ಬ್ರಹ್ಮಚಾರಿ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಹಾಡು ಮತ್ತು ಟ್ರೇಲರಿನ ಕಾರಣಕ್ಕೆ ಜನ ಈ ಚಿತ್ರವನ್ನು ನೋಡಲೇಬೇಕು ಅಂತಾ ತೀರ್ಮಾನಿಸಿದ್ದಾರೆ. ಈ ವಾರ ಮುಕ್ಕಾಲು ಡಜನ್ ಸಿನಿಮಾ ಬಿಡುಗಡೆಯಾಗುತ್ತಿದ್ದರೂ ಜನರ ಲಿಸ್ಟಿನಲ್ಲಿರುವ ಮೊದಲ ಸಿನಿಮಾ ಬ್ರಹ್ಮಚಾರಿ. ಈ ಚಿತ್ರದ ಕುರಿತಾಗಿ ನಾಯಕಿ ಅದಿತಿ ಪ್ರಭುದೇವ ಅನಿಸಿಕೆ ಇಲ್ಲಿದೆ... ನಿರೂಪಣೆ : ಸುಮ ಜಿ.
ಬ್ರಹ್ಮಚಾರಿ ಅನ್ನೋ ಹೆಸರಲ್ಲೇ ಒಂದು ಕಿಕ್ ಇದೆ ಅಂತಲೇ ಹೇಳಬಹುದು. ಈ ಚಿತ್ರ ಈಗಾಗಲೇ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಆರಂಭ ಆರಂಭ ಮತ್ತು ಹಿಡ್ಕ ಹಿಡ್ಕ ಹಾಡುಗಳು ಸಖತ್ ವೈರಲ್ ಆಗಿವೆ. ಸಂಗೀತ ನಿರ್ದೇಶಕ ಧರ್ಮ ವಿಶ್ ಅವರು ಪ್ರತಿಭಾವಂತ ಅನ್ನೋದನ್ನು ಈ ಹಾಡುಗಳ ಮೂಲಕ ನಿರೂಪಿಸಿದ್ದಾರೆ. ಬಹಳಷ್ಟು ಜನ ಸಿನಿಮಾ ನೋಡುವುದಕ್ಕೆ ಕಾತರರಾಗಿದ್ದೇವೆಂದು ಮೆಸೇಜ್ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಉದಯ್ ಮೆಹ್ತಾ ರವರ ಪ್ರೊಡಕ್ಷನ್ನಲ್ಲಿ ನನ್ನ ೨ನೇ ಸಿನಿಮಾ ಇದು. ಬೆಳವಣಿಗೆಗಾಗಲೀ, ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾಗಲೀ ಕಲಾವಿದರಿಗೆ ಒಳ್ಳೆಯ ಪ್ರೊಡಕ್ಷನ್ನಲ್ಲಿ ಅಭಿನಯಿಸುವುದು ಬಹಳ ಮುಖ್ಯ. ಆ ಅದೃಷ್ಟ ಈ ಚಿತ್ರದ ಮೂಲಕ ನನಗೆ ಮತ್ತೊಮ್ಮೆ ಒದಗಿಬಂದಿದೆ.
ಇದು ನನ್ನ ಮೊದಲನೇ ಕಾಮಿಡಿ ಸಿನಿಮಾ. ರಿಯಲ್ ಲೈಫ್ನಲ್ಲಿ ತುಂಟಾಟ ಮಾಡೋದಕ್ಕೂ, ಸಿನಿಮಾದಲ್ಲಿ ಆ ತುಂಟಾಗಳನ್ನ ಸ್ಕ್ರೀನ್ ಪ್ರೆಸೆನ್ಸ್ನಲ್ಲಿ ಯಾವುದೇ ರೀತಿಯ ಧಕ್ಕೆ ಬರದಂತೆ ನಟಿಸುವುದಕ್ಕೂ ಸಾಕಷ್ಟು ಭಿನ್ನತೆ ಇರುತ್ತದೆ. ಇದರ ಬಗ್ಗೆ ಬಹಳ ಒಳ್ಳೆಯ ರೀತಿಯಲ್ಲಿ ತಿಳಿಸಿಕೊಟ್ಟವರು, ಒಬ್ಬ ಗುರು ಸ್ಥಾನದಲ್ಲಿ ನಿಂತು ನಮ್ಮನ್ನು ಮುನ್ನಡೆಸಿದವರು ನಿರ್ದೇಶಕ ಚಂದ್ರಮೋಹನ್. ಅಭಿನಯ ಚತುರ ಸತೀಶ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಈ ಒಂದೊಳ್ಳೆ ಅನುಭವವನ್ನು ಎಂದಿಗೂ ಮರೆಯೋಲ್ಲ. ಸತೀಶ್ ಅವರ ಎಕ್ಸ್ಪ್ರೆಷನ್ ನೋಡಿ ನಗದೇ ಅಭಿನಯಿಸುವುದು ಬಹಳ ಕಷ್ಟವಾಯಿತು. ದತ್ತು ಮಾವ ಒಬ್ಬ ಮಹಾನ್ ನಟ. ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಒಂದು ಹಬ್ಬ. ಅಚ್ಯುತ್, ದತ್ತಣ್ಣ, ಪದ್ಮಜಾರಾವ್, ಬಿರಾದರ್, ಶಿವು ಕೆ ಆರ್ ಪೇಟೆ ಈ ಎಲ್ಲ ಅದ್ಭುತ ಕಲಾವಿದರೊಂದಿಗೆ ಅಭಿನಯಿಸಿರುವುದು ಖುಷಿ ತಂದಿದೆ.
ಇನ್ನು ಈ ಸಿನಿಮಾದ ಕಥೆ ಯಾವುದಾದರೊಂದು ರೀತಿಯಲ್ಲಿ ಎಲ್ಲರಿಗೂ ಅದರಲ್ಲೂ ಹೆಣ್ಣು ಮಕ್ಕಳಿಗೆ ಕನೆಕ್ಟ್ ಆಗುವಂತದ್ದು. ಪ್ರತಿಯೊಂದು ಪಾತ್ರವೂ ನ್ಯಾಚುರಲ್ ಆಗಿದೆ. ನಮ್ಮ ಲೈಫ್ನಲ್ಲಿ ಟೆನ್ಷನ್ಗಳನ್ನು ಮರೆತು ಎರಡೂವರೆ ಗಂಟೆ ನೆಮ್ಮದಿಯಾಗಿ ಕುಳಿತು ಖುಷಿಯಾಗಿ ನೋಡುವಂತಹ ಸಿನಿಮಾ ಬ್ರಹ್ಮಚಾರಿ. ಗೌರಿ-ಗಣೇಶ, ಎದುರು ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ, ಹೆಂಡ್ತಿಗೇಳ್ಬೇಡಿ ಈ ರೀತಿಯ ಚಿತ್ರಗಳನ್ನು ಎಷ್ಟು ಬಾರಿ ನೋಡಿದ್ರೂ ಬೇಸರವೆನಿಸುವುದಿಲ್ಲ, ನಮ್ಮನ್ನು ಪದೇ ಪದೇ ನಗಿಸುವಂತ ಹಾಗೂ ಮತ್ತೆ ಮತ್ತೆ ನೋಡಬೇಕೆನಿಸುವಂತಹ ಚಿತ್ರಗಳು. ಈ ಲಿಸ್ಟ್ಗೆ ಸೇರುವಂತದ್ದು ನಮ್ಮ ಬ್ರಹ್ಮಚಾರಿ ಸಿನಿಮಾ.
ದುಡ್ಡಿಗಿಂತ ಹೆಚ್ಚಾಗಿ ಎರಡೂವರೆ ಗಂಟೆ ನಿಮ್ಮ ಸಮಯವನ್ನು ಕೊಟ್ಟಿರುತ್ತೀರಿ. ಈ ಸಮಯ ನಿಮಗೆ ಇರುವ ೧೦% ಒತ್ತಡವನ್ನು ಕಡಿಮೆ ಮಾಡಿದೆ ಅಂದರೆ ನಿಮ್ಮ ಸಮಯಕ್ಕೆ ನಾವು ಕೊಡುವ ಬೆಲೆ. ಖಂಡಿತ ಆ ಬೆಲೆ ನಾವು ಕೊಟ್ಟಿದ್ದೇವೆ ಅಂತ ಹೇಳುತ್ತೇನೆ. ಪ್ರತಿಯೊಂದು ಕನ್ನಡ ಸಿನಿಮಾ ನೋಡಿ ಉಳಿಸಿ-ಬೆಳೆಸಬೇಕಾದ ಜವಾಬ್ದಾರಿ ನಮ್ಮ ಕನ್ನಡಿಗರದ್ದು. ದಯವಿಟ್ಟು ಎಲ್ಲರೂ ಈ ಸಿನಿಮಾ ನೋಡಿ ಪ್ರೋತ್ಸಾಹಿಸಿ.