ಉಪೇಂದ್ರ ಮತ್ತು ಪ್ರಿಯಾಂಕಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಆದ ಗೌರವ, ಸ್ಥಾನಮಾನಗಳಿವೆ. ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ, ಇಡೀ ಭಾರತೀಯ ಚಿತ್ರರಂಗ ಇತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ-ನಟ ಉಪೇಂದ್ರ. ಇನ್ನು ಅವರ ಪತ್ನಿ ಪ್ರಿಯಾಂಕಾ ಕೂಡಾ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಟಿ. ಸದ್ಯ ಪ್ರಿಯಾಂಕಾ ಮೇಡಮ್ಮು ಮಮ್ಮಿ ಲೋಹಿತ್ ನಿರ್ದೇಶನದ ದೇವಕಿ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ನಾಡಿದ್ದು ಜುಲೈ 5ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರನ್ನು ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣ ಅನ್ನೋ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರಲ್ಲಾ? ಅದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತಂತೆ. ಅಲ್ಲಿಗೇ ಚಿತ್ರತಂಡವನ್ನು ಬರಹೇಳಿ ಟ್ರೇಲರ್ ರಿಲೀಸ್  ಮಾಡಿದ್ದಾರೆ. ಹೊಸದಾಗಿ ಇಂಡಸ್ಟ್ರಿಗೆ ಬಂದವರು ದೊಡ್ಡ ಹೀರೋಗಳು ಎಲ್ಲಿರುತ್ತಾರೋ ಅಲ್ಲಿಗೇ ಹೋಗಿ ಟ್ರೇಲರ್ ರಿಲೀಸ್ ಮಾಡಿಕೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಪ್ರಿಯಾಂಕ ಉಪೇಂದ್ರರಂಥಾ ಹೆಸರಾಂತ ನಟಿಯೊಬ್ಬರು ಯಾವ ದೊಡ್ಡಸ್ಥಿಕೆಗೂ ಜಾಗ ಕೊಡದೆ ರಕ್ಷಿತ್ ಶೆಟ್ಟಿ ತಿಳಿಸಿದ ಜಾಗಕ್ಕೇ ಹೋಗಿ ಟ್ರೇಲರ್ ಬಿಡುಗಡೆಯಲ್ಲಿ ಭಾಗಿಯಾಗಿದ್ದಾರೆ. ದೇವಕಿ ಚಿತ್ರತಂಡವನ್ನು ತಾವಿದ್ದ ಕ್ಯಾರವಾನ್’ಗೆ ಕರೆಸಿಕೊಂಡ ರಕ್ಷಿತ್ ಲ್ಯಾಪ್ ಟಾಪಿನ ಬಟನ್ನು ಒತ್ತುವ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ದರ್ಶನ್, ಸುದೀಪ್, ಪುನೀತ್ ತಂಥಾ ಸ್ಟಾರ್’ಗಳು ತಾವು ರಿಲೀಸ್ ಮಾಡಿದ ಟೀಸರು, ಟ್ರೇಲರುಗಳ ಲಿಂಕನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಶೇರ್ ಮಾಡಿ ಚಿತ್ರತಂಡಗಳನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಈಗ ಜಗತ್ತಿನೆಲ್ಲೆಡೆ ಶ್ರೀಮನ್ನಾರಾಯಣ ಚಿತ್ರದ ಹವಾ ಎದ್ದಿರುವುದರಿಂದ ಮೊದಲೇ ರಕ್ಷಿತ್ ಶೆಟ್ಟಿ `ನಾನು ಟ್ರೇಲರನ್ನು ಶೇರ್ ಮಾಡುವುದಿಲ್ಲ’ ಎಂದು ಹೇಳಿದ್ದರಂತೆ. ಆದರೆ ಉಪೇಂದ್ರ ಅವರ ಅಭಿಮಾನಿಗಳು ವಾಸ್ತವ ತಿಳಿಯದೇ ಅನವಶ್ಯಕವಾಗಿ ಬೇಸರಗೊಂಡಿದ್ದಾರೆ.

“ಪುಷ್ಕರ್ ಸರ್ ಮತ್ತು ರಕ್ಷಿತ್ ಸರ್ ನಮಗೆ ಮೊದಲೇ ಎಲ್ಲವನ್ನೂ ತಿಳಿಸಿದ್ದರು. ರಕ್ಷಿತ್ ಅವರಿಂದಲೇ ಟ್ರೇಲರ್ ರಿಲೀಸ್ ಮಾಡಿಸಬೇಕು ಎನ್ನುವುದು ನಮ್ಮ ತಂಡದ ಬಯಕೆಯಾಗಿತ್ತು. ಅಂದುಕೊಂಡಂತೇ ನಡೆದಿದೆ ಕೂಡಾ. ರಕ್ಷಿತ್ ಸರ್ ತುಂಬಾ ಶಿಸ್ತಿನ ವ್ಯಕ್ತಿ. ನುಡಿದಂತೆ ನಡೆಯುವವರು. ನಮ್ಮ ದೇವಕಿ ಚಿತ್ರತಂಡಕ್ಕೆ ಮಾತು ಕೊಟ್ಟಂತೇ ಟ್ರೇಲರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ರಕ್ಷಿತ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಬೇರೆ ರೀತಿಯ ವದಂತಿಗಳಿಗೆ ಉಪ್ಪಿ ಸರ್ ಅಭಿಮಾನಿಗಳಾಗಲಿ, ಯಾರೇ ಆಗಲಿ ಕಿವಿಕೊಡಬೇಡಿ” ಎಂದು ದೇವಕಿ ಚಿತ್ರದ ನಿರ್ದೇಶಕ ಲೋಹಿತ್ “ಸಿನಿಬಜ್”ಗೆ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ದೇವಕಿ ಟೀಮು ಪರಸ್ಪರ ಅನ್ಯೋನ್ಯವಾಗಿದ್ದಾರೆ. ಇವರ ಬಾಂಧವ್ಯಕ್ಕೆ ಹುಳಿ ಹಿಂಡುವ ಉದ್ದೇಶದಿಂದಲೋ ಏನೋ ಕಿಡಿಕೇಡಿಗಳು ಉಪ್ಪಿ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಿದ್ದಾರೆ. ದಯಮಾಡಿ ರಿಯಲ್ ಸ್ಟಾರ್ ಉಪೇಂದ್ರ ಅವರ ಆರಾಧಕರು ತೂರಿಬರುತ್ತಿರುವ ಗಾಸಿಪ್ಪುಗಳಿಗೆ `ಉಫ್’ ಎಂದು ರಕ್ಷಿತ್ ಶಟ್ಟಿ ಮತ್ತು ದೇವಕಿ ಸಿನಿಮಾಗೊಂದು ಸಲ `ಜೈ’ ಅಂದುಬಿಡಿ. ಮನಮಿಡಿಯುವಂತೆ ಮೂಡಿಬಂದಿರುವ ದೇವಕಿಯ ಟ್ರೇಲರು ಪ್ರತಿಯೊಬ್ಬರಿಗೂ ತಲುಪುವ ತನಕ ಶೇರ್ ಮಾಡಿ. ಅಷ್ಟು ಸಾಕು…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದೊಸ್ತಾನ 2 ನಲ್ಲಿ ರೊಮ್ಯಾನ್ ಮಾಡಲಿದ್ದಾರೆ ಜಾಹ್ನವಿ ಕಪೂರ್!

Previous article

ಅರ್ಜುನ್ ಕಪೂರ್ ಜನುಮದಿನಕ್ಕೆ ಸರ್ ಫ್ರೈಸ್ ಗಿಫ್ಟ್ ನೀಡಿದ ಮಲೈಕಾ!

Next article

You may also like

Comments

Leave a reply

Your email address will not be published. Required fields are marked *