ರಂಜಿತ್ ಕುಮಾರ್ ಗೌಡ ನಿರ್ದೇಶನದ ಆಪಲ್ ಕೇಕ್ ಚಿತ್ರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಬದುಕಿಗೆ ಹತ್ತಿರವಾದ ಸಂವೇದನಾಶೀಲ ಕಥೆಯೊಂದನ್ನು ಹೊಂದಿರೋ ಈ ಚಿತ್ರ ನಾಲಕ್ಕು ವಿಭಿನ್ನ ಪಾತ್ರಗಳ ಸುತ್ತಾ ಸುತ್ತುವ ಕಥೆ ಹೊಂದಿದೆ. ಅದರಲ್ಲೊಂದು ಪ್ರಧಾನ ಪಾತ್ರ ನಿರ್ವಹಿಸಿರುವಾತ ರಂಗಸ್ವಾಮಿ ಜಾವಗಲ್. ಈತನ ಕಥೆಯೇ ಮತ್ತೊಂದು ಸಿನಿಮಾಗೆ ಕಥೆಯಾಗುವಂತಿದೆ!
ಈ ಹುಡುಗ ರಂಗಸ್ವಾಮಿ ಹಾಸನ ಜಿಲ್ಲೆಯ ಪುಟ್ಟ ಗ್ರಾಮದವನು. ಊರಲ್ಲಿ ಸಣ್ಣ ವಯಸ್ಸಿನಲ್ಲಿಯೇ ಏಕಪಾತ್ರಾಭಿನಯದ ಮೂಲಕ ಎಲ್ಲರಿಂದಲೂ ಭೇಷ್ ಅನ್ನಿಸಿಕೊಂಡಿದ್ದ ಈತನಿಗೆ ನಟನಾಗಬೇಕೆಂಬ ಆಸೆ. ಆದರೆ ಮನೆಯ ಕಡೆ ಅದಕ್ಕೆ ತದ್ವಿರುದ್ಧವಾದ ಭೀಕರ ಬಡತನ. ಆದರೆ ಹೇಗಾದರೂ ಮಾಡಿ ನಟನಾಗಲೇ ಬೇಕೆಂಬ ಕನಸು ಹೊತ್ತ ರಂಗಸ್ವಾಮಿ ಅವಕಾಶಕ್ಕಾಗಿ ಅರಸುತ್ತಾ ಬೆಂಗಳೂರು ತಲುಪಿಕೊಂಡಿದ್ದು ಈಗ್ಗೆ ಹದಿನೈದು ವರ್ಷಗಳ ಹಿಂದೆ.
ಹಾಗೆ ಬಂದು ನಿಂತಾಗ ಇಷ್ಟು ವಿಸ್ತಾರವಾದ ಬೆಂಗಳೂರಿನಲ್ಲಿ ಯಾರೊಬ್ಬರ ಪರಿಚಯವೂ ರಂಗಸ್ವಾಮಿಗಿರಲಿಲ್ಲ. ಆದರೆ ಹೊಟ್ಟೆ ಸಂಕಟ ಸುಮ್ಮನೆ ಬಿಡಬೇಕಲ್ಲಾ? ಹೇಗೋ ಅವರಿವರ ಬಳಿ ಗೋಳಾಡಿ ಹೊಟೆಲೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ ರಂಗಸ್ವಾಮಿ ಒಂದಷ್ಟು ಕಾಲ ಅದೇ ಕೆಲಸ ಮಾಡಿದ್ದ. ಬಳಿಕ ಮತ್ತೆ ನಟನೆಯ ಅವಕಾಶದ ಬೇಟೆಗಿಳಿದೇಟಿಗೆ ಇದ್ದ ಹೊಟೇಲಿನ ಕೆಲಸವನ್ನೂ ಕಳೆದುಕೊಂಡು ಬೀದಿಗೆ ಬರುವಂತಾಗಿತ್ತು.
ಆದರೆ ರಂಗಸ್ವಾಮಿಯ ಪಾಲಿಗೆ ನಟನೆಯ ಹಂಬಲ ಶೋಕಿಯಾಗಿರಲಿಲ್ಲ. ಅದಾತನ ಧ್ಯಾನವಾಗಿತ್ತು. ಇಂಥಾ ಪಡಿಪಾಟಲುಗಳ ನಡುವೆಯೂ ಕೂಡಿಟ್ಟ ಒಂದಷ್ಟು ಹಣ ಮತ್ತು ಒಳ್ಳೆ ಮನಸಿನ ಒಂದಷ್ಟು ಸ್ನೇಹಿತರೇ ಈತನಿಗಿದ್ದ ಏಕೈಕ ಆಸ್ತಿ. ಹಾಗೂ ಹೀಗೂ ಸ್ನೇಹಿತರ ಸಹಾಯದಿಂದಲೇ ಆಟೋ ಒಂದನ್ನು ತೆಗೆದುಕೊಂಡು ಅದನ್ನೋಡಿಸಿ ಬದುಕಲಾರಂಭಿಸಿದ ರಂಗಸ್ವಾಮಿ ಆ ಹೊತ್ತಿನಲ್ಲಿಯೂ ನಟನಾಗೋ ಕನಸನ್ನು ಕೈ ಬಿಟ್ಟಿರಲಿಲ್ಲ. ಈತನಿಗಿದ್ದ ಅಗಾಧವಾದ ಕಲಾಸಕ್ತಿ ಗಮನಿಸಿದ ಸ್ನೇಹಿತರೇ ಸಹಾಯ ಮಾಡಿದ್ದರಿಂದ ಕಡೆಗೂ ಇಫ್ಟಾ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದ ರಂಗಸ್ವಾಮಿ ಆ ಬಳಿಕ ಹಲವಾರು ನಾಟಕಗಳಲ್ಲಿ ನಟಿಸಿದ್ದ. ಒಂದು ಕಿರುಚಿತ್ರದಲ್ಲಿಯೂ ಪಾತ್ರ ನಿರ್ವಹಣೆ ಮಾಡಿದ್ದ.
ಕಡೆಗೆ ಆಟೋ ಎಂಬ ಚಿತ್ರದಲ್ಲಿ ಅಭಿನಯಿಸೋ ಅವಕಾಶ ಸಿಗುವ ಮೂಲಕ ರಂಗಸ್ವಾಮಿ ಗುರಿಯತ್ತ ಮೊದಲ ಹೆಜ್ಜೆಯಿಟ್ಟಿದ್ದ. ಆ ಬಳಿಕ ಮದರಂಗಿ ಚಿತ್ರದಲ್ಲಿ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ರಂಥಾ ನಟರ ಜೊತೆಗೂ ಅಭಿನಯಿಸಿದ್ದ. ಆದರೂ ಅದೇಕೋ ಬದುಕು ಮಾತ್ರ ಬದಲಾಗಲೇ ಇಲ್ಲ. ಅವಕಾಶಕ್ಕಾಗಿ ಅಲೆದಾಡುತ್ತಾ, ಅಲ್ಲಾಗುತ್ತಿದ್ದ ಅವಮಾನಗಳನ್ನು ನುಂಗಿಕೊಳ್ಳುತ್ತಾ ಸಾಗಿ ಬಂದ ರಂಗಸ್ವಾಮಿಯ ಪಾಲಿಗೆ ಆಪಲ್ ಕೇಕ್ ಚಿತ್ರದಲ್ಲಿನ ಪಾತ್ರ ಅದೃಷ್ಟದಂತೆಯೇ ಒಲಿದು ಬಂದಿದೆ. ಈ ಚಿತ್ರದಲ್ಲಿ ಆತ ಬಹು ಮುಖ್ಯವಾದ ಪಾತ್ರ ನಿರ್ವಹಿಸಿದ್ದಾನೆ.
ಈ ಪಾತ್ರದಲ್ಲಿನ ರಂಗಸ್ವಾಮಿಯ ನಟನೆ ಚಿತ್ರತಂಡದ ಮೆಚ್ಚುಗೆಗೂ ಪಾತ್ರವಾಗಿದೆ. ಈ ಕ್ಷಣಕ್ಕೂ ಆಟೋ ಓಡಿಸೋದನ್ನೇ ನೆಚ್ಚಿಕೊಂಡಿರುವ ರಂಗಸ್ವಾಮಿಗೆ ಆಪಲ್ ಕೇಕ್ ಚಿತ್ರ ದೊಡ್ಡ ಯಶ ತಂದುಕೊಡಲಿ. ಅಗಾಧ ಅವಕಾಶಗಳು ಆತನದ್ದಾಗಲೆಂದು ಹಾರೈಸೋಣ.
#
No Comment! Be the first one.