ʻಕಿಡಿʼ ಚಿತ್ರದ ನಂತರ ಬಹಳ ಕಥೆಗಳನ್ನು ಕೇಳಿದ್ದೇನೆ. ಸಾಕಷ್ಟು ಸಬ್ಜೆಕ್ಟುಗಳನ್ನು ನಾನೇ ತಿರಸ್ಕರಿಸಿದ್ದೇನೆ. 2021ರ ಹೊತ್ತಿಗೆ ದೊಡ್ಡ ಬಜೆಟ್ಟಿನ ಸಿನಿಮಾಗಳಲ್ಲಿ ನಟಿಸುವ ಪ್ಲಾನು ಕೂಡಾ ನಡೆಯುತ್ತಿತ್ತು. ಈ ನಡುವೆ ಅಭಿ ಅವರು ಹೇಳಿದ ಕಥೆ ತುಂಬಾ ಇಷ್ಟವಾಯಿತು. ಚಿತ್ರದ ಸಬ್ಜೆಕ್ಟು ಮತ್ತು ನಿರೂಪಣೆಯಲ್ಲಿ ಏನೋ ಹೊಸತನವಿದೆ ಅನ್ನಿಸಿತು. ಈ ಕಾರಣಕ್ಕಾಗಿ ʻ4ʼ ಚಿತ್ರವನ್ನು ಒಪ್ಪಿದ್ದೇನೆ. –ಭುವನ್ ಚಂದ್ರ, ನಾಯಕನಟ
ಸಾಹಸಸಿಂಹ ವಿಷ್ಣವರ್ಧನ್ ಅಭಿನಯದ ಸಿರಿವಂತ ಚಿತ್ರದಲ್ಲಿ ಮಗನ ಪಾತ್ರ ಮಾಡಿದ್ದ ಸ್ಫುರದ್ರೂಪಿ ಯುವಕ ಭುವನ್ ಚಂದ್ರ ಆ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಅವರ ಅಭಿನಯ ಗಮನಿಸಿದ ಬಹುತೇಕರು ಈ ಹುಡುಗ ನಾಯಕನಟನಾಗಿ ನೆಲೆ ನಿಲ್ಲೋದು ಗ್ಯಾರಂಟಿ ಎಂದೂ ಮಾತಾಡಿಕೊಂಡಿದ್ದರು. ಜನ ಅಂದುಕೊಂದಂತೆ ಭುವನ್ ಚಂದ್ರ ʻಕಿಡಿʼ ಚಿತ್ರದ ಮೂಲಕ ಹೀರೋ ಆಗಿ ಪರಿಚಯಗೊಂಡರು. ಈಗ ಭುವನ್ ಚಂದ್ರ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಕೂಡಾ ಚಿತ್ರೀಕರಣ ಹಂತದಲ್ಲಿದೆ.
4ರ ಸುತ್ತ… : ʻʻಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳೆನ್ನುವ ದಿಕ್ಕುಗಳನ್ನು ಪಾತ್ರವಾಗಿಸಿ ರೂಪಿಸಿರುವ ಭಿನ್ನ ಕತಾ ಹಂದರ ಈ ಚಿತ್ರದ್ದು. ಈ ಕಾರಣಕ್ಕೇ ಶೀರ್ಷಿಕೆಯನ್ನು 4 ಎಂದು ಇಡಲಾಗಿದೆ. ನಾಲ್ಕು ಜನರ ಪಾತ್ರಗಳು ಪ್ರಧಾನವಾಗಿರುವ ಥ್ರಿಲ್ಲರ್ ಜಾನರಿನ ಚಿತ್ರ 4. ವ್ಯಾಮೋಹ, ಅಧಿಕಾರ, ಸ್ನೇಹ, ಪ್ರೀತಿಯನ್ನು ಈ ನಾಲ್ಕು ಪಾತ್ರಗಳು ಪ್ರತಿಬಿಂಬಸಲಿವೆ. ತೀರಾ ಹೊಸದೆನ್ನುವ ಕಥೆ ಇದರಲ್ಲಿದೆ. ಈ ವರೆಗೆ ಯಾರೂ ಮಾಡಿರದ ಪ್ರಯತ್ನವನ್ನು ನಾವಿಲ್ಲಿ ಮಾಡುತ್ತಿದ್ದೇವೆ. ಪ್ರೀತಿಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ವ್ಯಾಮೋಹ, ಅಧಿಕಾರ ಮತ್ತು ಸ್ನೇಹದ ಪಾತ್ರಗಳೇನು ಅನ್ನೋದು ಹಂತಹಂತವಾಗಿ ತೆರೆದುಕೊಳ್ಳಲಿದೆ. ಲವ್, ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲ ಬಗೆಯ ಕಂಟೆಂಟನ್ನೂ ಸೇರಿಸಿ ಈ ಕಥೆ ರೂಪಿಸಿದ್ದೇನೆʼʼ ಎನ್ನುವುದು ಚಿತ್ರದ ನಿರ್ದೇಶಕ ಅಭಿ ಕನಸಿನ ಕವನ ಅವರ ವಿವರಣೆ.
ನಿರ್ದೇಶಕ ಅಭಿ ಕನಸಿನ ಸಿನಿಮಾ : ಸಿನಿಮಾ ನಿರ್ದೇಶಕನಾಗಬೇಕು ಅನ್ನೋದನ್ನೇ ಪರಮ ಗುರಿಯನ್ನಾಗಿಸಿಕೊಂಡು ಹತ್ತು ವರ್ಷಗಳ ಹಿಂದೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದವರು ಅಭಿ. ಭರತ್ ಕುಮಾರ್, ದಯಾಳ್ ಪದ್ಮನಾಭನ್, ಸುಮಂತ್ ಕ್ರಾಂತಿ, ಅಲೋನ್ ಚಿತ್ರದ ನಿರ್ದೇಶಕ ಜೆ.ಕೆ.ಎಸ್. ಅವರುಗಳೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಗೀತರಚನೆಕಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಜ್ಯೂಡಾ ಸ್ಯಾಂಡಿ, ಗುರುಕಿರಣ್, ಗಣೇಶ್ ನಾರಾಯಣ್ ಮುಂತಾದ ಸಂಗೀತ ನಿರ್ದೇಶಕರೊಟ್ಟಿಗೆಯೂ ಅಭಿ ಕಾರ್ಯ ನಿರ್ವಹಿಸಿದ್ದಾರೆ.
8ಎಂಎಂ, ತ್ರಯಂಬಕಂ, ಅರಣ್ಯಾನಿ, ಬರ್ಕಲೆ, ಕಾಲಚಕ್ರ ಮುಂತಾದ ಸಿನಿಮಾಗಳಿಗೆ ಅಭಿ ಹಾಡುಗಳನ್ನು ಬರೆದಿದ್ದಾರೆ. ಈ ನಡುವೆ ಪೂರ್ಣ ಪ್ರಮಾಣದ ನಿರ್ದೇಶಕನಾಗಬೇಕು ಎನ್ನುವ ಬಯಕೆಯಿಂದ ಅಭಿ ನಿರ್ಮಾಪಕರ ಹುಡುಕಾಟದಲ್ಲಿದ್ದರು. ಮೂಲತಃ ಉದ್ಯಮಿಯಾಗಿರುವ ಬಿ.ಜಿ. ಹೇಮಾವತಿ ಮತ್ತು ಅವರ ಪತಿ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತಾ ಬಯಸಿದ್ದವರು. ಈವರೆಗೆ ಸಾಕಷ್ಟು ಜನ ಕಥೆ ಹೇಳಿದ್ದರೂ ಅವು ನಿರ್ಮಾಪಕರಿಗೆ ಇಷ್ಟವಾಗಿರಲಿಲ್ಲ. ಇದನ್ನು ಗಮನಿಸಿದ ಅಭಿ ಅದೊಂದು ದಿನ ನಿರ್ಮಾಪಕರನ್ನು ಭೇಟಿಯಾಗಿ ತಾವು ಬರೆದಿಟ್ಟುಕೊಂಡಿದ್ದ ಕಥೆಯ ಸಾರಾಂಶವನ್ನು ಹೇಳಿದರಂತೆ. ಅಭಿ ಹೇಳಿದ ಸ್ಟೋರಿ ಲೈನ್ ಅನ್ನು ಅಪಾರವಾಗಿ ಇಷ್ಟಪಟ್ಟ ಬಿ.ಜಿ. ಹೇಮಾವತಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರಂತೆ. ಆ ಮೂಲಕ ಶುರುವಾದ ಸಿನಿಮಾ 4.
ಸಾಮಾನ್ಯವಾಗಿ ಸಿನಿಮಾ ಆರಂಭಗೊಳ್ಳುವಾಗ ಪೂಜೆ ನಡೆಸುವುದು ವಾಡಿಕೆ. ಆದರೆ ʻ4ʼ ಚಿತ್ರ ಒಂದು ಹಂತದ ಚಿತ್ರೀಕರಣೆ ಮುಗಿಸಿಕೊಂಡು ಬಂದು ಪೂಜೆ ಕಾರ್ಯವನ್ನು ನೆರವೇರಿಸಿದೆ. ಈ ಚಿತ್ರದಲ್ಲಿ ಭುವನ್ ಚಂದ್ರ, ದಿಶಾ ಪಾಂಡೆ, ಸಂಪತ್ ಕುಮಾರ್.ನ (ಕವಲುದಾರಿ), ಅರುಣ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಪೌಲ್ ಮುಸಾಸಿಜಿ ಛಾಯಾಗ್ರಾಹಕರಾಗಿದ್ದಾರೆ. ಉಗಾಂಡಾ ಮೂಲದ ಪೌಲ್ ಮುಸಾಸಿಜಿ ಗ್ರಾಫಿಕ್ಸ್ ಕಲಾವಿದರಾಗಿದ್ದವರು. 4 ಚಿತ್ರದ ಮೂಲಕ ಮೊದಲ ಬಾರಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿವಪ್ರಸಾದ್ ಯಾದವ್ ಸಂಕಲನ ಈ ಚಿತ್ರಕ್ಕಿದೆ. ಎಸ್ ಫ್ಯಾಕ್ಟರಿ ಸಂಸ್ಥೆಯಿಂದ ʻ4ʼ ಚಿತ್ರ ತಯಾರಾಗುತ್ತಿದೆ.
ಈಗಾಗಲೇ ಮಂಗಳೂರಿನ ಸುತ್ತ ಮುತ್ತ 17 ದಿನಗಳ ಕಾಲ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಉಳಿದ ಇಪ್ಪತ್ತು ದಿನಗಳ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲಿದೆ. ಎಲ್ಲ ಅಂದುಕೊಂಡಂತೇ ಆದರೆ, 2021ರ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಗೆ ತರುವ ಪ್ರಯತ್ನ ನಿರ್ಮಾಪಕಿ ಬಿ.ಜಿ. ಹೇಮಾವತಿ ಅವರದ್ದು.
No Comment! Be the first one.