವರಿಸುವ ರವಿ ಭಟ್ ಆಗಲಿ, ಇಡೀ ಸನ್ನಿವೇಶವನ್ನು ಪ್ರಬುದ್ಧವಾಗಿ ನಿಭಾಯಿಸಿದ್ದಾರೆ. ಹೀಗಾಗಿಯೇ ಇದೊಂದು ಯೂಥ್ ಸಬ್ಜೆಕ್ಟಾದರೂ, ಕುಟುಂಬ ಸಮೇತ ಮುಜುಗರವಿಲ್ಲದೆ ನೋಡುವ ಫೀಲ್ ಕೊಡುತ್ತದೆ. ಒಟ್ಟಾರೆಯಾಗಿ, ‘ಕಂಗ್ರಾಚುಲೇಷನ್ ಬ್ರದರ್’ ಕೇವಲ ಹುಡುಗಾಟಿಕೆಯ ಚಿತ್ರವಲ್ಲ. ಕೆಲವು ಏರಿಳಿತಗಳಿದ್ದರೂ, ಸ್ನೇಹ ಮತ್ತು ಸಂಬಂಧಗಳ ಮೌಲ್ಯವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನವಿದು.











































