ಅವನಿಗೆ ನಯ-ವಿನಯವಿಲ್ಲ. ದೊಡ್ಡವರು ಚಿಕ್ಕವರು ಅನ್ನೋದನ್ನೆಲ್ಲಾ ನೋಡದೆ, ಯಾರ ಮುಂದೆ ಬೇಕಾದರೂ ಕಾಲಮೇಲೆ ಕಾಲು ಹಾಕಿಕೊಂಡು ಕೂರುವ, ಮೌನಾಚರಣೆಯ ಸಭೆಯಲ್ಲೂ ದೊಡ್ಡ ಸದ್ದಿನಲ್ಲಿ ಸೀನಿಬಿಡುವ, ಬೂಟಿಗೆ ಕುದುರೆ ಲಾಳ ಫಿಕ್ಸ್ ಮಾಡಿಕೊಂಡು ಸದ್ದು ಮಾಡಿಕೊಂಡು ನಡೆಯುವ, ಎದುರಿದ್ದವನು ಎಷ್ಟೇ ಬಲಶಾಲಿಯಾದರೂ ಮುಷ್ಟಿ ಹಿಡಿದು ಗುದ್ದುವ ಒರಟ… ಒಂಥರಾ ಮ್ಯಾನರ್ಸ್ ಇಲ್ಲದವನು!
ಬ್ಯಾಡ್ ಮ್ಯಾನರ್ಸನ್ನೇ ಬಾಡಿ ತುಂಬಾ ತುಂಬಿಕೊಂಡ ರುದ್ರೇಶ್ ಅಲಿಯಾಸ್ ರುದ್ರನ ತಂದೆ ಕಾಲವಾದಮೇಲೆ ಅದೇ ಪೊಲೀಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿರುತ್ತದೆ. ಅದೊಂದು ದಿನ ಸರ್ವೀಸ್ ಗನ್ ಕಳೆದುಕೊಂಡು, ಅದನ್ನು ಹುಡುಕುವ ನೆಪದಲ್ಲಿ ಗೋಡಾ ಎನ್ನುವ ಪ್ರದೇಶಕ್ಕೆ ಹೋಗುತ್ತಾನೆ. ಅಲ್ಲೊಂದು ವಿಲಕ್ಷಣ ಜಗತ್ತು ಅನಾವರಣಗೊಳ್ಳುತ್ತದೆ. ಅಲ್ಲಿ ಯಾರೆಂದರವರ ಕೈಯಲ್ಲೆಲ್ಲಾ ಕಂಟ್ರಿಮೇಡ್ ಪಿಸ್ತೂಲು ಆಟವಾಡುತ್ತಿರುತ್ತೆ. ಲಗೋರಿ ಆಡಲು ಕೂಡಾ ಪಿಸ್ತೂಲನ್ನೇ ಜೋಡಿಸಿಡುತ್ತಾರೆ. ಹೀಗೆ ಆಡಿ ಆಡಿಯೇ ಒಬ್ಬೊಬ್ಬರ ದೇಹದ ಸ್ಪೇರ್ ಪಾರ್ಟುಗಳು ಡಿಸೈನು ಡಿಸೈನಾಗಿ ಛಿದ್ರವಾಗಿರುತ್ತದೆ. ಪೊಲೀಸ್ ರುದ್ರ ಈ ಊರಿಗೇ ಬರಲು ಕಾರಣವೇನು? ಈ ವಿಕ್ಷಿಪ್ತ ಜಗತ್ತಿಗೂ ಇವನಿಗೂ ಏನು ಸಂಬಂಧ? ಹಾಗೆ ಗೋಡಾಕ್ಕೆ ಎಂಟ್ರಿ ಕೊಡುವ ರುದ್ರ ವಾಪಾಸು ಹೋಗುವಷ್ಟರಲ್ಲಿ ಏನೆಲ್ಲಾ ಘಟಿಸುತ್ತದೆ ಅನ್ನೋದು ʻಬ್ಯಾಡ್ ಮ್ಯಾನರ್ಸ್ʼ ಹುಟ್ಟಿಸುವ ಪ್ರಶ್ನೆಗಳು.
ಸೂರಿ ಅವರ ಹಿಂದಿನ ಟಗರು ಸಿನಿಮಾದಂತೆಯೇ ಇಲ್ಲೂ ಮೊದಲ ಭಾಗ ಅಬ್ರಾಪ್ಟ್ ಅನ್ನಿಸುತ್ತದೆ. ಮಧ್ಯಂತರದ ನಂತರ ಆ ಎಲ್ಲಾ ಗೊಂದಲಗಳು, ಬಂದು ಹೋದ ದೃಶ್ಯಗಳಿಗೆಲ್ಲಾ ಉತ್ತರ ಸಿಗುತ್ತಾ ಹೋಗುತ್ತದೆ. ಬರೀ ಚಿತ್ರಕತೆಯ ಮೂಲಕವೇ ಸಿನಿಮಾ ಸಾಗಿಬಿಡುತ್ತದಾ ಅನ್ನಿಸುವ ಹೊತ್ತಿಗೇ ಬಲವಾದ ಕಥೆಯೂ ಇದೆ ಅನ್ನೋದು ಅನಾವರಣಗೊಳ್ಳುತ್ತದೆ. ನಾಯಕಿಯ ಪಾತ್ರ ತುಂಬಾ ಚಿಕ್ಕದಾದರೂ ಇಡೀ ಸಿನಿಮಾಗೆ ಪೂರಕವಾಗಿದೆ. ಒಂದೇ ಒಂದು ದೃಶ್ಯವೂ ಅನಗತ್ಯ ಅನಿಸದಷ್ಟು ನೀಟಾಗಿ ನಿರೂಪಣೆ ಮಾಡಿದ್ದಾರೆ. ಸೂರಿಯವರ ಸಿನಿಮಾಗಳಲ್ಲಿ ಪಾತ್ರಗಳ ಹೆಸರೇ ವಿಚಿತ್ರವಾಗಿರುತ್ತವಲ್ಲಾ? ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಕೂಡಾ ಬೇಬಿ, ಮಗಾಯ್, ಫೀನಿಕ್ಸ್ ಮುಂತಾದ ಪಾತ್ರಗಳು ಬಂದು ಹೋಗುತ್ತವೆ. `ಮಹಾರಾಜ್’ ಎನ್ನುವ ಪಾತ್ರದ ಮೂಲಕ ಅಮೂರ್ತ ವಿಚಾರವನ್ನು ಹೇಳುವ ಪ್ರಯತ್ನವನ್ನು ಸೂರಿ ಮಾಡಿದ್ದಾರೆ. ಗಾಂಧೀ ತತ್ವ V/s ಗನ್ನು ಅನ್ನೋದು ಒಟ್ಟಾರೆ ಸಾರಾಂಶವಾ? ಅಥವಾ ಬೇರೆ ಇನ್ನೇನನ್ನೋ ಹೇಳಿದ್ದಾರಾ? ಅನ್ನೋದಷ್ಟೇ ಗೊಂದಲ.
ಸುರೇಂದ್ರ ನಾಥ್ ಮತ್ತು ಅಮ್ರಿ ಇಬ್ಬರೂ ಸೇರಿ ರಚಿಸಿರುವ ʻಬ್ಯಾಡ್ ಮ್ಯಾನರ್ಸ್ʼ ಚಿತ್ರದ ನಿರ್ದೇಶನದ ಕ್ರೆಡಿಟ್ಟು ಮಾತ್ರ ಸೂರಿ ತೆಗೆದುಕೊಂಡಿದ್ದಾರೆ. ಮಾಸ್ತಿ ಮಾತು ಬರೆದಿದ್ದಾರೆ ಅಂದಮೇಲೆ ಅದು ಮಾಮೂಲಿಯಾಗಿರಲು ಸಾಧ್ಯವಿಲ್ಲ. ನೋಡುಗರಿಗೆ ಮಜಾ ಕೊಡುತ್ತಲೇ ಅನೇಕ ರೂಪಕಗಳನ್ನು ಕಟ್ಟಿಕೊಡುವ ಸಂಭಾಷಣೆ ʻಬ್ಯಾಡ್ ಮ್ಯಾನರ್ಸ್ʼ ಚಿತ್ರದ ಜೀವಧ್ವನಿಯಾಗಿದೆ. ರವಿವರ್ಮ ಕಂಪೋಸ್ ಮಾಡಿರುವ ಫೈಟ್ ನೈಜವಾಗಿದೆ. ದೀಪು ಎಸ್ ಕುಮಾರ್ ಸಂಕಲನ ಸಖತ್ ಶಾರ್ಪಾಗಿದೆ. ಇಂಥದ್ದೊಂದು ಕಥಾವಸ್ತು, ಸೂರಿಯ ಮೇಕಿಂಗ್ ಸ್ಟೈಲನ್ನು ಅರ್ಥಮಾಡಿಕೊಂಡು ದೃಶ್ಯಗಳನ್ನು ಕ್ಯಾಪ್ಚರ್ ಮಾಡೋದು ಸುಮ್ಮನೆ ಮಾತಲ್ಲ. ಛಾಯಾಗ್ರಾಹಕ ಶೇಖರ್ ಎಸ್ ಇಡೀ ಸಿನಿಮಾಗೆ ಒಂದು ಫೀಲ್ ಕೊಟ್ಟಿದ್ದಾರೆ. ಅವರು ಬಳಸಿರುವ ಲೈಟಿಂಗ್ ನಿಜಕ್ಕೂ ʻಬ್ಯಾಡ್ ಮ್ಯಾನರ್ಸ್ʼನ ಅಂದ ಹೆಚ್ಚಿಸಿದೆ.
ಇಷ್ಟೆಲ್ಲಾ ಇರುವ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಹೇಗೆ ಕಾಣಿಸಿಕೊಂಡಿರಬಹುದು ಅನ್ನೋದು ಎಲ್ಲರ ಪ್ರಶ್ನೆಯಾಗಿರುತ್ತದೆ. ಅವರ ಈ ಹಿಂದಿನ ಹಾಗೂ ಮೊದಲ ಸಿನಿಮಾ ನೋಡುಗರನ್ನು ಕೆಟ್ಟ ರೀತಿಯಲ್ಲಿ ನಿರಾಸೆಗೊಳಿಸಿತ್ತು. ʻಬ್ಯಾಡ್ ಮ್ಯಾನರ್ಸ್ʼನ ಪಾತ್ರ ಅಭಿಗೆಂದೇ ಸೃಷ್ಟಿಸಿದಂತಿದೆ. ಅಭಿಯ ನಟನೆ, ಮ್ಯಾನರಿಸಮ್ಮು, ಪರ್ಸನಾಲಿಟಿ, ಮಾತಾಡುವ ಶೈಲಿ ಎಲ್ಲವೂ ಪಾತ್ರಕ್ಕೆ ಪೂರಕವಾಗಿ ಒಗ್ಗಿಕೊಂಡಿದೆ. ಪುಟ್ಟ ಪಾತ್ರದಲ್ಲಿ ಬಂದು ʻಹೋದರೂʼ, ರಚಿತಾರಾಮ್ ಮೆಚ್ಚುಗೆ ಪಡೆಯುತ್ತಾರೆ. ಕೇಶಪ್ಪನ ಪಾತ್ರದಲ್ಲಿ ನಟಿಸಿರುವ ಕಾರ್ತಿ ಸೌಂದರಮ್ ಈ ಚಿತ್ರದಿಂದ ಬೇರೆ ಲೆವೆಲ್ಲಿಗೆ ತಲುಪಲಿದ್ದಾರೆ. ಮಗಾಯ್ ಮತ್ತು ಫೀನಿಕ್ಸ್ ಕೂಡಾ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. ಮೈಸೂರು ಸಚ್ಚಿ ಕೂಡಾ ಮಹಾರಾಜ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಗೆ ಎಂದಿನಂತೆ ಖಾಕಿ ತೊಡಿಸಿದ್ದರೂ ಇಷ್ಟವಾಗುತ್ತಾರೆ.
ಉಮೇಶಣ್ಣನ ʻಸಾರಾಯಿʼ ಹಾಡು ಮಜಾ ಕೊಡುತ್ತದೆ. ಒಟ್ಟಾರೆ ʻಬ್ಯಾಡ್ ಮ್ಯಾನರ್ಸ್ʼ ಬ್ಲಾಕ್ ಬಸ್ಟರ್ ಅನ್ನಿಸಿಕೊಳ್ಳುವ ಎಲ್ಲ ಗುಣಗಳನ್ನು ಹೊಂದಿದೆ.
No Comment! Be the first one.