ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ. ಇದನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವಂತಾಗಿದೆ. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವನ್ನು ಬಿಟ್ಟರೆ, ಹಾವನ್ನು ನುಂಗಲು ಹದ್ದು ಬಂದಂತೆ; ಹೊಂಚು ಹಾಕಿ ಸಂಚು ಮಾಡಿ ಗಂಟು ಹೊಡೆಯಲು, ಆಸ್ತಿ ನುಂಗಲು ಮತ್ತೊಬ್ಬರು ಹುಟ್ಟಿಕೊಂಡಿರುತ್ತಾರೆ. ನಂಬಿಕೆ ಮತ್ತು ಮೂಢನಂಬಿಕೆ ಎರಡನ್ನೂ ತಕ್ಕಡಿಗೆ ಹಾಕಿ ತೂಕ ನೋಡಿರುವ ಚಿತ್ರ ʻಆಡೇ ನಮ್ ಗಾಡ್ʼ.
ನಾಲ್ಕು ಜನ ಯುವಕರ ತಂಡ. ಆ ಗುಂಪಿಗೆ ಮೇಕೆಯೊಂದು ಹೊಸ ಸದಸ್ಯನಂತೆ ಸೇರ್ಪಡೆಗೊಳ್ಳುತ್ತೆ. ಆ ಆಡನ್ನೇ ಬಂಡವಾಳ ಮಾಡಿಕೊಂಡು, ಅದಕ್ಕೊಂದು ವಾಸಸ್ಥಾನ ಕಟ್ಟಿಸಿ, ದೇವಾಲಯದ ರೂಪ ಕೊಡುತ್ತಾರೆ. ನಮ್ಮ ಜನ ಗೊತ್ತಲ್ಲಾ? ಹೇಳಿ ಕೇಳಿ ಕಲ್ಲಿಗೂ ಜೀವ ಕೊಡುವವರು. ನೊಣ, ಸೊಳ್ಳೆಗೊಂದು ದೇವಸ್ಥಾನ ಕಟ್ಟಿಸಿದರೆ, ಅಲ್ಲಿಗೂ ಬಂದು ಕುಂಕುಮವಿಟ್ಟು, ಈಡುಗಾಯಿ ಹೊಡೆದು ಕೈಮುಗಿದು, ಅಡ್ಡಬೀದ್ದು, ಹರಕೆ ತೀರಿಸುತ್ತಾರೆ. ಇಲ್ಲಿ ಆಡು ಕೂಡಾ ಹಲವು ಪವಾಡಗಳನ್ನು ಸೃಷ್ಟಿಸುತ್ತದೆ. ಟೀವಿ ಮತ್ತು ಸೋಷಿಯಲ್ ಮೀಡಿಯಾಗಳು ಅದಕ್ಕೆ ಪ್ರಚಾರವನ್ನೂ ಕೊಡಮಾಡುತ್ತವೆ. ಆಡುಸ್ವಾಮಿಯ ದೇವಾಲಯದ ಸುತ್ತ ಹಲವು ಬಗೆಯ ವ್ಯಾಪಾರ ವಹಿವಾಟುಗಳೂ ನಡೆಯುತ್ತವೆ.
ಇಂಥದ್ದೊಂದು ಪುಣ್ಯ ಕ್ಷೇತ್ರಕ್ಕೆ ಕಮರ್ಷಿಯಲ್ ವ್ಯಾಲ್ಯೂ ತಂದುಕೊಟ್ಟು ಗಳಿಕೆಯನ್ನು ಹೆಚ್ಚಿಸಲು ಬ್ರಾಂಡ್ ಅಂಬಾಸಿಡರೊಬ್ಬ ಬೇಕಲ್ಲಾ? ಹಾಗೆ ಆಡುಸ್ವಾಮಿಯ ಜಾಗಕ್ಕೆ ಬಂದು ಕೂರುವ ಹೈ ಪ್ರೊಫೈಲ್ ಸ್ವಾಮಿಯೊಬ್ಬ ಸೃಷ್ಟಿಸುವ ಬಿಕ್ಕಟ್ಟುಗಳೇನು ಅನ್ನೋದು ʻಆಡೇ ನಮ್ ಗಾಡ್ʼ ಚಿತ್ರದ ಅಸಲೀ ವಿಚಾರ. ಇದರ ನಡುವೆ ನಾಲ್ಕು ಜನ ಹುಡುಗರ ಬದುಕು ಏನಾಗುತ್ತದೆ? ನಡುವೆ ಬಂದು ಸೇರಿಕೊಳ್ಳುವ ಹುಡುಗಿ ಯಾರು? ಕಟ್ಟಕಡೆಯದಾಗಿ ಆಡು ಏನಾಗುತ್ತದೆ? ಇವೆಲ್ಲಾ ಸಿನಿಮಾದ ಒಳಗಿರುವ ಅಂಶಗಳು.
ರಾಮರಾಮರೇ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ ಮತ್ತು ಅನೂಪ್ ಶೂನ್ಯ ನಾಲ್ಕೂ ಜನ ಹುಡುಗರಲ್ಲಿ ಒಬ್ಬೊಬ್ಬರೂ ಒಂದೊಂದು ಬಗೆಯಲ್ಲಿ ನಟಿಸಿ ಇಷ್ಟವಾಗುತ್ತಾರೆ. ಇವರ ಜೊತೆಯಾಗುವ ಹುಡುಗಿ ಸಾರಿಕಾ ರಾವ್ ಕೂಡಾ ಅಷ್ಟೇ ಪರಿಣಾಮಕಾರಿ ಮತ್ತು ಬೋಲ್ಡ್ ಆಗಿ ನಟಿಸಿದ್ದಾರೆ. ಬಿ. ಸುರೇಶ ಅವರು ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ್ಮನೆ ಮೂರ್ತಿ ಅವರ ಕಲಾನಿರ್ದೇಶನ ಚಿತ್ರದ ಅಂದವನ್ನು ಹೆಚ್ಚಿಸಿದೆ. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣದಲ್ಲಿ ಯಾವ ಹೊಸತನವೂ ಇಲ್ಲ. ಅವರ ಪುರಾತನ ಶೈಲಿಯ ಲೈಟಿಂಗ್, ಫ್ರೇ ಮುಗಳು ಅಂಥಾ ಮಜಾ ಕೊಡುವುದಿಲ್ಲ. ಎರಡು ಹಾಡುಗಳೂ ಕೇಳಲು ಚೆನ್ನಾಗಿವೆ.
ಪಿ.ಎಚ್. ವಿಶ್ವನಾಥ್ ಕನ್ನಡ ಚಿತ್ರರಂಗದ ಮಟ್ಟಿಗೆ ಮೇರು ನಿರ್ದೇಶಕ. ಸರಿ ಸುಮಾರು ಕಾಲು ಶತಮಾನಗಳ ಹಿಂದೆ ಅವರೇ ರೂಪಿಸಿದ್ದ ಪಂಚಮವೇದ, ಶ್ರೀಗಂಧ, ಅರಗಿಣಿ, ಮುಂಜಾನೆ ಮಂಜು ಮೊದಲಾದ ಸಿನಿಮಾಗಳು ಕನ್ನಡದ ಕ್ಲಾಸಿಕ್ಗಳು. ಹಾಗೆ ನೋಡಿದರೆ ಆಡೇ ನಮ್ ಗಾಡ್ ಅವರ ಜಾನರಿನ ಸಿನಿಮಾವಂತೂ ಅಲ್ಲ. ಹಲವು ವರ್ಷಗಳ ಅಂತರದಲ್ಲಿ ಮರುಪ್ರವೇಶಿಸಿರುವ ವಿಶ್ವನಾಥ್ ಅವರು ಈ ಸಲ ಹೊಸದೆನ್ನಿಸುವ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗಂಭೀರವಾದ ವಿಚಾರಕ್ಕೆ ಹಾಸ್ಯವನ್ನು ಬೆರೆಸಿ ಹೇಳಿದ್ದಾರೆ. ಎಲ್ಲೂ ಬೇಸರ ಹುಟ್ಟಿಸದಂತೆ ಮೂಡಿಬಂದಿರುವ ಆಡೇ ನಮ್ ಗಾಡ್ ಚಿತ್ರವನ್ನು ಒಂದು ಸಲ ನೋಡಲು ಯಾವ ತಕರಾರೂ ಇಲ್ಲ.
No Comment! Be the first one.