ಶೀರ್ಷಿಕೆಗೆ ತಕ್ಕಂತೆ ರೋಚಕ ಪಯಣದ ಕಥೆ ಹೊಂದಿರುವ ಚಿತ್ರ ಚೇಜ಼್. ಬೆಂಗಳೂರಿನಂತಹ ಮೆಟ್ರೋ ಪಾಲಿಟಿನ್ ನಗರಗಳಲ್ಲಿ ರಾತ್ರಿ ಸಮಯ ಕ್ಯಾಬ್ ಸೇರಿದಂತೆ ಇತರೆ ಬಾಡಿಗೆ ವಾಹನಗಳು ಎಷ್ಟು ಸುರಕ್ಷಿತ ಎನ್ನುವ ವಿಷಯವೇ ಚಿತ್ರದ ಪ್ರಧಾನ ಕಥಾ ಹಂದರ. ಅದರೊಂದಿಗೆ ಪ್ರತಿಯೊಬ್ಬರ ಬದುಕಿನಲ್ಲಿ ಅಡೆತಡೆಗಳು ಬಂದಾಗ ಅವುಗಳನ್ನೆಲ್ಲ ಹೇಗೆ ಎದುರಿಸಿಕೊಂಡು ಹೋಗಬೇಕು ಎನ್ನುವ ಸಂದೇಶ ಈ ಚಿತ್ರದಲ್ಲಿ ಇದೆಯಂತೆ. ಅದನ್ನೇ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ಹಂದರದ ಮೂಲಕ ರೂಪಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಲೋಕ್ ಶೆಟ್ಟಿ.
ರಾಧಿಕಾ ನಾರಾಯಣ್ ಇಲ್ಲಿ ಪೊಲೀಸ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಇಲ್ಲಿ ನಾನು ಪೊಲೀಸ್ ಟ್ರೈನಿಂಗ್ ಅಕಾಡೆಮಿಯಲ್ಲಿರುವ ಹುಡುಗಿ. ದೊಡ್ಡ ಪೊಲೀಸ್ ಆಫೀಸರ್ ಆಗ್ಬೇಕು ಎನ್ನುವುದು ನನ್ನಾಸೆ. ಆ ಹಂತದಲ್ಲಿ ನನ್ನ ಸುತ್ತ ಒಂದಷ್ಟು ಘಟನೆಗಳು ನಡೆದು ಹೋಗುತ್ತವೆ. ಅಲ್ಲಿ ನಾನು ಹೇಗೆ ಎಂಟ್ರಿ ಆಗುತ್ತೇನೆ, ಅಲ್ಲಿಂದ ಮುಂದೇನಾಗುತ್ತದೆ ಎನ್ನುವುದು ನನ್ನ ಪಾತ್ರ’ ಅಂತಾ ರಾಧಿಕಾ ಹೇಳಿಕೊಂಡಿದ್ದಾರೆ. ಹಿರಿಯ ನಿರ್ದೇಶಕರಾದ ಭಗವಾನ್, ಓಂ ಸಾಯಿ ಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅತಿಥಿಗಳಾಗಿ ಬಂದು ಆಡಿಯೋ ಸೀಡಿ ಬಿಡುಗಡೆ ಗೊಳಿಸಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ, ಅನಂತ ರಾಜ ಅರಸ್ ಛಾಯಾಗ್ರಹಣದ ಈ ಚಿತ್ರಕ್ಕಿದೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಚೇಸ್ ಚಿತ್ರಕ್ಕೆ ಮಂಗಳೂರಿನವರೇ ಆದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು ಹಾಗೂ ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕ.
ಸದ್ಯದ ವಿಶೇಷವೆಂದರೆ ಬಿಡುಗಡೆಗೊಂಡಿರುವ ಚೇಜ಼್ ಚಿತ್ರದ ಟೀಸರ್ ಸಖತ್ ಸೌಂಡು ಮಾಡುತ್ತಿದೆ. ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡುತ್ತಿರುವುದು ‘ಈ ಚಿತ್ರದಲ್ಲಿ ಏನೇ ವಿಶೇಷತೆಯಿದೆ’ ಎನ್ನುವುದನ್ನು ಸಾರಿ ಹೇಳುವಂತಿದೆ.